ಬೆಂಗಳೂರು: ಇತ್ತೀಚೆಗೆ ಬಿನ್ನಿಮಿಲ್ ಬಳಿಯ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಕಾರೊಂದರಲ್ಲಿ ಸಿಕ್ಕಿದ 2 ಕೋಟಿ ರೂ. ನಗದು ಬಿಜೆಪಿ ಸೇರಿರುವುದು ಪತ್ತೆಯಾ ಗಿದ್ದು, ಈ ಸಂಬಂಧ ಚುನಾವಣಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಕಾಟನ್‌ಪೇಟೆ ಠಾಣೆ ಪೊಲೀಸರು ಬಿಜೆಪಿ ರಾಜ್ಯ ಕಚೇರಿ ಕಾರ್ಯದರ್ಶಿ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಕೋರ್ಟ್ ಅನುಮತಿ ಪಡೆದು ಚುನಾವಣಾಧಿಕಾರಿ ರವಿ ಅಸೂಟಿ ಅವರು ನೀಡಿದ ದೂರಿನ ಮೇರೆಗೆ ಬಿಜೆಪಿ ರಾಜ್ಯ ಕಚೇರಿ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಕಾರಿನ ಚಾಲಕ ವೆಂಕಟೇಶ್ ಪ್ರಸಾದ್, ಸಹಚರ ಗಂಗಾಧರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಏ.20ರಂದು ಸಂಜೆ ಸುಮಾರು 4 ಗಂಟೆ ಸುಮಾರಿಗೆ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದನ್ನು ಸ್ಥಿರ ಕಣ್ಗಾವಲು ತಂಡ ಹಾಗೂ ಪೊಲೀಸರು ತಪಾಸಣೆ ಮಾಡಿದಾಗ ನಗದು ಹಣವಿದ್ದ 2 ಬ್ಯಾಗ್‌ಗಳು ಪತ್ತೆ ಯಾಗಿದ್ದವು. ಈ ವೇಳೆ ಕಾರು ಚಾಲಕ ವೆಂಕಟೇಶ್ ಪ್ರಸಾದ್ ಮತ್ತು ಸಹಚರ ಗಂಗಾಧರ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹಣವನ್ನು ಮೈಸೂರಿಗೆ ಸಾಗಿಸುತ್ತಿರುವುದಾಗಿ ಹೇಳಿ ಬಿಜೆಪಿ ಪಕ್ಷದ ಪತ್ರವನ್ನು ಹಾಜರುಪಡಿದ್ದರು.
ಆ ಪತ್ರದಲ್ಲಿ ಕೋದಂಡರಾಮಪುರದ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಶಾಖೆಯಿಂದ ಮಾ.27ರಂದು 5 ಕೋಟಿ ರೂ. ಡ್ರಾ ಮಾಡಲಾಗಿದೆ. ಈ ಪೈಕಿ 2 ಕೋಟಿ ರೂ. ನಗದನ್ನು ಮೈಸೂರು-ಕೊಡಗು, ಚಾಮರಾಜನ ಗರ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಬೂತ್ ಕಾರ್ಯಕರ್ತರಿಗೆ ಪಕ್ಷದ ಕಾರ್ಯಕ್ರಮಗಳಿಗೆ ಹಂಚುವ ಸಲುವಾಗಿ ವೆಂಕಟೇಶ್ ಪ್ರಸಾದ್ ಮೂಲಕ ಕಾರಿನಲ್ಲಿ ಕಳುಹಿಸಲಾಗುತ್ತಿದೆ ಎಂದು ನಮೂದಿಸಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೂಂದೆಡೆ ಎಸ್‌ಎಸ್‌ಟಿ ತಂಡದ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ವೆಚ್ಚ ವೀಕ್ಷಕರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಈ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಹಣವನ್ನು ಐಟಿ ಕಾಯ್ದೆಯಡಿ ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಈ ಹಣಕ್ಕೆ ಸೂಕ್ತ ತೆರಿಗೆ ಪಾವತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹೀಗಾ ಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಈ ಬೆನ್ನಲ್ಲೇ ಹಣ ಸಾಗಿಸುವಾಗ ಹಾಜರುಪಡಿಸಿರುವ ಬಿಜೆಪಿಯ ಪತ್ರದಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರುಗಳ ಪಟ್ಟಿ, ಪಕ್ಷದ ಕಾರ್ಯಕರ್ತರ ಹೆಸರು, ಬೂತ್, ಮತಗಟ್ಟೆಯ ಹೆಸರು ನಮೂದಿಸಿಲ್ಲ. ಹೀಗಾಗಿ ಈ ಹಣವನ್ನು ಮತದಾರರಿಗೆ ಲಂಚ ನೀಡಲು, ಪ್ರಚೋದನೆ ನೀಡಲು ಸಾಗಿಸುತ್ತಿರುವುದು ಕಂಡು ಬಂದಿದೆ.
ಪೊಲೀಸರ ವಶದಲ್ಲಿ 2 ಕೋಟಿ ರೂ. ನಗದು :
ಇಷ್ಟು ಪ್ರಮಾಣದ ನಗದು ಸಾಗಿಸಲು ಸರಿಯಾದ ಸಮರ್ಥನೆ ಇಲ್ಲ. ಇದೊಂದು ಗಂಭೀರ ಪ್ರಕರಣ ವಾಗಿದ್ದು, ಮತದಾರರ ಮೇಲೆ ಪ್ರಭಾವ ಬೀರಲು ಹಾಗೂ ಮತದಾರರಿಗೆ ಲಂಚ ನೀಡಲು ಈ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮುಂದಿನ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಸದ್ಯ 2 ಕೋಟಿ ರೂ. ನಗದು ತಮ್ಮ ವಶಕ್ಕೆ ಪಡೆಯಲಾಗಿದೆ. ಸದ್ಯ ಮೂವರಿಗೆ ನೋಟಿಸ್ ಕೊಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.