Advertisement
ಸಮಗ್ರ ಶಿರ್ಕಾಟಕ ಯೋಜನೆಯಡಿ 2023-24ನೇ ಸಾಲಿನಲ್ಲಿ ಶಾಲೆಯಿಂದ ಹೊರಗೆ ಉಳಿದ 1ರಿಂದ 10ನೇ ತರಗತಿ ಮಕ್ಕಳನ್ನು ಗುರುತಿಸಲು ಶಾಲಾ, ಕ್ಲಸ್ಟರ್, ಜಿಲ್ಲಾ ಮಟ್ಟದಲ್ಲಿ ವಿಶೇಷ ಗಣತಿ ನಡೆದಿದ್ದು ಈ ವೇಳೆ ಜಿಲ್ಲೆಯಲ್ಲಿ 181ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದು ದೃಢಪಟ್ಟಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿಗಾಗಿ ಇಲಾಖೆ ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ವಿಶೇಷವಾಗಿ ವಿದ್ಯಾವಾಹಿನಿ ಆ್ಯಪ್ ಮೂಲಕ ಮಕ್ಕಳ ಪತ್ತೆಗೆ ವಿಶೇಷ ಅಭಿಯಾನ ನಡೆಸಲಾಗಿತ್ತು. ಜಿಲ್ಲೆಯಲ್ಲಿ 181 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.
Related Articles
Advertisement
ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹೇಳಿದ್ದೇನು? : ಜಿಲ್ಲೆಯಲ್ಲಿ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 181 ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಉಳಿದಿದ್ದು ಆ ಪೈಕಿ ಸಮೀಕ್ಷೆಯ ಅಭಿಯಾನದ ವೇಳೆ 12 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ. ಉಳಿದಂತೆ ಶಾಲೆಯಿಂದ ಹೊರಗೆ ಉಳಿದಿರುವ 169 ಮಕ್ಕಳನ್ನು ಮ್ಯಾಪಿಂಗ್ ಮಾಡಿ ಮರಳಿ ಶಾಲೆಗೆ ತರುವ ಕಾರ್ಯವನ್ನು ಇಲಾಖೆ ಮಾಡಲಿದೆ. ಈ ನಿಟ್ಟಿನಲ್ಲಿ ಇಲಾಖೆ ವಿಶೇಷ ಕಾರ್ಯ ಯೋಜನೆ ರೂಪಿಸಿ ಬಿಆರ್‌ಸಿ, ಸಿಆರ್‌ಸಿಗಳಿಗೆ ಉಸ್ತುವಾರಿ ವಹಿಸಿ ಮಕ್ಕಳನ್ನು ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಪತ್ತೆ ಮಾಡಲಾಗುವುದು. ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಕುಟುಂಬಗಳಲ್ಲಿ ಏನಾದರೂ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆ ಇದ್ದರೆ ಗುರುತಿಸಿ ಅವರನ್ನು ಇಲಾಖೆ ಕೆಜಿಬಿವಿ ಶಾಲೆಗೆ ಅಥವ ಹಾಸ್ಟಲ್‌ಗೆ ಸೇರಿಸುವ ವ್ಯವಸ್ಥೆ ಮಾಡುತ್ತೇವೆ. ಮನೆ ಮನೆ ಸಮೀಕ್ಷೆ ಮಾಡುವ ಮೂಲಕ ಪೋಷಕರ ಮನವೊಲಿಸಿ ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸಿಕೊಳ್ಳುತ್ತೇವೆಂದು ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಬೈಲಾಂಜನಪ್ಪ ಸೋಮವಾರ ಉದಯವಾಣಿಗೆ ತಿಳಿಸಿದರು.
ಶಾಲೆ ಬಿಡಲು ಕಾರಣಗಳೇನು?; ಮನೆಗಳಲ್ಲಿನ ವಯೋ ವೃದ್ಧರನ್ನು ನೋಡಿಕೊಳ್ಳಲು ತಮ್ಮ ಮಕ್ಕಳನ್ನು ಪೋಷಕರು ಶಾಲೆಗೆ ಕಳಿಸದೇ ಮನೆಯಲ್ಲಿ ಬಿಡುತ್ತಾರೆ. ಬಾಲ್ಯದಲ್ಲಿಯೆ ಮಕ್ಕಳನ್ನು ದುಡಿಮೆ ದೂಡುವುದರಿಂದಲೂ ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಸೌಕರ್ಯ ಇಲ್ಲದೇ ಇರುವುದು. ಜೊತೆಗೆ ಆರ್ಥಿಕ, ಸಾಮಾಜಿಕ ಕಾರಣಗಳಿಂದಲೂ ಕೂಡ ಮಕ್ಕಳು ಶಾಲೆಯಿಂದ ಹೊರಗೆ ಉಳಿಯುತ್ತಿರುವುದನ್ನು ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಇಲಾಖೆ ಗಮನಿಸಿದೆ.
– ಕಾಗತಿ ನಾಗರಾಜಪ್ಪ