ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ 2.25 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಅನುಮತಿ ನೀಡಲಾಗಿದೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಗಳಂತಹ ಅಧಿಕೃತ ಸಂಗ್ರಹಣ ಏಜೆನ್ಸಿಗಳು ರೈತರಿಂದ 1.71 ಲಕ್ಷ ಮೆ. ಟನ್ ಪರಿವರ್ತಿತ ಅಕ್ಕಿ ಸೇರಿ ಒಟ್ಟು 2.25 ಲಕ್ಷ ಮೆ. ಟನ್ ಭತ್ತ ಖರೀದಿಗೆ ಅನುಮತಿ ನೀಡಲಾಗಿದ್ದು, ಪ್ರತೀ ಎಕರೆಯಿಂದ ಕನಿಷ್ಠ 25 ಕ್ವಿಂಟಾಲ್‌ನಿಂದ ಗರಿಷ್ಠ 40 ಕ್ವಿಂಟಾಲ್‌ವರೆಗೆ ಖರೀದಿಸಲು ಅವಕಾಶ ಇದೆ.
ಸಂಗ್ರಹಣ ಏಜೆನ್ಸಿಗಳು ರೈತರಿಂದ ಖರೀದಿಸಿದ ಭತ್ತವನ್ನು ಗೋದಾಮು ಗಳಲ್ಲಿ ಸಂಗ್ರಹಿಸಿ ಹಲ್ಲಿಂಗ್‌ಗಾಗಿ ಹತ್ತಿರದ ನೋಂದಾಯಿತ ಅಕ್ಕಿ ಗಿರಣಿ ಗಳಿಗೆ ಸಾಗಾಣಿಕೆ ಮಾಡಬೇಕು. ಸಾರ್ವಜನಿಕ ವಿತರಣ ಪದ್ಧತಿಯಡಿ ವಿತರಿಸಲಾಗುವ ಅಕ್ಕಿಯನ್ನು ಕಡ್ಡಾಯ ಸಾರವರ್ಧಿತಗೊಳಿಸಬೇಕು. ಇದಕ್ಕಾಗಿಬ್ಲೆಂಡರ್ ಯಂತ್ರ ಅಳವಡಿಸಿಕೊಂಡು ಹಲ್ಲಿಂಗ್ ಮಾಡಲು ನೋಂದಾಯಿಸಿ ಕೊಂಡಿರುವ ಅಕ್ಕಿ ಗಿರಣಿಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಭತ್ತ ಸರಬರಾಜು ಮಾಡಿದ ರೈತರ ಬ್ಯಾಂಕ್ ಖಾತೆಗೆ 15 ದಿನದೊಳಗೆ ನೇರ ನಗದು ವರ್ಗಾವಣೆ ಮಾಡಬೇಕು ಎಂದು ನಿಬಂಧನೆಗಳನ್ನು ವಿಧಿಸಲಾಗಿದೆ.
ನ. 15ರಿಂದ ನೋಂದಣಿ
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್‌ಗಳನ್ನು ನ. 5ರೊಳಗೆ ರಚಿಸಿ, ಮೊದಲ ಸಭೆ ನಡೆಸಬೇಕು. ನ. 20ರೊಳಗೆ ಜಿಲ್ಲಾ ಮಟ್ಟದಲ್ಲಿ ಅಕ್ಕಿ ಗಿರಣಿಗಳ ಹಲ್ಲಿಂಗ್ ಸಾಮರ್ಥ್ಯ, ಭತ್ತ ಸಂಗ್ರಹಣ ಸಾಮರ್ಥ್ಯ, ಪರಿವರ್ತಿತ ಅಕ್ಕಿಯ ಸಾರವರ್ಧನೆ ಬಗ್ಗೆ ಟಾಸ್ಕ್ಫೋರ್ಸ್‌ನಿಂದ ಮಾಹಿತಿ ಸಂಗ್ರಹಿಸಬೇಕು. ಬೆಂಬಲ ಬೆಲೆಯಡಿ ಭತ್ತ ಖರೀದಿ ಬಗ್ಗೆ ಡಿ. 30ರ ವರೆಗೆ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು. ಭತ್ತ ಸರಬರಾಜು ಮಾಡಲು ಮುಂದೆ ಬರುವ ರೈತರಿಗೆ ನ. 15ರಿಂದ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, ಡಿ. 31ರೊಳಗಾಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಡಿ. 31ರಿಂದ 2024ರ ಮಾ. 31ರೊಳಗಾಗಿ ರೈತರಿಂದ ಭತ್ತ ಖರೀದಿಸಿ, ಮಿಲ್‌ಗಳಲ್ಲಿ ಶೇಖರಿಸಿ, ಸಾರವರ್ಧಿತ ಅಕ್ಕಿಯನ್ನಾಗಿ ಪರಿವರ್ತಿಸುವ ಕಾರ್ಯ ಪೂರ್ಣಗೊಂಡಿರಬೇಕು ಎಂದು ಷರತ್ತು ವಿಧಿಸಲಾಗಿದೆ.
ಎಷ್ಟು ಖರೀದಿ (ಎಕರೆಗೆ)
ಎಷ್ಟು ಖರೀದಿ (ಎಕರೆಗೆ) ಗರಿಷ್ಠ 40 ಕ್ವಿಂಟಾಲ್
ಧಾನ್ಯ ಬೆಂಬಲ ಬೆಲೆ (ಪ್ರತೀ ಕ್ವಿಂಟಾಲ್‌ಗೆ)
ಭತ್ತ (ಸಾಮಾನ್ಯ) 2,183 ರೂ.
ಭತ್ತ (ಗ್ರೇಡ್-ಎ) 2,203 ರೂ.
ಬಿಳಿಜೋಳ (ಹೈಬ್ರಿಡ್) 3,180 ರೂ.
ಬಿಳಿಜೋಳ (ಮಾಲ್ದಂಡಿ) 3,225 ರೂ.
ರಾಗಿ 3,846 ರೂ.