ಮಧ್ಯ ಪ್ರದೇಶ: ಪ್ರೇಮ ವಿವಾಹ ನಿರಾಕರಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಅಪ್ರಾಪ್ತ ಮಗಳೊಬ್ಬಳು ಅಂತ್ಯವಾಗಿಸಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಮಮತಾ ಕುಶ್ವಾಹಾ ಮೃತ ಮಹಿಳೆ. ಮಮತಾ ಅವರ ಮಗಳು ಕಳೆದ ಕೆಲ ಸಮಯದಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಮಗಳ ಸಂಬಂಧಕ್ಕೆ ತಾಯಿ ವಿರೋಧ ವ್ಯಕ್ತಪಡಿಸಿದ್ದರು. ಆ ಕಾರಣಕ್ಕಾಗಿ ಈ ಕೃತ್ಯವನ್ನು ಎಸಗಿದ್ದಾರೆ.
ಮಮತಾಳ ಮಗಳನ್ನು ಆಕೆಯ ಪ್ರಿಯಕರ ಕೆಲ ಸಮಯದ ಹಿಂದೆ ಅಪಹರಿಸಿ, ಆಕೆಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಠಾಣೆಗೆ ದೂರು ದಾಖಲು ಮಾಡಿದ್ದರು. ಆ ಬಳಿಕ ಯುವಕ ಜೈಲು ಸೇರಿದ್ದ. ಇತ್ತೀಚೆಗೆ ಯುವಕ ಜೈಲಿನಿಂದ ಹೊರ ಬಂದು, ಯುವತಿಯೊಂದಿಗೆ ಮತ್ತೆ ಮಾತುಕತೆ ನಡೆಸಲು ಆರಂಭಿಸಿದ್ದಾನೆ. ಮಮತಾ ಇದನ್ನು ವಿರೋಧಿಸಿ ಮಗಳಿಗೆ ಬುದ್ದಿವಾದ ಹೇಳಿದ್ದರು.
ಏನೇ ಆಗಲಿ ಆತನೇ ಬೇಕೆಂದು ಹಟ ಮಾಡಿ ಕುಳಿತಿದ್ದ ಮಗಳು, ತನ್ನ ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ, ಚಾಕುವಿನಿಂದ ತಿವಿದು ಹೆತ್ತ ತಾಯಿಯ ಪ್ರಾಣವನ್ನೇ ತೆಗೆದಿದ್ದಾರೆ. ಆ ಬಳಿಕ ಶವವನ್ನು ಬೆಡ್ ನಡಿಯಲ್ಲಿ ಇಟ್ಟು, ಪ್ರಿಯಕರನೊಂದಿಗೆ ರಾತ್ರಿ ಕಳೆದಿದ್ದಾಳೆ.
ಬಾಡಿಗೆ ಮನೆಯಲ್ಲಿ ಮಗಳೊಂದಿಗೆ ಮಮತಾ ವಾಸವಾಗಿದ್ದರು. ಮನೆಯ ಮಾಲೀಕ ಸಂಶಯಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಇಬ್ಬರನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.