Advertisement

ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ 18 ಬಾಂಗ್ಲಾ ನುಸುಳುಕೋರರು!

10:19 AM Jan 02, 2020 | Lakshmi GovindaRaj |

ಬೆಂಗಳೂರು: ಹತ್ತಾರು ವರ್ಷಗಳಿಂದ ನಗರದಲ್ಲಿಯೇ ಅಕ್ರಮವಾಗಿ ನೆಲೆಸಿದ್ದ 18 ಮಂದಿ ಬಾಂಗ್ಲಾದೇಶದ ನುಸುಳುಕೋರರು ವಿದೇಶಗಳಿಗೆ ಪರಾರಿಯಾಗುವ ವೇಳೆ ಬಂಧನವಾಗಿ ಜೈಲಿಗೆ ಕಳುಹಿಸುವಲ್ಲಿ ಈ ವರ್ಷ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ (ಇಮ್ಮಿಗ್ರೇಶನ್‌) ವಿಭಾಗ ಯಶಸ್ವಿಯಾಗಿದೆ.

Advertisement

ಪಶ್ಚಿಮ ಬಂಗಾಳದ ಇಂಡೋ- ಬಾಂಗ್ಲಾ ಗಡಿಗಳ ಮೂಲಕ ದಶಕಗಳ ಹಿಂದೆ ದೇಶದೊಳಕ್ಕೆ ನುಸುಳಿದ್ದ ಆರೋಪಿಗಳು, ಇಲ್ಲಿನ ಆಧಾರ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿ ಸೇರಿ ಹಲವು ದಾಖಲೆ ಪಡೆದುಕೊಂಡಿದ್ದಾರೆ. ಅಲ್ಲದೇ, ಬಹುತೇಕರು ಭಾರತೀಯರ ವೇಷದಲ್ಲಿಯೇ ಜೀವಿಸುತ್ತಿದ್ದರು ಎಂಬ ಸಂಗತಿಯೂ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಜೈಲು: ನಕಲಿ ದಾಖಲೆ, ಪಾಸ್‌ಪೋರ್ಟ್‌ ಬಳಸಿ ಅಕ್ರಮವಾಗಿ ವಿದೇಶಗಳಿಗೆ ತೆರಳುವವರ ಬಗ್ಗೆ ವಿಮಾನ ನಿಲ್ದಾಣದಲ್ಲಿ ನಿಗಾ ಇಟ್ಟಿರುವ ವಲಸೆ ಅಧಿಕಾರಿಗಳು, ಕಳೆದ ಜನವರಿಯಿಂದ ಡಿ.31ರ ಅಂತ್ಯಕ್ಕೆ ಅಕ್ರಮವಾಗಿ ದೇಶ ಬಿಟ್ಟು ಬಂದಿದ್ದ ವಿವಿಧ ದೇಶಗಳ 41 ಮಂದಿ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ. ಈ ಪೈಕಿ ಬಾಂಗ್ಲಾದವರೇ ಅಗ್ರ ಸ್ಥಾನ ಪಡೆದುಕೊಂಡಿದ್ದು 18 ಮಂದಿಯೂ ಇದೀಗ ಜೈಲು ಸೇರಿದ್ದಾರೆ.

ಬ್ಯಾಂಕಾಕ್‌, ಮಲೇಷಿಯಾಗೆ ಪರಾರಿ ಯತ್ನ: ನಕಲಿ ಪಾಸ್‌ಪೋರ್ಟ್‌ ಬಳಸುತ್ತಿದ್ದ ನುಸುಳುಕೋರರು ಉದ್ಯೋಗದ ಹೆಸರಿನಲ್ಲಿ ಬ್ಯಾಂಕಾಕ್‌, ಮಲೇಷಿಯಾ, ಇಂಡೋನೇಷಿಯಾ, ದುಬೈ ದೇಶಗಳಿಗೆ ತೆರಳುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದರು. ಈ ವೇಳೆ ವಲಸೆ ಅಧಿಕಾರಿಗಳು ಅವರ ದಾಖಲೆಗಳನ್ನು ಕೂಲಂಕಶವಾಗಿ ಪರಿಶೀಲಿಸಿದಾಗ ದಾಖಲೆಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿತ್ತು. ಕೆಲವು ಸಂದರ್ಭಗಳಲ್ಲಿ ನಕಲಿ ದಾಖಲೆ ಸಿಗುತ್ತಿದ್ದವು.

ವಿಚಾರಣೆಗೊಳಪಡಿಸಿ ದಾಗ ಬಾಂಗ್ಲಾದೇಶ ಮೂಲದ ಬಗ್ಗೆ ಬಾಯ್ಬಿಡುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಿ ವಿದೇಶಿಯರ ಕಾಯಿದೆ ಹಾಗೂ ಪಾಸ್‌ಪೋರ್ಟ್‌ ಕಾಯಿದೆ ಉಲ್ಲಂಘನೆ ಅನ್ವಯ ದೂರು ದಾಖಲಿಸುತ್ತಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು. ನಕಲಿ ಪಾಸ್‌ಪೋರ್ಟ್‌ ಬಳಸಿ ಸಿಕ್ಕಿಬಿದ್ದಿರುವ ಆರೋಪಿ ಸುರೇಶ್‌ ಸಿಕಂದರ್‌ ಎಂಬಾತನನ್ನು ವಿಚಾರಣೆ ನಡೆಸಿದಾಗ ” 15 ವರ್ಷಗಳ ಹಿಂದೆ ಏಜೆಂಟ್‌ವೊಬ್ಬರ ಮೂಲಕ ಬೆನಾಪೋಲೆ ಗಡಿ ಮೂಲಕ ಬಂದಿದ್ದ.

Advertisement

ಈ ವೇಳೆ ಬಿಎಸ್‌ಎಫ್ ಸಿಬ್ಬಂದಿಗೆ ಲಂಚದ ರೂಪವಾಗಿ 6000 ರೂ. ನೀಡಿದ್ದಾನೆ. ಬಳಿಕ ಕೊಲ್ಕತ್ತಾದಲ್ಲಿ ನೆಲೆಸಿ 2015ರಲ್ಲಿ ಬೆಂಗಳೂರಿಗೆ ಬಂದಿದ್ದು ಏರ್‌ ಕಂಡೀಷನ್‌ ನಿರ್ವಹಣೆ ಮಾಡಿ ಕೊಂಡು ಇದ್ದಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿ ವಿವರಿಸಿದರು.

ಉಳಿದ ದೇಶಗಳ ಆರೋಪಿಗಳು: ಇನ್ನು ನಕಲಿ ಪಾಸ್‌ಪೋರ್ಟ್‌ ಸೇರಿ ವಿದೇಶಿ ನಿಯಮಗಳ ಕಾಯಿದೆ ಉಲ್ಲಂಘನೆ ಸೇರಿ ಇನ್ನಿತರೆ ಆರೋಪಗಳ ಸಂಬಂಧ ಮಹಿಳೆಯರು ಸೇರಿ ಮಯನ್ಮಾರ್‌ನ 7, ನೇಪಾಳದ 10 ಮಂದಿ, ಶ್ರೀಲಂಕಾದ 3 ಮಂದಿ, ಕಜಕಿಸ್ತಾನ ಹಾಗೂ ಟಿಬೆಟ್‌, ನೈಜೀರಿಯಾದ ದೇಶಗಳ ಒಬ್ಬೊಬ್ಬ ಪ್ರಜೆ ಸಿಕ್ಕಿಬಿದ್ದಿದ್ದಾರೆಂದು ಮೂಲಗಳು ಹೇಳಿವೆ.

ಗಡಿಪಾರಾದ 59 ಮಂದಿ: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 22 ಮಹಿಳೆಯರು ಸೇರಿ 59 ಬಾಂಗ್ಲಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಈ ಹಿಂದೆ ಬಂಧಿ ಸಿದ್ದರು. ಅವರನ್ನು ಪೊಲೀಸರು ಬಾಂಗ್ಲಾ ಗಡಿಗೆ ತೆರಳಿ ಬಿಎಸ್‌ಎಫ್ ಸಿಬ್ಬಂದಿ ಸಹಕಾರದೊಂದಿಗೆ ನವೆಂಬರ್‌ನಲ್ಲಿ ಗಡಿಪಾರು ಮಾಡಿ ಬಂದಿದ್ದರು.

10-15 ವರ್ಷದಿಂದ ಠಿಕಾಣಿ: ಸಿಎಎ ಹಾಗೂ ಎನ್‌ಆರ್‌ಸಿ ಜಾರಿ ವಿಚಾರ ತೀವ್ರವಾದ ಬೆನ್ನಲ್ಲೇ ಡಿಸೆಂಬರ್‌ನಲ್ಲಿಯೇ 7 ಮಂದಿಯನ್ನು ಬಂಧಿಸಲಾಗಿದೆ. ಉಳಿದಂತೆ ಇತರೆ ತಿಂಗಳಲ್ಲಿ ಸರಾಸರಿ ಒಬ್ಬರು, ಇಬ್ಬರು ಬಂಧನವಾಗುತ್ತಿದ್ದರು.

ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಬಾಂಗ್ಲಾ ನುಸುಳುಕೋರರ ಹಿನ್ನೆಲೆ ಕೆದಕಿದಾಗ ಬಂಧಿತರ ಪೈಕಿ ಬಹುತೇಕರು, 10-15 ವರ್ಷಗಳಿಂದ ನಗರದಲ್ಲಿಯೇ ಠಿಕಾಣಿ ಹೂಡಿದ್ದರು ಎಂಬ ಮಾಹಿತಿ ಬಯಲಾಗಿದೆ. ಆರೋಪಿಗಳು ಭಾರತದ ವಾಸಿಗಳು ಎಂದು ಆಧಾರ್‌ ಕಾರ್ಡ್‌, ಮತದಾನ ಗುರುತಿನ ಚೀಟಿ, ಬೆಂಗಳೂರು ನಗರ ದಲ್ಲಿ ವಾಸವಿರುವ ಮನೆಗಳ ವಿದ್ಯುತ್‌ ಸಂಪರ್ಕ ಬಿಲ್‌, ಡ್ರೈವಿಂಗ್‌ ಲೈಸೆನ್ಸ್‌ ಪತ್ತೆ ಯಾಗಿವೆ.

ಗಡಿಗಳೇ ರಹದಾರಿ: ಬಂಧಿತ ಆರೋಪಿಗಳು ಭಾರತಕ್ಕೆ ಪಶ್ಚಿಮ ಬಂಗಾಳದ ಬಾಂಗ್ಲಾ ಗಡಿಗೆ ಹೊಂದಿಕೊಂಡಿರುವ ತಾರಿ ಗಡಿ, ಸೋನಾಮರ್‌, ಸಾತ್ಕಿರಾ, ಬೆನಾಪೂಲೆ ಗಡಿಗಳ ಮೂಲಕ ದೇಶದೊಳಕ್ಕೆ ಪ್ರವೇಶಿಸುತ್ತಿದ್ದರು. ಬಂಗಾಳ, ತ್ರಿಪುರಾ ಇನ್ನಿತರೆ ಭಾಗಗಳಲ್ಲಿ ಕೆಲ ಕಾಲ ಅಕ್ರಮವಾಗಿ ನೆಲೆಸಿ ಬಳಿಕ ಬೆಂಗಳೂರಿಗೆ ಬಂದು ನೆಲೆಕಂಡುಕೊಳ್ಳುತ್ತಿದ್ದರು ಎಂಬ ಸಂಗತಿ ಆರೋಪಿಗಳ ವಿಚಾರಣೆ ಹಾಗೂ ತನಿಖೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next