ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತಾವು ಅಳವಡಿಸಿರುವ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ)ಗಳ ಸಂಪೂರ್ಣ ಮಾಹಿತಿಯನ್ನು ಎರಡು ದಿನಗಳಲ್ಲಿ ಪಾಲಿಕೆಗೆ ನೀಡಬೇಕು ಎಂದು ಸಂಬಂಧಿಸಿದ ಸಂಸ್ಥೆಗಳಿಗೆ ಮೇಯರ್ ಆರ್.ಸಂಪತ್‌ರಾಜ್ ಗಡವು ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಒಎಫ್ಸಿ ಅಳವಡಿಕೆ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಮೇಯರ್ ಸಂಪತ್‌ರಾಜ್, ನಗರದಲ್ಲಿ ಅನಧಿಕೃತ ಒಎಫ್ಸಿ ಕೇಬಲ್ ಅಳವಡಿಕೆ ಹೆಚ್ಚಾಗುತ್ತಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಎರಡು ದಿನಗಳಲ್ಲಿ ತಮ್ಮ ಸಂಸ್ಥೆಗಳು ಹೊಂದಿರುವ ಅನಧಿಕೃತ ಒಎಫ್ಸಿ ಮಾಹಿತಿ ಬಹಿರಂಗಪಡಿಸಬೇಕು ಖಡಕ್ ಸೂಚನೆ ನೀಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮದಂತೆ ಪಾಲಿಕೆಗೆ ಶುಲ್ಕ ಪಾವತಿಸಿ ಅಕ್ರಮ ಅಳವಡಿಕೆಯನ್ನು ಸಕ್ರಮಗೊಳಿಸಿಕೊಳ್ಳುವಂತೆ ಹಲವಾರು ಬಾರಿ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಒಎಫ್ಸಿ ಸಂಸ್ಥೆಗಳು ಅದನ್ನು ಗಣನೆಗೆ ತೆಗೆದುಕೊಳ್ಳದೆ ಅನಧಿಕೃತ ಒಎಫ್ಸಿ ಅಳವಡಿಕೆ ಮುಂದುವರಿಸಿದ್ದು, ಎರಡು ದಿನಗಳಲ್ಲಿ ಅನಧಿಕೃತ ಕೇಬಲ್‌ಗಳಿಗೆ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಳ್ಳದಿದ್ದರೆ ಕೇಬಲ್‌ಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.
ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಈಗಾಗಲೇ ಪೌರಕಾರ್ಮಿಕರ ಬೆರಳಚ್ಚು ಪಡೆಯಲಾಗಿದೆ. ಆದರೆ, ಕೆಲವು ಪೌರಕಾರ್ಮಿಕರ ಬೆರಳಚ್ಚು ಬಯೋಮೆಟ್ರಿಕ್‌ನಲ್ಲಿ ಸೆನ್ಸಾರ್ ಆಗದ ಹಿನ್ನೆಲೆಯಲ್ಲಿ ಅವರ ಕಣ್ಣಿನ ರೆಟಿನಾ ಮ್ಯಾಪಿಂಗ್ ಮಾಡುವ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಿದ್ದು, ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಫಿಕ್ಸ್ ಮೈ ಸ್ಟ್ರೀಟ್‌ನಿಂದ ಅನುಕೂಲ: ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಬಿಡುಗಡೆ ಮಾಡಲಾಗಿರುವ ಫಿಕ್ಸ್ ಮೈ ಸ್ಟ್ರೀಟ್ ಮೊಬೈಲ್ ಅಪ್ಲಿಕೇಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಪತ್‌ರಾಜ್, ಆ್ಯಪ್‌ಗೆ ಈವರೆಗೆ 5 ಸಾವಿರಕ್ಕೂ ಹೆಚ್ಚಿನ ದೂರುಗಳು ಬಂದಿವೆ. ಆ ಪೈಕಿ ಬಿಬಿಎಂಪಿಗೆ ಸಂಬಂಧಿಸಿದ 1,800 ದೂರುಗಳನ್ನು ಪರಿಹರಿಸಲಾಗಿದ್ದು, ಉಳಿದ ದೂರುಗಳು ಬೆಸ್ಕಾಂ, ಜಲಮಂಡಳಿ ಸೇರಿ ಇನ್ನಿತರ ಇಲಾಖೆಗಳಿಗೆ ವರ್ಗಾಹಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಪ್ರಮುಖರು ಹಾಜರಿದ್ದರು.