Advertisement

15 ವರ್ಷವಾದರೂ ಪೂರ್ಣಗೊಳ್ಳ ದ ಭವನ ನಿರ್ಮಾಣ ಕಾಮಗಾರಿ!

04:58 PM Dec 27, 2021 | Team Udayavani |

ಹೂವಿನಹಡಗಲಿ: 15 ವರ್ಷ ಕಳೆದರೂ ತಾಲೂಕಿನ ಕನಕ ಭವನ ನಿರ್ಮಾಣಕ್ಕೆ ಮುಹೂರ್ತವೇ ಕೂಡಿ ಬರುತ್ತಿಲ್ಲ.

Advertisement

2005-2006ರಲ್ಲಿ ಎಂ.ಪಿ. ಪ್ರಕಾಶ್‌ ಅವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೂಮಿಪೂಜೆ ನೆರವೇರಿಸಿ ಅಂದಾಜು 4 ಲಕ್ಷ ರೂಗಳ ಅನುದಾನದಲ್ಲಿ ಕನಕ ಭವನ ನಿರ್ಮಾಣ ಕಾಮಗಾರಿ ಆರಂಭಗೊಂಡಿತು. ಪಟ್ಟಣದ ಹೌಸಿಂಗ್‌ ಕಾಲೋನಿ ಪಕ್ಕದಲ್ಲಿ ಸುಮಾರು 30/40 ಅಳತೆಯ 12 ಸೈಟಿನಲ್ಲಿ ಅಂದಿನ ಸಚಿವರಾಗಿದ್ದ ಎಂ.ಪಿ. ಪ್ರಕಾಶ ಅವರ ಪುತ್ರ ಎಂ.ಪಿ. ರವೀಂದ್ರ ಅವರು ಸುಮಾರು ಅರ್ಧ ಎಕರೆಯಷ್ಟು ಅಳತೆ ಜಾಗದಲ್ಲಿ ಕನಕ ಭವನ ನಿರ್ಮಾಣಕ್ಕೆ ನೋಂದಣಿ ಮಾಡಿಸಿದ್ದರು ಅಂದಿನಿಂದ ಇಂದಿನವರೆಗೆ ಭವನ ನಿರ್ಮಾಣ ಸಂಪೂರ್ಣಗೊಂಡಿಲ್ಲ.

ನಂತರದಲ್ಲಿ ಬಳ್ಳಾರಿ ಜಿಲ್ಲಾ ವಿಧಾನ ಪರಿಷತ್‌ ಸದಸ್ಯರಾಗಿದ್ದ ಕೆ.ಎಸ್‌.ಎಲ್‌ ಸ್ವಾಮಿ ತಮ್ಮ ಅನುದಾನದಲ್ಲಿ 3 ಲಕ್ಷ ರೂ, ಭೈರತಿ ಸುರೇಶ್‌ ಅವರ ಅನುದಾನದಲ್ಲಿ 5 ಲಕ್ಷ ರೂ, ಪುರಸಭೆ ಅನುದಾನದಲ್ಲಿ 8 ಲಕ್ಷ ರೂಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು. ಕಟ್ಟಡ ಕಾಮಗಾರಿ ಹಂತ-ಹಂತವಾಗಿ ಮೇಲೇರುತ್ತ ಸಾಗಿತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಿಟಿ ಪರಮೇಶ್ವರನಾಯ್ಕ ಅವರು ಶಾಸಕರಾಗಿ 2013ರಲ್ಲಿ ಆಯ್ಕೆಯಾದ ಮೇಲೆ ಪ್ರಸ್ತುತ ಕನಕ ಭವನಕ್ಕೆ ಸುಮಾರು 15 ಲಕ್ಷ ರೂಗಳನ್ನು ಶಾಸಕರ ಅನುದಾನದಲ್ಲಿ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಅಧಿ ಕಾರವ ಧಿಯಲ್ಲಿ 50 ಲಕ್ಷ ರೂಗಳ ಅನುದಾನ ಹಂಚಿಕೆ ಮಾಡಲಾಯಿತು. ಬಿಡುಗಡೆಯಾಗಿದ್ದು ಮಾತ್ರ 37 ಲಕ್ಷ ರೂ. ಈ ಹಣದಲ್ಲಿ ಉಳಿದ ಕಾಮಗಾರಿ ಕೈಗೊಳ್ಳಲಾಯಿತಾದರೂ ಭವನ ಮಾತ್ರ ಪೂರ್ಣಗೊಳ್ಳಲೇ ಇಲ್ಲ. ಇನ್ನೂ ಮೊನ್ನೆ ಮೊನ್ನೆ ತಾನೆ ಶಾಸಕ ಪಿ.ಟಿ ಪರಮೇಶ್ವರ ನಾಯ್ಕ ಅವರು ಸುಮಾರು 25 ಲಕ್ಷ ರೂಗಳ ಹಣ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ.

ಮುಗಿಯದ ಕಟ್ಟಡ ನಿರ್ಮಾಣ

ಕನಕ ಭವನ ನಿರ್ಮಾಣ ಕಾಮಗಾರಿ ಆರಂಭವಾಗಿ ಸುಮಾರು 15 ವರ್ಷ ಕಳೆದರೂ ಪೂರ್ಣಗೊಳ್ಳದೇ ಇನ್ನು ಅರೆ, ಬರೆ ಕಟ್ಟಡವಿದ್ದು ಪ್ರಸ್ತುತ ಭವನ ಯಾವಾಗ ಪೂರ್ಣಗೊಳ್ಳುವುದು ಎನ್ನುವುದು ಕುರುಬ ಜನಾಂಗದವರ ಪ್ರಶ್ನೆಯಾಗಿದೆ. ಕನಕ ಭವನ ನಿರ್ಮಾಣಕ್ಕಾಗಿ ಈಗಾಗಲೇ ಸುಮಾರು 75ರಿಂದ 80 ಲಕ್ಷ ರೂ. ಖರ್ಚಾಗಿದ್ದರೂ ಕಟ್ಟಡ ಸಂಪೂರ್ಣಗೊಂಡಿಲ್ಲ. ಈಗಾಗಲೇ ಕಟ್ಟಿರುವ ನೆಲ ಅಂತಸ್ತು, ಅಪೂರ್ಣಗೊಂಡಿರುವ ಒಂದನೆ ಮಹಡಿ ಇನ್ನೂ ಕೆಲವು ದಿನಗಳ ಕಾಲ ಹೀಗೆ ಕಾಮಗಾರಿ ಸ್ಥಗಿತಗೊಂಡಲ್ಲಿ ಈಗಿರುವ ಕಟ್ಟಡವೂ ಶಿಥಿಲಗೊಳ್ಳುವ ಹಂತಕ್ಕೆ ತಲುಪುವ ಆತಂಕ ಸಮಾಜದ ಜನರಲ್ಲಿ ಮನೆಮಾಡಿದೆ. ಶೀಘ್ರ ಕಾಮಗಾರಿ ಮುಗಿಸಿಕೊಡಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ರಾಜ್ಯಪಾಲರ ಹೆಸರಲ್ಲಿ ನೋಂದಣಿ-ಗೊಂದಲ

ಕನಕಭವನ ನಿರ್ಮಾಣಕ್ಕಾಗಿ ನಿವೇಶನವನ್ನು ಜಿ. ರಾಮಲಿಂಗಪ್ಪ ಎನ್ನುವವರು ನೀಡಿದಾಗ ಅದನ್ನು ಅಂದು ತಾಲೂಕು ಕುರುಬ ಸಮಾಜದ ಹೆಸರಲ್ಲಿ ನೋಂದಣಿ ಮಾಡದೆ ರಾಜ್ಯಪಾಲರ ಹೆಸರಿನಲ್ಲಿ ನೋಂದಣಿ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಈಚೆಗೆ ಸರ್ಕಾರದಿಂದ ಕನಕಭವನವನ್ನು ಪುರಸಭೆಯವರು ವಶಪಡಿಸಿಕೊಳ್ಳಲು ಆದೇಶ ಬಂದಿರುವುದಕ್ಕೆ ತಾಲೂಕಿನ ಕುರುಬ ಸಮಾಜದವರು ದಿಗ್ಬ್ರಾಂತರಾಗಿದ್ದಾರೆ. ಅದನ್ನು ತಮ್ಮ ಸಮಾಜದ ವಶದಲ್ಲಿಯೇ ಉಳಿಸಿಕೊಳ್ಳಲು ಕಾನೂನಾತ್ಮಕವಾಗಿ ಹೋರಾಟವನ್ನೇ ಮಾಡುತ್ತಿದ್ದಾರೆ. ಈಚೆಗೆ ಕ್ಷೇತ್ರದ ಶಾಸಕರಾದ ಪಿ.ಟಿ. ಪರಮೇಶ್ವರನಾಯ್ಕ ಅವರು ಬೆಳಗಾವಿ ಅಧಿ ವೇಶನದಲ್ಲಿ ಈ ಕುರಿತು ಪ್ರಶ್ನೆ ಎತ್ತಿ ಗಮನ ಸೆಳೆದಿದ್ದಾರೆ. ಅದಕ್ಕೆ ಸಂಬಂಧಪಟ್ಟ ಸಚಿವರಾದ ಎಂ.ಟಿ.ಬಿ ನಾಗರಾಜ್‌ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವಿಶ್ವನಾಥ ಹಳ್ಳಿಗುಡಿ

Advertisement

Udayavani is now on Telegram. Click here to join our channel and stay updated with the latest news.

Next