Advertisement

ಆಂತರಿಕ ಗೊಂದಲ ಬದಿಗೊತ್ತಿದರೆ ಮಾತ್ರ ಸಾಧ್ಯ

06:40 PM Apr 05, 2022 | Team Udayavani |

ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯೂ 150 ಟಾರ್ಗೆಟ್‌ ಇಟ್ಟುಕೊಂಡಿದೆ. ಜೆಡಿಎಸ್‌ 130 ಟಾರ್ಗೆಟ್‌ ಹಾಕಿಕೊಂಡಿದೆ. ಇದೀಗ ರಾಹುಲ್‌ ಗಾಂಧಿ 150 ಟಾರ್ಗೆಟ್‌ ಕೊಟ್ಟಿದ್ದಾರೆ. ವಾಸ್ತವವಾಗಿ ಹೇಳಬೇಕಾದರೆ ಇವತ್ತಿನ ಸ್ಥಿತಿಯಲ್ಲಿ ಮ್ಯಾಜಿಕ್‌ ನಂಬರ್‌ ತಲುಪುವುದೇ ಮೂಲ ಗುರಿ. ವರಿಷ್ಠರು ನೀಡಿರುವ ಗುರಿ ಮುಟ್ಟಲು ಕಾಂಗ್ರೆಸ್‌ ಮತ್ತು ಬಿಜೆಪಿ ಬೆನ್ನಟ್ಟಿದ್ದರೆ ಜೆಡಿಎಸ್‌ಗೆ “ಕಿಂಗ್‌ಮೇಕರ್‌’ ಕನಸು ಚಿಗುರೊಡೆದಂತಿದೆ. ಮೂರೂ ಪಕ್ಷಗಳು ಚುನಾವಣೆಗೆ ವರ್ಷಕ್ಕೆ ಮುಂಚೆಯೇ ತಮ್ಮ ವರಸೆ ತೋರಲಾರಂಭಿಸಿವೆ.

Advertisement

ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡಿದ ನಂತರ ರಾಜ್ಯ ಬಿಜೆಪಿಯಲ್ಲಿ ಉತ್ಸಾಹದ ಜೊತೆಗೆ ಜವಾಬ್ದಾರಿ ನಿರ್ವಹಣೆಯ ಆತಂಕವೂ ಆರಂಭವಾಗಿದೆ. ಈ ಬಾರಿ 150 ಸ್ಥಾನ ಗೆಲ್ಲುವುದನ್ನು ಕೇವಲ ಬಾಯಿ ಮಾತಲ್ಲಿ ಹೇಳಿದರೆ ಸಾಲದು ಅದಕ್ಕೆ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಮತ್ತು ಅದಕ್ಕೆ ಪೂರಕವಾದ ನೀಲನಕ್ಷೆಯಲ್ಲಿ ಏ.16ರೊಳಗೆ ನೀಡಬೇಕೆಂಬ ಕೇಂದ್ರ ಸಚಿವ ಅಮಿತ್‌ ಶಾ ಅವರ ಖಡಕ್‌ ಸೂಚನೆ ಎಲ್ಲ ನಾಯಕರಲ್ಲಿ ಒಂದು ರೀತಿಯ ಆತಂಕದ ಉತ್ಸಾಹ ಮೂಡುವಂತೆ ಮಾಡಿದೆ.

ರಾಜ್ಯ ಬಿಜೆಪಿ ನಾಯಕರ ನಡುವೆ ಬಾಹ್ಯವಾಗಿ ಒಗ್ಗಟ್ಟು ಕಂಡು ಬರುತ್ತಿದ್ದರೂ, ಆಂತರಿ ಕವಾಗಿ ರಾಜ್ಯ ನಾಯಕತ್ವರಲ್ಲಿ ಇನ್ನೂ ಗೊಂದಲ ಗಳಿದ್ದು, ಅದನ್ನು ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯತೆ ಎದುರಾಗಿದೆ. ರಾಜ್ಯದಲ್ಲಿ ಹಿಜಾಬ್‌, ಹಲಾಲ್‌ ಕಟ್‌ ಪ್ರಕರಣಗಳ ನಂತರ ರಾಜ್ಯ ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಿಸಿದ್ದು, ಆದರೆ, ಕೇಂದ್ರ ಅಮಿತ್‌ ಶಾ ಅವರಿಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಬಗ್ಗೆ ವಿಶ್ವಾಸ ಮೂಡಿದಂತೆ ಕಾಣಿಸುತ್ತಿಲ್ಲ.

ಉತ್ತರ ಪ್ರದೇಶ ಸೇರಿದಂತೆ ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳನ್ನು ಹಿಂದುತ್ವದ ಅಸ್ತ್ರ ಪ್ರಯೋಗಿಸಿ ಗೆಲುವಿನ ನಗೆ ಬೀರಿರುವ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅದೇ ಅಸ್ತ್ರ ಯಶಸ್ವಿಯಾಗುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಮೂಡಿದಂತೆ ಕಾಣಿಸುತ್ತಿದೆ. ಅದೇ ಕಾರಣಕ್ಕೆ ಅಮಿತ್‌ ಶಾ, ಕೇವಲ 150 ಸೀಟ್‌ ಗೆಲ್ಲುವ ಮಂತ್ರ ಜಪಿಸಿದರೆ ಸಾಧ್ಯವಿಲ್ಲ. ಅದನ್ನು ಸಾಧಿಸಲು ಬೇಕಾದ ಮಾರ್ಗ
ತೋರಿಸಿ ಎಂದು ಸೂಚಿಸಿರುವುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಂಪುಟ ಸಂಘರ್ಷ
ಚುನಾವಣೆ ಕೇವಲ ಒಂದು ವರ್ಷ ಉಳಿದಿದ್ದರೂ, ಸಚಿವಾಕಾಂಕ್ಷಿಗಳಲ್ಲಿ ಮಾತ್ರ ಸಂಪುಟ ಸೇರುವ ಆಸೆ ಇನ್ನೂ ಜೀವಂತವಾಗಿದೆ. ಪ್ರಮುಖವಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬ ಒತ್ತಡ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಇದೆ ಎನ್ನಲಾಗುತ್ತಿದ್ದು, ಸಂಪುಟ ಪುನಾರಚನೆಯ ಗೊಂದಲ ನಿವಾರಣೆಯಾಗದ ಹೊರತು ರಾಜ್ಯ ಬಿಜೆಪಿಯಲ್ಲಿ ಚುನಾವಣೆಯ ನೀಲ ನಕ್ಷೆ ಸಿದ್ದಪಡಿಸುವುದು ಕಷ್ಟಸಾಧ್ಯ.

Advertisement

ರಾಜ್ಯದಲ್ಲಿ ಬಿಜೆಪಿ ಬೆನ್ನಿಗೆ ಪ್ರಬಲವಾಗಿ ಲಿಂಗಾ ಯತ ಸಮುದಾಯ ನಿಂತಿದೆ ಎಂಬ ಭಾವನೆ ಇದ್ದು, ಅದೇ ರೀತಿ ಒಕ್ಕಲಿಗ ಮತ್ತು ಕುರುಬ ಸಮುದಾಯ ವನ್ನು ಬಿಜೆಪಿ ಕಡೆಗೆ ಮುಖ ಮಾಡುವಂತೆ ಮಾಡಲು ಅಗತ್ಯ ಕಾರ್ಯತಂತ್ರ ರೂಪಿಸಲು ಅಮಿತ್‌ ಶಾ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯವನ್ನು ಸೆಳೆಯಲು ಜವಾಬ್ದಾರಿ ಹೊತ್ತುಕೊಳ್ಳುವ ನಾಯಕನ ಹುಡುಕುವಂತೆ ಸೂಚನೆ ನೀಡಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಒಕ್ಕಲಿಗ ಮತ್ತು ಕುರುಬ ಸಮುದಾಯದ ಮತಗಳನ್ನು ಸೆಳೆಯುವ ನಾಯಕರ ಕೊರತೆ ಇದೆ ಎನ್ನುವುದನ್ನು ಅಮಿತ್‌ ಶಾ ಪರೋಕ್ಷವಾಗಿ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಇದು ರಾಜ್ಯ ಬಿಜೆಪಿ ನಾಯಕರ ಚಿಂತೆಗೆ ಕಾರಣವಾಗಿದೆ.

ಈ ಮಧ್ಯೆ, ಬಸವರಾಜ ಬೊಮ್ಮಾಯಿ ಅವರ ನೇತೃತ್ವ ದಲ್ಲಿಯೇ ಮುಂದಿನ ವಿಧಾನಸಭೆ ಚುನಾವಣೆ ಯನ್ನು ಎದುರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟವಾಗಿ ಘೋಷಣೆ ಮಾಡಿ ದ್ದರೂ, ಅವರ ಏಕ ನಾಯಕತ್ವವನ್ನು ಒಪ್ಪಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿರು ವಂತೆ ಕಾಣಿಸುತ್ತಿದೆ. ಸ್ವತಃ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಕೂಡ ತಮ್ಮ ನಾಯಕತ್ವವನ್ನು ಈಗಲೂ ಪ್ರತಿಪಾದಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಎಲ್ಲ ಆಂತರಿಕ ಒಳ ಮುನಿಸಿನ ಜೊತೆಗೆ ರಾಜ್ಯ ದಲ್ಲಿ ನಡೆಯುತ್ತಿರುವ ಹಿಂದೂಪರ ಹೋರಾಟಗಳು, ಪಂಚರಾಜ್ಯಗಳ ಚುನಾವಣಾ ಫ‌ಲಿತಾಂಶ, ಹೈಕ ಮಾಂಡ್‌ ನಾಯಕರ ಬೆಂಬಲ ರಾಜ್ಯ ಬಿಜೆಪಿ ನಾಯ ಕರಲ್ಲಿ ಆಂತರಿಕ ಗೊಂದಲ ಮರೆತು ಮುನ್ನಡೆಯುವ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದೂ ಹೇಳಲಾಗುತ್ತಿದೆ.

ಕ್ಲಾರಿಟಿ ಸಿಗುತ್ತಿಲ್ಲ
ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಆದರೂ ಎಲ್ಲವೂ ಸರಿ ಇದೆ ಎಂದು ಬಿಂಬಿಸಿಕೊಳ್ಳಲಾಗುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ 75 ರಿಂದ 100 ಸೀಟುಗಳ ಬಗ್ಗೆಯಷ್ಟೇ ಕ್ಲಾರಿಟಿ ಸಿಗುತ್ತಿದೆ. ಹೀಗಾಗಿ, ಕ್ರಮಿಸಬೇಕಾದ ಹಾದಿ ದೂರವೇ ಇದೆ. ಜೆಡಿಎಸ್‌ ಮೈ ಕೊಡವಿ ಎದ್ದು ನಿಂತಿದ್ದು ಯಾರಿಗೆ ಇದು ಯಾರಿಗೆ “ಟಕ್ಕರ್‌’ ಕೊಡಲಿದೆ ಎಂಬುದು ಈಗಲೇ ಹೇಳ ಲಾಗದು. ಮುಂದಿನ ದಿನಗಳಲ್ಲಿ ಯಾವ್ಯಾವ ವಿಚಾರಗಳು ಮುನ್ನಲೆಗೆ ಬರುತ್ತವೋ ಅದು ಯಾರಿಗೆ ಯಾವ ರೀತಿಯ ಲಾಭ-ನಷ್ಟ ತಂದು ಕೊಡುವುದೋ ಕಾದು ನೋಡಬೇಕಾಗಿದೆ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next