Advertisement

ಶಿರಾಡಿ ಘಾಟ್‌ ಅಭಿವೃದ್ಧಿಗೆ 2 ಹಂತದ ಯೋಜನೆ: ಸಚಿವ ನಿತಿನ್‌ ಗಡ್ಕರಿ

11:04 AM Sep 10, 2022 | Team Udayavani |

ಬೆಂಗಳೂರು: ಕರಾವಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌ ರಸ್ತೆಯ ಅಭಿವೃದ್ಧಿಗೆ ಎರಡು ಹಂತದ ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ ಚುತುಷ್ಪಥ ರಸ್ತೆ ನಿರ್ಮಾಣ ಹಾಗೂ ಸುರಂಗ ಮಾರ್ಗ ಕೊರೆಯುವ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿರಾಡಿ ಘಾಟ್‌ ರಸ್ತೆ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚಚಿÕಲಾಗಿದೆ. ಮೊದಲ ಹಂತದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ಎರಡನೇ ಹಂತದಲ್ಲಿ ಸುರಂಗ ಮಾರ್ಗ ಕೊರೆಯಲು ಯೋಜಿಸಲಾಗಿದೆ. ಸುರಂಗ ಮಾರ್ಗ ಕೊರೆಯಲು ರೈಲ್ವೆ ಇಲಾಖೆಯೂ ಬಯಸಿದರೆ ಇಬ್ಬರೂ ಸೇರಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಇದರಿಂದ ವೆಚ್ಚ ಕಡಿಮೆಯಾಗಲಿದೆ ಎಂದು ಹೇಳಿದರು.

ಬೇರೆ ಕಂಪನಿಯಿಂದ ಫ್ಲೈಓವರ್‌ ದುರಸ್ತಿ: ತುಮಕೂರು ರಸ್ತೆಯ ಫ್ಲೈ ಓವರ್‌ ಹಾಲಿ ನಿರ್ಮಾಣ ಮಾಡಿರುವ ನವಯುಗ ಕಂಪನಿ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಬೇರೊಂದು ಕಂಪನಿಗೆ ಗುತ್ತಿಗೆ ನೀಡಿ ಫ್ಲೈಓವರ್‌ ದುರಸ್ತಿ ಮಾಡಲಾಗುವುದು ಎಂದು ಗಡ್ಕರಿ ಹೇಳಿದರು.

ಫ್ಲೈಓವರ್‌ನಲ್ಲಿ ಆಗಿರುವ ಲೋಪಕ್ಕೆ ನಾನು ಜನರ ಕ್ಷಮೆ ಕೋರುತ್ತೇನೆ. ಪ್ರಸ್ತುತ ಲಘು ವಾಹನಗಳ ಸಂಚಾರ ಮಾತ್ರ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಶೀಘ್ರವೇ ಬೇರೆ ಕಂಪನಿಗೆ ಟೆಂಡರ್‌ ನೀಡಿ, ಆಗಿರುವ ಲೋಪ ಸರಿಪಡಿಸಲಾಗುವುದು ಎಂದು ಹೇಳಿದರು.

ಸೀಟ್‌ ಬೆಲ್ಟ್ ಕಡ್ಡಾಯ: ಕಾರುಗಳಲ್ಲಿ ಹಿಂಬದಿ ಸವಾರರಿಗೂ ಸೀಟ್‌ ಬೆಲ್ಟ್ ಕಡ್ಡಾಯ ಮಾಡಲಾಗುವುದು. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಸಂಕಲ್ಪ ಮಾಡಿದ್ದು, 2024 ಡಿಸೆಂಬರ್‌ ಒಳಗೆ ದೇಶದಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳನ್ನು ಶೇ.50 ಕಡಿಮೆ ಮಾಡಲು ಗುರಿ ಹೊಂದಲಾಗಿದೆ ಎಂದರು.

Advertisement

ಪ್ರಸ್ತುತ ಪ್ರತಿ ವರ್ಷ ಸುಮಾರು 5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಮೃತರಾಗುತ್ತಿದ್ದು, ಈ ಸಂಬಂಧ ಜನ ಜಾಗೃತಿ ಮೂಡಿಸಲು ಬಾಲಿವುಡ್‌ ನಟರಾದ ಅಮಿತಾಬ್‌ ಬಚ್ಚನ್‌ ಹಾಗೂ ಅಕ್ಷಯ್‌ ಕುಮಾರ್‌ ಉಚಿತವಾಗಿ ಜಾಹೀರಾತು ನೀಡುತ್ತಿದ್ದಾರೆ. ಮಾಧ್ಯಮಗಳೂ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ಟೋಲ್‌ ಪರಿಹಾರಕ್ಕೆ ಚಿಂತನೆ: ಟೋಲ್‌ಗ‌ಳಲ್ಲಿ ಅನಗತ್ಯ ವಿಳಂಬ ತಪ್ಪಿಸಲು ಹೊಸ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಐದು ಸ್ಟಾರ್ಟ್‌ಪ್‌ಗ್ಳ ಜೊತೆ ಚರ್ಚೆ ನಡೆಸಲಾಗಿದ್ದು, ನಂಬರ್‌ ಪ್ಲೇಟ್‌ಗಳ ಮೂಲಕವೇ ಟೋಲ್‌ ಸಂಗ್ರಹವಾಗುವ ವ್ಯವಸ್ಥೆ ಜಾರಿಗೆ ಚಿಂತನೆ ನಡೆಸಲಾಗುತ್ತಿದೆ. ಒಂದು ವೇಳೆ, ಆ ರೀತಿ ಯೋಜನೆ ಜಾರಿಯಾದರೆ, ಟೋಲ್‌ಗೇಟ್‌ಗಳಲ್ಲಿ ವಾಹನ ನಿಲ್ಲುವ ವ್ಯವಸ್ಥೆ ತಪ್ಪಲಿದೆ ಎಂದರು.

ಕರಾವಳಿ ಭಾಗದಲ್ಲಿ ಸಂಪರ್ಕ ಕಲ್ಪಿಸುವ ಸಾಗಾರ ಮಾಲಾ, ಭಾರತ ಮಾಲಾ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು ಈ ಯೋಜನೆಗಳ ಮೂಲಕ ಭಾರತವನ್ನು ಎಲ್ಲ ಮೂಲಗಳಿಂದ ಸಂಪರ್ಕಿಸಲು ಸಾಧ್ಯವಾಗುತ್ತದೆ. ಅಲ್ಲದೇ, ರಾಜ್ಯಗಳಲ್ಲಿ ಉಂಟಾಗುವ ಪ್ರವಾಹ ಕಡಿಮೆ ಮಾಡಲು ನದಿ ಜೋಡನೆ ಯೋಜನೆ ಅತ್ಯಂತ ಸೂಕ್ತವಾದದ್ದು ಎಂದು ಗಡ್ಕರಿ ಹೇಳಿದರು.

ಬೆಂಗಳೂರು-ಮುಂಬೈ 6 ಗಂಟೆ ಪ್ರಯಾಣ
ಉತ್ತರ ದಕ್ಷಿಣ ಸಂಪರ್ಕ ಹೆಚ್ಚಿಸಲು ಮುಂಬೈ- ಬೆಂಗಳೂರು ಹಾಗೂ ಚೆನೈ- ಬೆಂಗಳೂರು ಗ್ರೀನ್‌ ಕಾರಿಡಾರ್‌ ಯೋಜನೆ ಜಾರಿಗೊಳಿಸಲಾಗುತ್ತಿದೆ. ಸುಮಾರು 35,000 ಕೋಟಿ ವೆಚ್ಚದ ಈ ಯೋಜನೆ 2024ರಲ್ಲಿ ಆರಂಭಿಸಲಾಗುವುದು. ಈ ಯೋಜನೆ ಅನುಷ್ಠಾನಗೊಂಡರೆ ಮುಂಬೈನಿಂದ ಬೆಂಗಳೂರಿಗೆ ಬರಲು ಕೇವಲ 6 ಗಂಟೆ ಸಮಯ ಸಾಕಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ಅದೇ ರೀತಿ ಬೆಂಗಳೂರು-ಚೆನೈ ಎಕ್ಸ್‌ಪ್ರೆಸ್‌ ಹೈವೇ ಗ್ರೀನ್‌ ಕಾರಿಡಾರ್‌ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದ್ದು, ಈ ಯೋಜನೆಯಿಂದ ಎರಡೂ ನಗರಗಳ ನಡುವಿನ ಅಂತರ ಸುಮಾರು 40 ಕಿ.ಮೀ. ಕಡಿಮೆಯಾಗಲಿದೆ. ಈ ಯೋಜನೆ ಜಾರಿಯಾದರೆ 2 ಗಂಟೆಯಲ್ಲಿ ಚೆನೈನಿಂದ ಬೆಂಗಳೂರು ತಲುಪಬಹುದು. ಇದು ಎರಡೂ ನಗರಗಳ ನಡುವೆ ಸಾಕಷ್ಟು ಉದ್ಯಮ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next