Advertisement

ಹೆಜಮಾಡಿ ಕ್ರೀಡಾಂಗಣ ಅಭಿವೃದ್ಧಿಗೆ 2 ಕೋ. ರೂ. ಅನುದಾನ: ಮಧ್ವರಾಜ್‌

03:47 PM Mar 28, 2017 | Team Udayavani |

ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಯುವ ಜನರು ಮತ್ತು ಕ್ರೀಡಾಳುಗಳ ಭವಿಷ್ಯದ ಆಶಾಕಿರಣವಾಗಿರುವ ಹೆಜಮಾಡಿ ರಾಜೀವ ಗಾಂಧಿ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲು ಮುಂದಿನ ಆರ್ಥಿಕ ವರ್ಷದಲ್ಲಿ 2 ಕೋ. ರೂ. ಅನುದಾನವನ್ನು ಮೀಸಲಿಡಲಾಗಿದೆ. ಆ ಮೂಲಕ ಕಾಪು ಕ್ಷೇತ್ರದ ಜನರ ಬಹುಕಾಲದ ಕನಸನ್ನು ನನಸಾಗಿಸಲು ರಾಜ್ಯ ಸರಕಾರ ಮುಂದಾಗಿದೆ ಎಂದು ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಸೌತ್‌ ಕೆನರಾ ಫೋಟೋಗ್ರಾಫ‌ರ್ ಎಸೋಸಿಯೇಶನ್‌ ಕಾಪು ವಲಯದ ರಜತ ಸಂಭ್ರಮದ ಪ್ರಯುಕ್ತ ಸಂಘದ ಸದಸ್ಯರಿಗಾಗಿ ಮಾ. 25ರಂದು ಕಾಪು ಉಳಿಯಾರಗೋಳಿ ಯಾರ್ಡ್‌ ಬೀಚ್‌ನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಬೀಚ್‌ ಕ್ರೀಡಾ ಕೂಟದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಪು, ಪಡುಬಿದ್ರಿ ಹಾಗೂ ಮಲ್ಪೆ ಬೀಚ್‌ಗಳನ್ನು ದಾನಿಗಳ ಸಹಕಾರದಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು. ಹಿಂದಿನ ಬಜೆಟ್‌ಗಳಲ್ಲಿ ಕ್ರೀಡಾ ಇಲಾಖೆಗೆ ಕೇವಲ 145 ಕೋ. ರೂ. ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ ಈ ಬಾರಿಯ ಬಜೆಟ್‌ನಲ್ಲಿ 280 ಕೋ. ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದರು.

ಹೊನಲು ಬೆಳಕಿನ ಬೀಚ್‌ ಕ್ರೀಡಾಕೂಟವನ್ನು ಉದ್ಘಾಟಿಸಿದ ಮಾಜಿ ಸಚಿವ / ಕಾಪು ಶಾಸಕ ವಿನಯಕುಮಾರ್‌ ಸೊರಕೆ ಮಾತನಾಡಿ, ಛಾಯಾಗ್ರಾಹಕರು ಸಮಾಜದ ಎರಡು ಕಣ್ಣುಗಳಿದ್ದಂತೆ. ಅವರ ಒಂದು ಕಣ್ಣು ಛಾಯಾಗ್ರಹಣದಲ್ಲಿ ನಿರತವಾಗಿದ್ದರೆ, ಮತ್ತೂಂದು ಕಣ್ಣು ಸದಾ ಕಾಲ ರಾಜಕಾರಣಿಗಳು, ಸಮಾಜ ವಿರೋಧಿ ಚಟುವಟಿಕೆ ಮಾಡುವವರು ಮತ್ತು ಸಮಾಜದ ತಪ್ಪುಗಳ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಸಮಾಜದಲ್ಲಿ ತಪ್ಪು ನಡೆದಾಗ ಅದನ್ನು ಸಾಕ್ಷೀಕರಿಸಿ ಸಮಾಜಕ್ಕೆ ತಿಳಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದರು.

ಹೊನಲು ಬೆಳಕಿನ ಬೀಚ್‌ ಕ್ರೀಡಾಕೂಟಕ್ಕೆ ಸಹಕರಿಸಿದ ಸಚಿವ ಪ್ರಮೋದ್‌ ಮಧ್ವರಾಜ್‌ ಹಾಗೂ ಕಾಪುವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿಸುವಲ್ಲಿ ಸಫಲರಾಗಿರುವ ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಇವರನ್ನು ಎಸ್‌ಕೆಪಿಎ ಕಾಪು ವಲಯದ ವತಿಯಿಂದ ಸಮ್ಮಾನಿಸಲಾಯಿತು.

ಎಸ್‌.ಕೆ.ಪಿ.ಎ. ಕೇಂದ್ರ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಕ್ರೀಡಾ ಸಹಾಯಕ ನಿರ್ದೇಶಕ ರೋಶನ್‌ ಕುಮಾರ್‌ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ಸಾಯಿರಾಧಾ ಸಮೂಹ ಸಂಸ್ಥೆಯ ಅಧ್ಯಕ್ಷ ಮನೋಹರ್‌ ಶೆಟ್ಟಿ, ದ. ಕ. ಮತ್ತು ಉಡುಪಿ ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ, ಜಿ. ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಪುರಸಭಾ ಸದಸ್ಯ ಕಿರಣ್‌ ಆಳ್ವ, ರಾಜ್ಯ ಛಾಯಾಗ್ರಾಹಕರ ಸಂಘ ದಕ್ಷಿಣ ವಲಯದ ಅಧ್ಯಕ್ಷ ವಾಸುದೇವ ರಾವ್‌, ಎಸ್‌ಕೆಪಿಎ ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು ಅತಿಥಿಗಳಾಗಿ ಭಾಗವಹಿಸಿದ್ದರು.

Advertisement

ಎಸ್‌ಕೆಪಿಎ ಕೇಂದ್ರ ಸಮಿತಿಯ ಕ್ರೀಡಾ ಕಾರ್ಯದರ್ಶಿ ಜಯಂತ್‌ ಗೌಡ, ರಜತ ಸಂಭ್ರಮ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ್‌ ಐತಾಳ್‌, ಕ್ರೀಡಾ ಕಾರ್ಯದರ್ಶಿ ಪ್ರಕಾಶ್‌ ಆಚಾರ್ಯ, ಕಾಪು ವಲಯದ ಕಾರ್ಯದರ್ಶಿ ವೀರೇಂದ್ರ ಪೂಜಾರಿ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ಕಾಪು ವಲಯಾಧ್ಯಕ್ಷ ಉದಯ ಪೂಜಾರಿ ಮುಂಡ್ಕೂರು ಸ್ವಾಗತಿಸಿ, ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ರವಿ ಕುಮಾರ್‌ ವಂದಿಸಿದರು. ಶಿಕ್ಷಕ ರಘುರಾಮ ಕೋಟ್ಯಾನ್‌ ಕುರ್ಕಾಲು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next