Advertisement
ಕೋವಿಡ್, ಬ್ಲ್ಯಾಕ್ ಫಂಗಸ್ ಸ್ಥಿತಿಗತಿ ಕುರಿತು ಸಭೆ ನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 1,763 ವೈದ್ಯರನ್ನು ನೇರ ನೇಮಕಾತಿ ಮಾಡುವ ಪ್ರಕ್ರಿಯೆ ಮುಗಿದು ಅಧಿಸೂಚನೆ ಹೊರಡಿಸಲಾಗಿದೆ. 715 ತಜ್ಞರು, 75 ಜನರಲ್ ಮೆಡಿಸಿನ್, 57 ಜನರಲ್ ಸರ್ಜನ್, 145 ಗೈನಕಾಲಜಿಸ್ಟ್, 40 ಇಎನ್ ಟಿ, 35 ಚರ್ಮರೋಗ ತಜ್ಞರು, 142 ಅರವಳಿಕೆ ತಜ್ಞರು, 153 ಮಕ್ಕಳ ತಜ್ಞರು, 17 ರೇಡಿಯಾಲಜಿಸ್ಟ್ ಗಳನ್ನು ನೇಮಿಸಲಾಗುತ್ತಿದೆ. ಜೊತೆಗೆ 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಇದರಿಂದಾಗಿ ಆರೋಗ್ಯ ವ್ಯವಸ್ಥೆ ಬಲವಾಗಲಿದೆ. ಉತ್ತರ ಕರ್ನಾಟಕ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೆಚ್ಚಿದ್ದು, ಈಗ ಸಮಸ್ಯೆ ನೀಗಲಿದೆ. ಗದಗ, ಹುಬ್ಬಳ್ಳಿ, ಬೆಳಗಾವಿ, ರಾಯಚೂರು ಮೊದಲಾದ ಜಿಲ್ಲೆಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ ಅಲ್ಲಿಗೆ ನೇಮಿಸಬೇಕೆಂದು ಸೂಚಿಸಲಾಗಿದೆ. ಶೀಘ್ರದಲ್ಲಿ ಸ್ಥಳ ನಿಯೋಜನೆ ಮಾಡಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
Related Articles
Advertisement
ಎಲ್ಲ ಕೋವಿಡ್ ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದರಿಂದ ಸಂಬಂಧಿಕರು ಆರೈಕೆ ಹೇಗಾಗುತ್ತಿದೆ ಎಂದು ನೋಡಬಹುದು, ಹೊರಗಿನಿಂದ ಬರುವುದನ್ನು ತಪ್ಪಿಸುವುದರಿಂದ ಬ್ಲ್ಯಾಕ್ ಫಂಗಸ್ ನಿಯಂತ್ರಿಸಬಹುದು, ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬಹುದು. ಪ್ರತಿ ಜಿಲ್ಲೆಯ ಆಸ್ಪತ್ರೆಗಳ ಕಾರ್ಯನಿರ್ವಹಣೆಯನ್ನು ಒಂದೇ ಕಡೆ ವೀಕ್ಷಿಸುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.
ಆರೋಗ್ಯ ಸಹಾಯಕರಿಗೆ ಅಧಿಕಾರಿಗಳು ಎಂದು ಪದನಾಮ ಬದಲಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ 10 ಸಾವಿರ ರೂ., ನರ್ಸಿಂಗ್ ಸಿಬ್ಬಂದಿಗೆ 8 ಸಾವಿರ ರೂ., ಗ್ರೂಪ್ ಡಿ ಸಿಬ್ಬಂದಿಗೆ 10 ಸಾವಿರ ರೂ. ರಿಸ್ಕ್ ಭತ್ಯೆಯನ್ನು ಏಪ್ರಿಲ್ 1 ರಿಂದ ನೀಡಲು ಆದೇಶಿಸಲಾಗಿದೆ. ಆಶಾ ಕಾರ್ಯಕರ್ತರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲೇ ವೇತನ ಪಾವತಿಸುವ ವ್ಯವಸ್ಥೆ ತರಲಾಗಿದೆ. 17 ಜಿಲ್ಲೆಗಳಲ್ಲಿ ವೇತನ ಸಂಪೂರ್ಣ ಸಿಕ್ಕಿದೆ. ಎರಡು ದಿನಗಳಲ್ಲಿ ಉಳಿದೆಡೆ ವೇತನ ಕೈ ಸೇರಲಿದೆ ಎಂದು ಸ್ಪಷ್ಟಪಡಿಸಿದರು.
446 ಮಂದಿಗೆ ಬ್ಲ್ಯಾಕ್ ಫಂಗಸ್
ಈವರೆಗೆ ರಾಜ್ಯದಲ್ಲಿ 446 ಜನರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆ. 433 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 11 ಮಂದಿ ಮನೆಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದೆ. 12 ರೋಗಿಗಳು ಮೃತಪಟ್ಟಿದ್ದಾರೆ. ಈ ಸೋಂಕು ನಿವಾರಣೆಗೆ 1 ಸಾವಿರ ಔಷಧಿ ವೈಲ್ ಗಳು ಕೇಂದ್ರದಿಂದ ಸಿಗಲಿದೆ ಎಂದು ಸಚಿವರು ತಿಳಿಸಿದರು.