ಧಾರವಾಡ: ಕರ್ನಾಟಕ ನಾಟಕ ಅಕಾಡೆಮಿ ಫೆ.19ರಿಂದ 23ರ ವರೆಗೆ ರಾಜ್ಯಮಟ್ಟದ ಪ್ರಥಮ ಹವ್ಯಾಸಿ ರಂಗಭೂಮಿ ಸಮಾವೇಶವನ್ನು ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಇದೇ ಮೊಟ್ಟ ಮೊದಲು ಇಂತಹ ಸಮಾವೇಶ ನಡೆಯುತ್ತಿದ್ದು, ಅಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಸಮಾವೇಶ ಉದ್ಘಾಟಿಸಲಿದ್ದು, ಹಿರಿಯ ರಂಗಕರ್ಮಿ ಪ್ರಸನ್ನ ಅವರು ಈ ಸಮಾವೇಶದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಅರವಿಂದ ಬೆಲ್ಲದ ವಹಿಸಿಕೊಳ್ಳಲಿದ್ದು, ನಾಟಕ ಅಕಾಡೆಮಿ ಅಧ್ಯಕ್ಷ ಶೇಖ್ ಮಾಸ್ತರ್ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ. ರಂಗ ಸಂಪನ್ನರು ಮಾಲಿಕೆ ಪುಸ್ತಕ ಬಿಡುಗಡೆಯನ್ನು ನಟ ಮುಖ್ಯಮಂತ್ರಿ ಚಂದ್ರು ಮಾಡಲಿದ್ದು, ಜಿಲ್ಲಾ ರಂಗ ಮಾಹಿತಿ ಮಾಲಿಕೆಯನ್ನು ವಿನಯ ಕುಲಕರ್ಣಿ ಬಿಡುಗಡೆ ಮಾಡಲಿದ್ದಾರೆ.
ಮೇಯರ್ ಮಂಜುಳಾ ಅಕ್ಕೂರ ಅವರಿಂದ ಏಳು ನಾಟಕಗಳು ಬಿಡುಗಡೆಗೊಳ್ಳಲಿದ್ದು, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಸೇರಿದಂತೆ ವಿವಿಧ ನಿಗಮ ಮಂಡಳಿ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಿರಿಯ ಸಾಹಿತಿಗಳಾದ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ| ಎ. ಮುರಿಗೆಪ್ಪ, ಟಿ.ಎಸ್. ನಾಗಾಭರಣ, ಮಂಡ್ಯ ರಮೇಶ, ಸತೀಶ ಕುಲಕರ್ಣಿ ಉಪಸ್ಥಿತರಿರುವರು.
ಗೋಷ್ಠಿ-ಸಂವಾದ: ಫೆ.20ರಂದು ಬೆಳಗ್ಗೆ 10:00ಕ್ಕೆ ಹವ್ಯಾಸಿ ರಂಗಭೂಮಿ ಹೆಜ್ಜೆ ಗುರುತು ಸಂವಾದಗೋಷ್ಠಿ ನಡೆಯಲಿದೆ. ಚಳವಳಿಗಳು ಮತ್ತು ಸಿದ್ಧಾಂತಗಳ ಕುರಿತು ಡಾ| ಶಿವಾನಂದ ಶೆಟ್ಟರ್ ಮಾತನಾಡಲಿದ್ದಾರೆ. ಫೆ.21ರಂದು ಹೂಲಿ ಶೇಖರ್. ಎಚ್. ಜನಾರ್ಧನ (ಜನ್ನಿ) ಅವರಿಂದ ಹವ್ಯಾಸಿ ರಂಗಭೂಮಿ ಗ್ರಾಮೀಣ ಮತ್ತು ನಗರದ ನಡೆಗಳು, ಹವ್ಯಾಸ ಮತ್ತು ಚಳವಳಿ ಇಂದಿನ ಸ್ಥಿತಿ ಎಚ್. ಎಸ್. ಉಮೇಶ್ ಹಾಗೂ ರೆಪರ್ಟರ್ ಗಳ ಕುರಿತಾಗಿ ಪ್ರಕಾಶ ಬೆಳವಾಡಿ ಮಾತನಾಡುವರು.
ಫೆ.22ರಂದು ಹವ್ಯಾಸಿ ರಂಗಭೂಮಿ ಮುನ್ನೋಟ ಕುರಿತು ಡಾ| ಸಿದ್ದನಗೌಡ ಪಾಟೀಲ ಹವ್ಯಾಸಿ ರಂಗಭೂಮಿಯ ಭವಿಷ್ಯ ಟಿ.ಪಿ.ಅಶೋಕ, ಕ್ರಿಯಾ ಯೋಜನೆ ಸ್ವರೂಪ ಗೋಪಾಲಕೃಷ್ಣ ನಾಯರಿ, ಸಲಹೆಗಳು ಪ್ರಭಾಕರ ಸಾತಖೇಡ ಮಾಡಲಿದ್ದಾರೆ. ಫೆ.23ರಂದು ಬೆಳಿಗ್ಗೆ 10:00ಕ್ಕೆ ರಂಗಭೂಮಿ ಅನುಭವದ ಕಥನ ಅಧ್ಯಕ್ಷತೆ ಶ್ರೀನಿವಾಸ ಜಿ. ಕಪ್ಪಣ್ಣ, ಬಿ. ಸುರೇಶ ನಿರ್ದೇಶಕರು, ನೇಪಥ್ಯ ಸುರೇಶ ಆನಗಳ್ಳಿ, ಸಂಘಟನೆ ಲಕ್ಷ್ಮೀ ಚಂದ್ರಶೇಖರ ಜಯಪ್ರಕಾಶ ಗೌಡ ಗ್ರಾಮೀಣ ರಂಗಭೂಮಿ ಸಂಘಟನೆ ಕುರಿತಾಗಿ ಮಾತನಾಡುವರು.