ರಾಮನಗರ: ಬಿಡದಿ ಹೋಬಳಿಯ ಐದು ಗ್ರಾಪಂಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಒಟ್ಟು 17.56 ಕೋಟಿ ರೂ. ಬಿಡುಗಡೆಯಾಗಿದೆ, ಗ್ರಾಮಪಂಚಾಯ್ತಿಗಳಿಗೆ ಇನ್ನಷ್ಟು ಬಲ ತುಂಬಲು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಕೊಡುವಂತೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥನಾರಾಯನ ಆ ಭಾಗದ ಮತದಾರರಿಗೆ ಮನವಿ ಮಾಡಿದರು.
ಡಿ.22ರಂದು ನಡೆಯುವ ಗ್ರಾಮಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಬಿಡದಿ ಹೋಬಳಿ ಬನ್ನಿಕುಪ್ಪೆ (ಬಿ) ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರದಲ್ಲಿಭಾಗವಹಿಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಭಾವಿ ನಾಯಕರಿದ್ದೂ ಈ ಭಾಗದಲ್ಲಿ ಕೃಷಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನವಾಗಿಲ್ಲ. ಕೇವಲ ಆಶ್ವಾಸನೆಗಳಲ್ಲೇ ಕಾಲ ಕಳೆಯಲಾಗಿದೆ. ಅವರಹಿಂಬಾಲಕರ ಅಭಿವೃದ್ಧಿ ಆಯಿತೆ ವಿನಃ, ಕ್ಷೇತ್ರದ ಅಭಿವೃದ್ಧಿಯಾಗಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.ಬೈರಮಂಗಲ ಕೆರೆ ಅಭಿವೃದ್ಧಿ, ಜಲಾಶಯದ ಎಡ ಮತ್ತು ಬಲ ದಂಡೆಗಳ ಅಭಿವೃದ್ಧಿ, ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳ ಬಗ್ಗೆ ಸಚಿವರು ಮಾತನಾಡಿದರು.
ಡಿ.ಕೆ. ಸಹೋದರರ ವಿರುದ್ಧಕಿಡಿ: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ (ನರೇಗಾ) ಕನಕಪುರ ತಾಲೂಕಿ ನಲ್ಲಾಗಿರುವ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂಡಾ.ಸಿ.ಎನ್.ಅಶ್ವಥನಾರಾಯಣ, ಅಲ್ಲಿ ನರೇಗಾ ಯೋಜನೆಯಡಿ ಏನೆಲ್ಲಾ ವ್ಯತ್ಯಾಸಗಳಾಗಿವೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ, ಜಿಲ್ಲೆಯಲ್ಲಿ ಇನ್ನು ಮುಂದೆ ದಬ್ಟಾಳಿಕೆ ರಾಜಕಾರಣ, ಪ್ರಜಾ ಪ್ರಭುತ್ವದ ನಿಜ ಅರ್ಥ ತಿಳಿಯಲಿದೆ ಎಂದು ಪರೋಕ್ಷವಾಗಿ ಡಿ.ಕೆ. ಸಹೋದರರ ವಿರುದ್ಧ ಗುಡುಗಿದರು.
ಗೋಷ್ಠಿಯಲ್ಲಿ ಎಂಎಲ್ಸಿಗಳಾದ ಪುಟ್ಟಣ್ಣ, ಅ.ದೇವೇಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಮಾಗಡಿ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ರಂಗಧಾಮಯ್ಯ, ಮುಖಂಡಎಚ್.ಎಂ.ಕೃಷ್ಣಮೂರ್ತಿ, ಮಾಗಡಿ ಮಂಡಲ ಘಟಕದಅಧ್ಯಕ್ಷ ಧನಂಜಯ, ಪ್ರಧಾನ ಕಾರ್ಯದರ್ಶಿ ಸಂದೀಪ್, ಕಾರ್ಯದರ್ಶಿ ಲೋಕೇಶ್, ರೈತ ಮೋರ್ಚಾ ಘಟಕದ ಉಪಾಧ್ಯಕ್ಷ ನಾರಾಯಣರೆಡ್ಡಿ, ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಶಿವಣ್ಣ, ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಮುತ್ತುರಾಜ್ ಉಪಸ್ಥಿತರಿದ್ದರು.