ಸುಳ್ಯ: ಅಂತಾರಾಜ್ಯ ಸಂಪರ್ಕದ ಕಾಂತಮಂಗಲ ಸೇತುವೆ ಕುಸಿತದ ಭೀತಿ ಹಿನ್ನೆಲೆಯಲ್ಲಿ ಪ್ರಾಕೃತಿಕ ವಿಕೋಪ ನಿಧಿಯಿಂದ ಜಿ.ಪಂ.ವತಿಯಿಂದ 5 ಲಕ್ಷ ರೂ ಹಾಗೂ ಜಿಲ್ಲಾಧಿಕಾರಿ ಮೂಲಕ 10 ಲ.ರೂ. ಅನುದಾನ ಬಿಡುಗಡೆಗೊಂಡಿದೆ. ತಾ.ಪಂ., ಗ್ರಾ.ಪಂ. ಸಭೆಗಳಲ್ಲಿ ಈ ವಿಷಯ ಪ್ರಸ್ತಾವಗೊಂಡಿತ್ತು. ಶಾಸಕ ಅಂಗಾರ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದಿತ್ತು. ಹೀಗಾಗಿಸ ಜಿಲ್ಲಾಡಳಿತ ಪಂಚಾಯತ್ ರಾಜ್ ಇಲಾಖೆ ಮೂಲಕ ಅನುದಾನ ಬಿಡುಗಡೆ ಗೊಳಿಸಿದೆ. ಪಂಚಾಯತ್‌ರಾಜ್ ಇಲಾಖೆ ಸೇತುವೆ ಪರಿಶೀಲಿಸಿದ್ದು, ಅಗತ್ಯವಾಗಿರುವ ಎಲ್ ಮಾದರಿ ಕಬ್ಬಿಣದ ಸಲಕರಣೆ ಪೂರೈಕೆಗೆ ಹೈದರಾಬಾದ್‌ಗೆ ಪ್ರಸ್ತಾವ ಪಟ್ಟಿ ಕಳುಹಿಸಿದೆ. ಅಲ್ಲಿ ಕ್ಲಾಸ್-1 ಗುತ್ತಿಗೆದಾರ ಪೂರೈಕೆಯ ಜವಾಬ್ದಾರಿ ತೆಗೆದುಕೊಂಡಿದ್ದು, ಸಾಮಾಗ್ರಿ ಬಂದ ತತ್ ಕ್ಷಣ ಕಾಮಗಾರಿ ಆರಂಭಿಸಲಾ ಗುವುದು ಎಂದು ಪಂಚಾಯತ್‌ರಾಜ್ ಇಲಾಖೆಯ ಪ್ರಭಾರ ಸಹಾಯಕ ಕಾರ್ಯಪಾಲ ಎಂಜಿನಿಯರ್ ಚೆನ್ನಪ್ಪ ಮೊಯಿಲಿ ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಸೇತುವೆ ದುರಸ್ತಿ ಹಿನ್ನೆಲೆಯಲ್ಲಿ ಸಂಚಾರ ಬಂದ್ ಮಾಡುವುದು ಅನಿವಾರ್ಯವಾಗಿದೆ. ಕಾಮಗಾರಿ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಕೆಲವು ದಿನಗಳ ಕಾಲ ಸೇತುವೆ ಬಂದ್ ಮಾಡಿ ದುರಸ್ತಿ ಕೈಗೆತ್ತಿಕೊಳ್ಳಬೇಕಿದೆ. ಹದಿನೈದು ದಿವಸದೊಳಗೆ ದುರಸ್ತಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಉದಯವಾಣಿ ವರದಿ
ಕರ್ನಾಟಕ – ಕೇರಳ ಸಂಪರ್ಕಿಸುವ ಕಾಂತಮಂಗಲ – ಅಜ್ಜಾವರ – ಮಂಡೆಕೋಲು ರಸ್ತೆಯಲ್ಲಿ ಪಯಸ್ವಿನಿ ನದಿಗೆ 1980ರಲ್ಲಿ ಕಾಂತಮಂಗಲದಲ್ಲಿ ನಿರ್ಮಿಸಲಾಗಿತ್ತು. ಕೆಲ ವರ್ಷಗಳಿಂದ ಸೇತುವೆ ಶಿಥಿಲಗೊಂಡು, ಬಿರುಕು ಬಿಟ್ಟಿತ್ತು. ಘನವಾಹನ ಓಡಾಟ ನಿರ್ಬಂಧಿಸಲಾಗಿತ್ತು. ಮಳೆಗಾಲದ ಆರಂಭದಲ್ಲಿ ಹೊಂಡ ತುಂಬಿ ಕುಸಿಯುವ ಹಂತಕ್ಕೆ ತಲುಪಿರುವ ಬಗ್ಗೆ
‘ಉದಯವಾಣಿ’ ನಿರಂತರ ಸಚಿತ್ರ ವರದಿ ಪ್ರಕಟಿಸಿ, ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳ ಗಮನ ಸೆಳೆದಿತ್ತು.