Advertisement

18 ಸಾವಿರ ಹೊಸ ಮತದಾರರ ಸೇರ್ಪಡೆ

02:41 PM Dec 14, 2018 | Team Udayavani |

ಯಾದಗಿರಿ: ಜಿಲ್ಲಾದ್ಯಂತ ಅಕ್ಟೋಬರ್‌ 10 ರಿಂದ ನವೆಂಬರ್‌ 25ರ ವರೆಗೆ ಒಟ್ಟು 18,245 ಹೊಸ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರು ಹಾಗೂ ವಸತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ| ಜೆ. ರವಿಶಂಕರ್‌ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಧಾನಸಭೆ/ಲೋಕಸಭೆ ಚುನಾವಣೆಯ ಪರಿಷ್ಕೃತ ಮತದಾರರ ಪಟ್ಟಿಯ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು. 

Advertisement

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2019ರ ಜನವರಿ 1ರ ಅರ್ಹತಾ ದಿನಾಂಕದಂತೆ ವಿಧಾನಸಭಾ ಕ್ಷೇತ್ರಗಳ ಮತದಾರರ ಭಾವಚಿತ್ರ ಒಳಗೊಂಡ ಪಟ್ಟಿಯನ್ನು ವಿಶೇಷ ಪರಿಷ್ಕರಣೆ ಮಾಡಲಾಗುತ್ತಿದೆ. ಮತದಾರರ ಪಟ್ಟಿಯ ಬಗ್ಗೆ ಬಂದಂತಹ ದೂರು, ಆಕ್ಷೇಪಣೆಗಳ ಪರಿಶೀಲನೆ ನಡೆಯುತ್ತಿದ್ದು, ಡಿಸೆಂಬರ್‌ 31ರೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 2019ರ ಜನವರಿ 15ರಂದು ಮತದಾರರ ಭಾವಚಿತ್ರ ಇರುವ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ ಹೊಸ ಮತದಾರರ ಸೇರ್ಪಡೆಗಾಗಿ ಆನ್‌ಲೈನ್‌ ಮತ್ತು ನೇರವಾಗಿ ಅರ್ಜಿ ನಮೂನೆ 6ರಲ್ಲಿ 4,056 ಅರ್ಜಿಗಳು ಬಂದಿವೆ. ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ 4,589, ಯಾದಗಿರಿ ವಿಧಾನಸಭೆ ಕ್ಷೇತ್ರದಲ್ಲಿ 5,295 ಮತ್ತು ಗುರುಮಠಕಲ್‌ ವಿಧಾನಸಭೆ ಕ್ಷೇತ್ರದಲ್ಲಿ 4,305 ಸೇರಿದಂತೆ ಒಟ್ಟು 18,245 ಅರ್ಜಿಗಳು ಬಂದಿವೆ. ಮತದಾರರನ್ನು ತೆಗೆದು ಹಾಕಲು ಅರ್ಜಿ ನಮೂನೆ 7ರಲ್ಲಿ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ 13,420 ಅರ್ಜಿಗಳು ಬಂದಿವೆ. ಅರ್ಜಿ ನಮೂನೆ 8ರಲ್ಲಿ ತಿದ್ದುಪಡಿಗಾಗಿ 2,918 ಅರ್ಜಿ ಬಂದರೆ, ಒಂದು ಬೂತ್‌ನಿಂದ ಮತ್ತೂಂದು ಬೂತ್‌ಗೆ ಸ್ಥಳಾಂತರಕ್ಕಾಗಿ ಅರ್ಜಿ ನಮೂನೆ 8ಎ ನಲ್ಲಿ 415 ಅರ್ಜಿಗಳು ಸ್ವೀಕೃತವಾಗಿವೆ ಎಂದು ಅವರು ವಿವರಿಸಿದರು.

ಲೋಪದೋಷ ಇಲ್ಲದಂತೆ ಪರಿಷ್ಕರಿಸಿ: ವಿಧಾನಸಭಾ ಕ್ಷೇತ್ರಗಳ ಮತದಾರರ ಭಾವಚಿತ್ರ ಒಳಗೊಂಡ ಪಟ್ಟಿಯನ್ನು ಯಾವುದೇ ಲೋಪದೋಷ ಇಲ್ಲದಂತೆ ಸಿದ್ಧಪಡಿಸಲು ಅಧಿಕಾರಿಗಳು ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ನಿಯಮಾನುಸಾರ ಪರಿಷ್ಕರಣೆ ಮಾಡಿದಲ್ಲಿ ಚುನಾವಣೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ 8 ಮತದಾನ ಕೇಂದ್ರಗಳನ್ನು ಹೆಚ್ಚಿಸಲಾಗಿದ್ದು, ಮತಗಟ್ಟೆಗಳ ಸಂಖ್ಯೆ 1,135ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 4,87,799 ಪುರುಷ ಮತದಾರರು, 4,87,215 ಮಹಿಳಾ ಮತದಾರರು ಸೇರಿದಂತೆ ಒಟ್ಟು 9,75,014 ಮತದಾರರಿದ್ದಾರೆ ಎಂದು ತಿಳಿಸಿದರು. 

Advertisement

ಯಾವುದೇ ಮತದಾರನು ಎರಡು ಕಡೆ ಹೆಸರು ನೋಂದಾಯಿಸಿಕೊಂಡು ಮುಂದುವರಿದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯ 1950ರ ಕಲಂ 31ರನ್ವಯ ದಂಡನಾ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ಮತದಾರರ ಪಟ್ಟಿಗಳಲ್ಲಿ ಎರಡು ಕಡೆ ಹೆಸರು ನೋಂದಣಿಯಾಗಿದ್ದಲ್ಲಿ ಯಾವುದಾದರೂ ಒಂದು ದಾಖಲೆಯನ್ನು ನಮೂನೆ 7ರ ಮೂಲಕ ಅರ್ಜಿ ಸಲ್ಲಿಸಲು ಪ್ರಕಟಣೆ ಹೊರಡಿಸಿ, ಹೆಸರು ತೆಗೆದು ಹಾಕಲು ಅವಕಾಶ ನೀಡಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಮಾತನಾಡಿ, ಸ್ವೀಪ್‌ ಸಮಿತಿಯ ಕಾರ್ಯಚಟುವಟಿಕೆಗಳನ್ನು ಸಭೆಗೆ ಮಾಹಿತಿ ನೀಡಿದರು.

ವಿಕಲಚೇತನ ಮತದಾರರು ಜಿಲ್ಲೆಯಲ್ಲಿ 8,457 ಜನ ಇದ್ದಾರೆ. ಅವರಿಗೆ ಅನುಕೂಲವಾಗುವಂತೆ ಮತದಾನ ಕೇಂದ್ರಗಳಲ್ಲಿ ನಿರ್ಮಿಸಿದ ರ್‍ಯಾಂಪ್‌ ಗಳಲ್ಲಿ ಶೇ. 80ರಷ್ಟು ಚೆನ್ನಾಗಿವೆ. ಉಳಿದವು ಅತ್ಯಂತ ಇಳಿಜಾರಾಗಿವೆ. ಗ್ರಾಮಕ್ಕೊಂದರಂತೆ ವ್ಹೀಲ್‌ ಚೇರ್‌ ವ್ಯವಸ್ಥೆ ಮಾಡಿದರೆ ವಿಕಲಚೇತನರು ಅನಾಯಾಸವಾಗಿ ಮತದಾನ ಮಾಡಬಹುದು
ಮತ್ತು ಮತಗಟ್ಟೆಯ 100 ಮೀಟರ್‌ ಒಳಗಡೆ ಯಾವುದೇ ವಾಹನಗಳಿಗೆ ಪ್ರವೇಶ ಇಲ್ಲದಿರುವುದರಿಂದ ಹಿರಿಯ ನಾಗರಿಕರಿಗೂ ವ್ಹೀಲ್‌ ಚೇರ್‌ ಅನುಕೂಲವಾಗುತ್ತದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಶರಣಪ್ಪ ಪಾಟೀಲ ಅವರು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಸಹಾಯಕ ಆಯುಕ್ತ ಡಾ| ಬಿ.ಎಸ್‌. ಮಂಜುನಾಥ ಸ್ವಾಮಿ, ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ವಸಂತರಾವ್‌ ವಿ. ಕುಲಕರ್ಣಿ, ಚುನಾವಣೆ ಶಾಖೆಯ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್‌, ಜೆಡಿಎಸ್‌ ಪಕ್ಷದ ಶಾಂತಪ್ಪ ಜಾಧವ್‌ ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

ಬಿಎಲ್‌ಎ ನೇಮಿಸಿ ಚುನಾವಣಾ ಪೂರ್ವ ಅಧಿಕಾರಿಗಳು ನಡೆಸುವ ಪ್ರಕ್ರಿಯೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ. ಹಾಗಾಗಿ, ಎಲ್ಲಾ ರಾಜಕೀಯ
ಪಕ್ಷದವರು ಬೂತ್‌ ಲೆವೆಲ್‌ ಏಜೆಂಟ್‌ರನ್ನು ನೇಮಕ ಮಾಡುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿಖರ ಮಾಹಿತಿ ಪಡೆಯಲು ಬೂತ್‌ ಲೆವೆಲ್‌ ಆಫಿಸರ್‌ಗಳಿಗೆ
ಸಹಕರಿಸಬೇಕು. ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 629, ಕಾಂಗ್ರೆಸ್‌ 744, ಜೆಡಿಎಸ್‌ 334 ಬೂತ್‌ ಲೆವೆಲ್‌ ಏಜೆಂಟ್‌ರನ್ನು ಈಗಾಗಲೇ ನೇಮಕ ಮಾಡಿದ್ದಾರೆ.
 
ಉಳಿದ ಬೂತ್‌ಗಳಲ್ಲಿಯೂ ಕೂಡ ಎಲ್ಲಾ ರಾಜಕೀಯ ಪಕ್ಷದವರು ತಮ್ಮ ಬಿಎಲ್‌ಎ ಅವರನ್ನು ನೇಮಕ ಮಾಡಬೇಕು.  ಡಾ| ಜೆ. ರವಿಶಂಕರ್‌, ವಸತಿ ಇಲಾಖೆ ಸರ್ಕಾರದ ಕಾರ್ಯದರ್ಶಿ 

Advertisement

Udayavani is now on Telegram. Click here to join our channel and stay updated with the latest news.

Next