Advertisement

2 ಗೆಲುವಿಗೆ 2 ತಲೆದಂಡ

11:32 PM Dec 09, 2019 | Team Udayavani |

ಬೆಂಗಳೂರು: ಉಪ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕರ ವಿರೋಧವನ್ನೂ ಲೆಕ್ಕಿಸದೇ ದಿನೇಶ್‌ ಗುಂಡೂರಾವ್‌ ಅವರನ್ನು ಜೊತೆಗಿಟ್ಟುಕೊಂಡು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಸಿದ್ದರಾಮಯ್ಯ ಬೆಲೆ ತೆತ್ತಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆಯ ಸೋಲಿಗೆ ಬೆಲೆ ತೆರದ ಇಬ್ಬರೂ ನಾಯಕರು ಉಪ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಪಕ್ಷದಲ್ಲಿನ ವಿರೋಧಿ ಬಣ ರಾಜೀನಾಮೆಗೆ ಧ್ವನಿ ಎತ್ತಲು ಅವಕಾಶ ದೊರೆಯದಂತೆ ಮಾಡಿದ್ದಾರೆ.

Advertisement

ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನಗಳನ್ನು ಹೊಂದಿದ್ದರು. ರಾಜೀನಾಮೆ ಪತ್ರದಲ್ಲಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲೂ ಶಾಸಕಾಂಗ ಪಕ್ಷ ನಾಯಕನ ಸ್ಥಾನದ ರಾಜೀನಾಮೆ ಬಗ್ಗೆ ಮಾತ್ರ ಪ್ರಸ್ತಾಪ ಮಾಡಿ, ಪ್ರತಿಪಕ್ಷದ ನಾಯಕನ ಸ್ಥಾನದ ಬಗ್ಗೆ ಮಾತನಾಡದೇ ಚಾಣ್ಮೆಯ ಹೆಜ್ಜೆಯಿಟ್ಟಿದ್ದಾರೆ.

ಇದನ್ನು ಪಕ್ಷದ ಹೈಕಮಾಂಡ್‌ ಯಾವ ರೀತಿ ಪರಿಗಣಿಸುತ್ತದೆ ಎನ್ನುವುದರ ಮೇಲೆ ಅವರ ಪ್ರತಿಪಕ್ಷದ ನಾಯಕನ ಸ್ಥಾನದ ಭವಿಷ್ಯ ನಿಂತಿದೆ. ಅಲ್ಲದೇ ಹಿರಿಯ ಕಾಂಗ್ರೆಸ್‌ ನಾಯಕರೂ ಈ ಬಗ್ಗೆ ಹೈ ಕಮಾಂಡ್‌ ಮುಂದೆ ಯಾವ ರೀತಿಯ ವಾದ ಮಂಡಿಸುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ.

ಎರಡೂ ಹುದ್ದೆಗೂ ಎಚ್‌ಕೆಪಿ ಫೈಟ್‌: ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಪಕ್ಷದ ಹಿರಿಯ ನಾಯಕ ಎಚ್‌.ಕೆ. ಪಾಟೀಲ್‌ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಸಿದ್ದರಾಮಯ್ಯ ಅವರ ಪ್ರಭಾವದಿಂದಲೇ ಹೈ ಕಮಾಂಡ್‌ ಎಚ್‌.ಕೆ. ಪಾಟೀಲ್‌ ಬದಲು ದಿನೇಶ್‌ ಗುಂಡೂರಾವ್‌ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಕಾರಣವಾಗಿತ್ತು.

ಆ ನಂತರ ದಿನೇಶ್‌ ಅವರನ್ನು ಮುಂದಿಟ್ಟುಕೊಂಡು ಪಕ್ಷದ ಎಲ್ಲ ತೀರ್ಮಾನಗಳನ್ನು ಏಕ ಪಕ್ಷೀಯವಾಗಿ ತೆಗೆದುಕೊಳ್ಳುವ ಮೂಲಕ ಪಕ್ಷದ ಹಿರಿಯ ನಾಯಕರ ಅಸಮಾಧಾನಕ್ಕೆ ಸಿದ್ದರಾಮಯ್ಯ ಕಾರಣವಾಗಿದ್ದರು. ದಿನೇಶ್‌ ಕೂಡ ತಮ್ಮ ಎಲ್ಲ ನಿರ್ಧಾರಗಳಿಗೂ ಸಿದ್ದರಾಮಯ್ಯ ಅವರನ್ನೇ ನಂಬಿ, ಈಗ ಅವರೊಂದಿಗೆ ತಾವೂ ಪದತ್ಯಾಗ ಮಾಡುವಂತಾಗಿದೆ.

Advertisement

ಆದರೆ, 15 ಕ್ಷೇತ್ರಗಳ ಉಪ ಚುನಾವಣೆಯ ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುತ್ತದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಬಲವಾಗಿ ಕೇಳಿ ಬಂದಿದ್ದವು. ಪಕ್ಷ ಹೀನಾಯ ಸೋಲು ಕಂಡಿರು ವುದರಿಂದ ತಮ್ಮನ್ನು ಬದಲಾಯಿ ಸುವಂತೆ ಒತ್ತಡ ಕೇಳಿ ಬರುವ ಸಾಧ್ಯತೆ ಅರಿತ ದಿನೇಶ್‌ ಫ‌ಲಿತಾಂಶ ಪ್ರಕಟಗೊಂಡ ತಕ್ಷಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಜಾಣತನ ಮೆರೆದಿದ್ದಾರೆ.

ಜನರ ತೀರ್ಪನ್ನು ಒಪ್ಪಿಕೊಂಡಿದ್ದೇನೆ. ಜನರು ಅನರ್ಹರಿಗೆ ಪಾಠ ಕಲಿಸುತ್ತಾರೆ ಎಂದುಕೊಂಡಿದ್ದೆ. ನನ್ನ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಈಗಾಗಲೇ ಸೋನಿಯಾ ಗಾಂಧಿ ಹಾಗೂ ದಿನೇಶ್‌ ಗುಂಡೂರಾವ್‌ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ.
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಅನೇಕ ಸಂದರ್ಭದಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷವನ್ನು ನಿಭಾಯಿಸಿದ್ದೇನೆ. ಎಲ್ಲವನ್ನೂ ಸಮಾಧಾನದಿಂದ ತೆಗೆದುಕೊಂಡು ಹೋಗಿದ್ದೇನೆ. ಉಪ ಚುನಾವಣೆ ಸೋಲಿಗೆ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next