Advertisement

15 ವಾರಿಯರ್ಸ್‌ ಸಾವು; ಮೂವರಿಗಷ್ಟೇ ಪರಿಹಾರ

05:39 PM Oct 21, 2020 | Suhan S |

ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್  ಮಹಾಮಾರಿ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯ ಸಿಬ್ಬಂದಿ ಸೇರಿ 15 ಜನ ವಾರಿಯರ್ಸ್‌ ಬಲಿಯಾಗಿದ್ದಾರೆ. ನಾಲ್ವರು ಆರೋಗ್ಯ ಇಲಾಖೆ ಸಿಬ್ಬಂದಿ, ಎಂಟು ಜನ ಖಾಸಗಿ ವೈದ್ಯ ಸಿಬ್ಬಂದಿ ಹಾಗೂ ಇಬ್ಬರು ಪೊಲೀಸರು, ಓರ್ವ ಪಿಡಿಒ ಕೋವಿಡ್  ಗೆ ತುತ್ತಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ದೇಶದಲ್ಲೇ ಮೊದಲು ಬಲಿ ಪಡೆದು ತಲ್ಲಣ ಸೃಷ್ಟಿಸಿದ್ದ  ಕೋವಿಡ್  ಗೆ ಇಲ್ಲಿವರೆಗೆ ಒಟ್ಟು 301 ಜನರು ಸಾವನ್ನಪ್ಪಿದ್ದಾರೆ. ಔಷಧಿ ಇಲ್ಲದ ಮಹಾಮಾರಿ ರೋಗ ನಿಯಂತ್ರಿಸುವ ಕರ್ತವ್ಯದಲ್ಲಿ ತೊಡಗಿದ್ದಅನೇಕ ವಾರಿಯರ್ಸ್‌ಗೆ ಸೋಂಕು ಬಿಟ್ಟು ಬಿಡದೆ ಕಾಡಿದೆ. ಸಾವಿರಾರು ಜನ ಕೋವಿಡ್‌ ವಾರಿಯರ್ಸ್‌ ಸೋಂಕಿಗೆ ಗುರಿಯಾಗಿ ಗುಣಮುಖರಾಗಿದ್ದಾರೆ. ಜೇವರ್ಗಿ ತಾಲೂಕಿನಲ್ಲಿ ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಆಶಾ ಕಾರ್ಯಕರ್ತೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವ ಮೂಲಕ ಜಿಲ್ಲೆಯಲ್ಲಿ ಮೊದಲ ಕೋವಿಡ್   ವಾರಿಯರ್ಸ್‌ ಬಲಿಯಾಗಿದ್ದರು. ಆರೋಗ್ಯ ಇಲಾಖೆಯ ಸ್ಟಾಫ್‌ ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ಡಿ ಗ್ರೂಪ್‌ ನೌಕರರೊಬ್ಬರು ಸಹ ಮಹಾಮಾರಿಗೆ ತುತ್ತಾಗಿದ್ದಾರೆ.

ಕೋವಿಡ್   ಸೋಂಕು ಹರಡುವಿಕೆ ನಿಯಂತ್ರಣದಲ್ಲಿ ಪೊಲೀಸರು ಪಾತ್ರವೂ ಸಾಕಷ್ಟಿದೆ. ಪೊಲೀಸ್‌ ತರಬೇತಿ ಕೇಂದ್ರದ ಇನ್ಸ್‌ಪೆಕ್ಟರ್‌ ಹಾಗೂ ರೋಜಾ ಠಾಣೆ ಮುಖ್ಯ ಪೇದೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಜಿಲ್ಲೆಗೆ ಬೇರೆ-ಬೇರೆ ಕಡೆಗಳಿಂದ ಬಂದಿದ್ದ ಜನರನ್ನು ಕ್ವಾರಂಟೈನ್‌ ಮಾಡುವ ಕರ್ತವ್ಯದಲ್ಲಿ ತೊಡಗಿದ್ದ ಮರತೂರ ಪಿಡಿಒ ಕೋವಿಡ್  ದಿಂದ ಸಾವನ್ನಪ್ಪಿದ್ದಾರೆ. ಕೋವಿಡ್   ವಿರುದ್ಧ ಹೋರಾಟದಲ್ಲಿ ಖಾಸಗಿ ವೈದ್ಯ ಸಿಬ್ಬಂದಿ ತೊಡಗಿದ್ದು, ಇಲ್ಲಿವರೆಗೆ ನಾಲ್ವರು ಖಾಸಗಿ ವೈದ್ಯರು, ನಾಲ್ವರು ವೈದ್ಯ ಸಿಬ್ಬಂದಿ ಬಲಿಯಾಗಿದ್ದಾರೆ.

ಸಾರಿಗೆ ಸಿಬ್ಬಂದಿ ಸಾವು: ಲಾಕ್‌ಡೌನ್‌ ಸಮಯದಲ್ಲಿ ವಲಸಿಗರ ಸ್ಥಳಾಂತರ ಮತ್ತು ಕೋವಿಡ್ ಭೀತಿ ನಡುವೆಯೂ ಕರ್ತವ್ಯ ನಿರ್ವಹಿಸಿದ ಸಾರಿಗೆ ಸಿಬ್ಬಂದಿಯನ್ನೂ ಬಲಿ ತೆಗೆದುಕೊಂಡಿದೆ. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯ ಕಲಬುರಗಿ ಸೇರಿ ಏಳು ಜಿಲ್ಲೆಗಳಲ್ಲಿ ಕೋವಿಡ್‌ನಿಂದ 19 ಜನ ಸಾರಿಗೆ ಸಿಬ್ಬಂದಿ ಮರಣ ಹೊಂದಿದ್ದಾರೆ. ಇವರಲ್ಲಿ ಚಾಲಕರು, ನಿರ್ವಾಹಕರು ಸೇರಿದ್ದಾರೆ.

ಶಿಕ್ಷಕರೂ ಕೋವಿಡ್‌ಗೆ ಬಲಿ: ಶಿಕ್ಷಣ ಇಲಾಖೆಯಲ್ಲಿ ವಿದ್ಯಾಗಮ, ಮೌಲ್ಯಮಾಪನ ಸೇರಿದಂತೆ ಅನೇಕ ಕೆಲಸಗಳಲ್ಲಿ ತೊಡಗಿದ್ದ ಜಿಲ್ಲೆಯ 13ಕ್ಕೂ ಹೆಚ್ಚು ಶಿಕ್ಷಕರು ಮೃತಪಟ್ಟಿದ್ದಾರೆ. ಕೋವಿಡ್   ದಿಂದ ಮೃತ ಶಿಕ್ಷಕರನ್ನೂ ಕೋವಿಡ್   ವಾರಿಯಾರ್ಸ್‌ ಎಂದು ಪರಿಗಣಿಸಬೇಕೆಂಬುದು ಶಾಲಾ ಶಿಕ್ಷಕರ ಸಂಘದ ಒತ್ತಾಯ. ಮಹಾಮಾರಿ ರೋಗದ ನಡುವೆಯೂ ಶಿಕ್ಷಕರು ಕರ್ತವ್ಯಕ್ಕೆಹಾಜರಾಗಿ ಹತರಾಗಿದ್ದಾರೆ. ಹೀಗಾಗಿ ಶಿಕ್ಷಕರು ಸಹ ಕೋವಿಡ್‌ ವಾರಿಯರ್ಸ್ ಗಳೇ ಆಗಿದ್ದು, ಮೃತರ ಕುಟುಂಬಗಳಿಗೆ ಕೋವಿಡ್   ವಾರಿಯಾರ್ಸ್‌ಗಳಿಗೆ ನೀಡುವ ಪರಿಹಾರ ನೀಡಬೇಕೆಂದು ಆಗ್ರಹವಾಗಿದೆ.

Advertisement

ತಲಾ 30 ಲಕ್ಷ ಪರಿಹಾರ : ರಾಜ್ಯ ಸರ್ಕಾರ ಅಧಿಕೃತವಾಗಿ ಕೋವಿಡ್‌ ವಾರಿಯರ್ಸ್‌ ಎಂದು ಘೋಷಿಸಿದವರ 15 ಜನರು ಮೃತರ ಪೈಕಿ ಮೂವರಿಗೆ ಮಾತ್ರ ತಲಾ 30 ಲಕ್ಷ ರೂ. ಪರಿಹಾರ ತಲುಪಿದೆ. ಆಶಾ ಕಾರ್ಯಕರ್ತೆ, ಇಬ್ಬರು ಪೊಲೀಸರ ಕುಟುಂಬಗಳಿಗೆ ಪರಿಹಾರದ ಹಣ ಕಲ್ಪಿಸಲಾಗಿದೆ. ಪೊಲೀಸ್‌ ಇಲಾಖೆಯಿಂದ ಕೋವಿಡ್‌ನಿಂದ ಹುತಾತ್ಮರಾದ ವಾರದೊಳಗೆ ಪರಿಹಾರ ಒದಗಿಸುವ ಕೆಲಸವಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎನ್‌.ಸತೀಶ್‌ಕುಮಾರ, ಪೊಲೀಸ್‌ ತರಬೇತಿ ಕೇಂದ್ರದ ಪ್ರಾಂಶುಪಾಲ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದ್ದಾರೆ. ಸಾರಿಗೆ ಸಿಬ್ಬಂದಿಯನ್ನೂ ಕೋವಿಡ್‌ ವರಿಯರ್ಸ್‌ ಎಂದು ಪರಿಗಣಿಸಲಾಗಿದ್ದು, ಕರ್ತವ್ಯದಲ್ಲಿ ಕುಟುಂಬಗಳಿಗೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮೌಖೀಕವಾಗಿ ಘೋಷಿಸಲಾಗಿದೆ. ಆದರೆ, ಸಾರಿಗೆ ಇಲಾಖೆಯಿಂದ ಪರಿಹಾರ ಕಲ್ಪಿಸುವ ಪ್ರಕ್ರಿಯೆಯೇ ಆರಂಭವಾಗಿಲ್ಲ.

ಕೋವಿಡ್‌ ಕರ್ತವ್ಯದಲ್ಲಿ ಮೃತ ಆಶಾ ಕಾರ್ಯಕರ್ತೆ ಕುಟುಂಬಕ್ಕೆ ಸರ್ಕಾರದಿಂದ 30 ಲಕ್ಷ ರೂ. ಪರಿಹಾರ ಕಲ್ಪಿಸಲಾಗಿದೆ. ಉಳಿದಂತೆ ಸ್ಟಾಫ್‌ ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್‌ ಮತ್ತು ಡಿ ಗ್ರೂಪ್‌ ನೌಕರರ ಕುಟಂಬಕ್ಕೆ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ. – ಡಾ| ರಾಜಶೇಖರ ಮಾಲಿ, ಡಿಎಚ್‌ಒ

ಕೋವಿಡ್   ವಿರುದ್ಧದ ಹೋರಾಟದಲ್ಲಿ ಖಾಸಗಿ ವೈದ್ಯ ಸಿಬ್ಬಂದಿ ಪಾತ್ರವೂ ಮುಖ್ಯವಾಗಿದೆ. ಹೀಗಾಗಿ ಕರ್ತವ್ಯದ ವೇಳೆ ಮೃತಪಟ್ಟ ಖಾಸಗಿ ಆಸ್ಪತ್ರೆ ಸಿಬ್ಬಂದಿಗೆ ಪರಿಹಾರ ನೀಡಲು ಮಂಡಳಿ ಮನವಿ ಮಾಡಿದೆ. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವರು ಸ್ಪಂದಿಸಿದ್ದಾರೆ. ಜಿಲ್ಲೆಯಲ್ಲಿ ಮೃತಪಟ್ಟ 8 ಜನರ ಪಟ್ಟಿಯನ್ನು ಮಂಡಳಿಯ ರಾಜ್ಯ ಘಟಕಕ್ಕೆರವಾನಿಸಲಾಗಿದೆ.  -ಡಾ| ಅಮೂಲ್‌ ಪತಂಗೆ, ಜಿಲ್ಲಾಧ್ಯಕ್ಷ, ಭಾರತೀಯ ವೈದ್ಯಕೀಯ ಮಂಡಳಿ

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next