ಮೈಸೂರು: ನಗರದ ಎನ್.ಆರ್.ಮೊಹಲ್ಲಾದ ಜಿಲ್ಲಾ ಉದ್ಯೋಗ ವಿನಿಯಮ ಕಚೇರಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಮೈಸೂರು ಹಾಗೂ ಚಾಮರಾಜನಗರದ 180 ಮಂದಿ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದರು.
ಕೈಗಾರಿಕ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕಿ ಡಿ.ಎಂ.ರಾಣಿ ಚಾಲನೆ ನೀಡಿದರು.
ವಿಶ್ವ ಕೌಶಲ ದಿನದ ಅಂಗವಾಗಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮೈಸೂರು ನಗರ ಹಾಗೂ ಸುತ್ತಮುತ್ತಲಿನಲ್ಲಿರುವ ವಿವಿಧ ಕಂಪನಿಗಳು ಭಾಗವಹಿಸಿದ್ದವು. ಪ್ರಮುಖವಾಗಿ ಬಿ.ಎಸ್.ಗೌಡ ಎಂಟರ್ ಪ್ರೈಸಸ್, ಸುರಭಿ ಪ್ಲಾನಟೆಕ್, ಯುರೇಕಾಫೋಬ್ಸ್, ತೇಜಸ್ವಿನಿ ಎಂಟರ್ ಪ್ರೈಸಸ್,
ಬೆಂಗಳೂರಿನ ರೀಟೇಲ್ ವರ್ಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಹಿಂದುಜಾ ಗ್ಲೋಬಲ್ ಸಲ್ಯೂಷನ್, ರಾಜಾ ಬಯೋಟೆಕ್, ಗ್ರಾಸ್ ರೋಟ್, ಉಡ್‌ಲ್ಯಾಂಡ್, ರಾಣೆ ಮದ್ರಾಸ್ ಪ್ರೈವೆಟ್ ಲಿಮಿಟೆಡ್ ಸೇರಿದಂತೆ 23 ಕಂಪನಿಗಳು ತಮ್ಮ ಸಂಸ್ಥೆಗೆ ಅಗತ್ಯವಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡವು.
ಉದ್ಯೋಗ ಮೇಳದಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣ, ಅನುತ್ತೀರ್ಣ, ಪಿಯುಸಿ, ಜೆಒಸಿ, ಐಟಿಐ,ಡಿಪ್ಲೋಮಾ ಸೇರಿದಂತೆ ಪದವಿ ಪಡೆದವರಿಗೂ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಮೇಳದಲ್ಲಿ ಮೈಸೂರು-ಚಾಮರಾಜನಗರ ಜಿಲ್ಲೆಗಳ 486 ಯುವಕರು,
234 ಯುವತಿಯರು ಸೇರಿದಂತೆ 720 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಇವರಲ್ಲಿ 125 ಯುವಕರು, 55 ಯುವತಿಯರು ಸೇರಿದಂತೆ 180 ಮಂದಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.