ಮೈಸೂರು: ಜಿಲ್ಲೆಯಲ್ಲಿ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಯಾವುದೇ ಅಡೆ ತಡೆ ಇಲ್ಲದೇ, ವಿದ್ಯಾರ್ಥಿಗಳು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷಾ ಕೇಂದ್ರಗಳಿಗೆ ತೆರಳಿ, ನಿರಾತಂಕವಾಗಿ ಪರೀಕ್ಷೆ ಬರೆದರು. ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ನಡೆಯಿತು. ಯಾವುದೇ ವಿದ್ಯಾರ್ಥಿ ಡಿಬಾರ್ ಆದ ಬಗ್ಗೆ ವರದಿಯಾಗಿಲ್ಲ.
ಮೊದಲ ದಿನ ನಡೆದ ದ್ವಿತೀಯ ಕನ್ನಡ/ ಇಂಗ್ಲಿಷ್ ಪರೀಕ್ಷೆಯನ್ನು 37,738 ವಿದ್ಯಾರ್ಥಿಗಳ ಪೈಕಿ 35,935 ವಿದ್ಯಾರ್ಥಿಗಳು ಬರೆದಿದ್ದು, 1,803 ವಿದ್ಯಾರ್ಥಿಗಳು ಗೈರಾಗಿದ್ದರು. ಹಾಜರಾತಿ ಕಡಿಮೆ, ಪ್ರವೇಶ ಪತ್ರ ಸಿಗದವರೇ ಹೆಚ್ಚಾಗಿ ಗೈರಾಗಿದ್ದರು. ಜಿಲ್ಲಾದ್ಯಂತ ಯಾವುದೇ ಅಕ್ರಮ ನಡೆದಿಲ್ಲ ಎಂದು ಡಿಡಿಪಿಐ ಪಾಂಡುರಂಗ ಪತ್ರಿಕೆಗೆ ತಿಳಿಸಿದ್ದಾರೆ.
ಕಟ್ಟೆಚ್ಚರ: ಜಿಲ್ಲಾಡಳಿತದಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ ಪೊಲೀಸ್ ಬಿಗಿ ಭದ್ರತೆ ಇತ್ತು. ಪೋಷಕರು ಕೂಡ ಪರಸ್ಪರ ಅಂತರ ಕಾಯ್ದುಕೊಂಡರು. ಪರೀಕ್ಷೆ ಮುಗಿಯುವವರಿಗೂ ಕೇಂದ್ರದ ಮಾರ್ಗದಲ್ಲಿ ಜನ, ವಾಹನ ಸಂಚಾರ ನಿಷೇಧಿಸಲಾಗಿತ್ತು.
2700 ಸಿಬ್ಬಂದಿ ಬಳಕೆ: ಪರೀಕ್ಷಾ ನಿರ್ವಹಣೆಗೆ ಜಿಲ್ಲಾದ್ಯಂತ 2700 ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರಗಳ ಬಳಿ ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ತಂಡ ನಿಯೋಜಿಸಲಾಗಿತ್ತು. ನಗರ ಸೇರಿದಂತೆ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕೆ 56 ಉಚಿತ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಸಂಘ ಸಂಸ್ಥೆಗಳು ಪರೀಕ್ಷಾ ಕೇಂದ್ರದ ಬಳಿ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು.
ಪ್ರತ್ಯೇಕ ಕೊಠಡಿ ವ್ಯವಸ್ಥೆ: ಈ ಬಾರಿ ಅಂತರ ಕಾಯ್ದುಕೊಳ್ಳುವ ಸಲುವಾಗಿ ಹೆಚ್ಚುವರಿಯಾಗಿ 12 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಕಂಟೈನ್ಮೆಂಟ್ ವಲಯದಿಂದ ಬಂದ 40 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಯಿತು. ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ 4 ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ. ಹೊರ ಜಿಲ್ಲೆಯ 271 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5 ವಿದ್ಯಾರ್ಥಿಗಳು ಗೈರಾಗಿದ್ದರು.
ಸದ್ವಿದ್ಯಾ ಶಾಲೆಗೆ ಶಿಫ್ಟ್: ಕಂಟೈನ್ಮೆಂಟ್ ವಲಯದಲ್ಲಿದ್ದ ಅವಿಲಾ ಕಾನ್ವೆಂಟ್ ಕಂಟೈನ್ಮೆಂಟ್ ಪರೀಕ್ಷಾ ಕೇಂದ್ರವನ್ನು ಮಹಾರಾಣಿ ಪಿಯು ಮತ್ತು ಸದ್ವಿದ್ಯಾ ಶಾಲೆಗೆ ಶಿಫ್ಟ್ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದ ಆವರಣ ಹಾಗೂ ಹೊರ ಭಾಗದಲ್ಲಿ ವಿದ್ಯಾರ್ಥಿಗಳು ಗುಂಪುಗೂಡುವುದನ್ನು ತಪ್ಪಿಸಲು ಪ್ರತಿ ವಿದ್ಯಾರ್ಥಿ ನಡುವೆ ಅಂತರ ಕಾಯ್ದುಕೊಳ್ಳುವ ಬಾಕ್ಸ್ ಮಾರ್ಕ್ ಮಾಡಲಾಗಿತ್ತು. ಎಲ್ಲರೂ ಮಾಸ್ಕ್ ಧರಿಸಿಯೇ ಆಗಮಿಸಿದ್ದರು. ಎಲ್ಲರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿಯೇ ಒಳಗೆ ಬಿಡಲಾಯಿತು.