ಅಹ್ಮದ್‌ನಗರ : ಪೌರಾಡಳಿತ ಚುನಾವಣಾ ಫಲಿತಾಂಶ ಪ್ರಕಟಗೊಂಡ ಕೆಲವೇ ತಾಸುಗಳ ಒಳಗೆ ಶಿವಸೇನೆಯ ಇಬ್ಬರು ನಾಯಕರಾದ ಸಂಜಯ್ ಕೋಟ್ಕರ್ (35) ಮತ್ತು ವಸಂತ ಆನಂದ್ ಥುಬೆ (40) ಅವರನ್ನು ಮಹಾರಾಷ್ಟದ ಅಹ್ಮದ್‌ನಗರದಲ್ಲಿ ಕಳೆದ ಶನಿವಾರ ಗುಂಡಿಕ್ಕಿ ಸಾಯಿಸಲಾಯಿತು.
ಈ ಘಟನೆಯನ್ನು ಅನುಸರಿಸಿ ಪೊಲೀಸರು ನಿನ್ನೆ ಭಾನುವಾರ ನ್ಯಾಶನಲಿಸ್ಟ್ ಪಕ್ಷದ (ಎನ್‌ಸಿಪಿ) ಶಾಸಕ ಸಂಗ್ರಾಮ್ ಜಗತಾಪ್, ಶಂಕಿತ ಶೂಟರ್ ಮತ್ತು ಇನ್ನಿಬ್ಬರು ವ್ಯಕ್ತಿಗಳನ್ನು ಕೊಲೆ ಕೃತ್ಯಕ್ಕೆ ಸಂಬಂಧಿಸಿ ಬಂಧಿಸಿದರು.
ಶನಿವಾರ ಸಂಜೆ 5.15ರ ಸುಮಾರಿಗೆ ಮೋಟಾರ್ ಬೈಕಿನಲ್ಲಿ ಬಂದಿದ್ದ ಹಂತರು ಕೋಟ್ಕರ್‌ಮತ್ತು ಥುಬೆ ಅವರನ್ನು ಅಹ್ಮದ್‌ನಗರದ ಕೆಡಗಾಂವ್ ನಲ್ಲಿ ಗುಂಡಿಕ್ಕಿ ಸಾಯಿಸಿದರು. ಇದಕ್ಕೆ ಮುನ್ನ ಬೆಳಗ್ಗೆ ಪ್ರಕಟಗೊಂಡಿದ್ದ ಪೌರಾಡಳಿತೆಯ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌ನ ವಿಶಾಲ್ ಕೋಟ್ಕರ್ ಅವರು ಶಿವಸೇನೆಯ ವಿಜಯ್ ಪಠಾರೆ ಅವರನ್ನು 454 ಮತಗಳ ಅಲ್ಪ ಅಂತರದಲ್ಲಿ ಸೋಲಿಸಿದ್ದರು.
ಇಬ್ಬರು ಶಿವಸೇನಾ ನಾಯಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಸಿಪಿ ಶಾಸಕ ಸಂಗ್ರಾಮ್ ಜಗತಾಪ್33, ಬಾಳಾಸಾಹೇಬ್ ಕೋಟ್ಕರ್ 59, ಸಂದೀಪ್ ಗುಂಜಾಲ್ 28 ಮತ್ತು ಭಾನುದಾಸ್ ಕೋಟ್ಕರ್ 44 ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
ನಾಲ್ವರೂ ಬಂಧಿತರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಅವರನ್ನು ಎ.12ರ ತನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಪೊಲೀಸರು ಈ ಕೊಲೆ ಕೃತ್ಯಕ್ಕೆ ಸಂಬಂಧಿಸಿ ಇನ್ನೂ ಇಬ್ಬರು ಶಾಸಕರಾದ ಎನ್‌ಸಿಪಿಯ ಅರುಣ್ ಜಗತಾಪ್ ಮತ್ತು ಬಿಜೆಪಿಯ ಶಿವಾಜಿ ಕರ್ದಿಲೆ ವಿರುದ್ಧವೂ ಕೇಸು ದಾಖಲಿಸಿಕೊಂಡಿದ್ದಾರೆ.