Advertisement

15 ಗುಂಟೆ ಜಮೀನು, 22 ಟನ್‌ ಇಳುವರಿ, 11ಲಕ್ಷ ಲಾಭ; ರೈತ ನ್ಯಾಮದೇವ ಸಾಧನೆ

06:11 PM Feb 10, 2022 | Team Udayavani |

ಮಹಾಲಿಂಗಪುರ: ಹತ್ತು ಹಲವು ಸಮಸ್ಯೆಗಳಿಂದ ರೈತರು ಬಳಲುತ್ತಿರುವ ಸಂದರ್ಭದಲ್ಲಿ ಸಮೀಪದ ಕಪ್ಪಲಗುದ್ದಿ ಗ್ರಾಮದ ಯುವ ರೈತರೊಬ್ಬರು ಅಲ್ಪ ಜಮೀನಿನಲ್ಲೇ ತರಕಾರಿ ಬೆಳೆ ಬೆಳೆದು ಬಂಪರ್‌ ಲಾಭ ಪಡೆದಿದ್ದಾರೆ. ಕಪ್ಪಲಗುದ್ದಿ ಗ್ರಾಮದ ಯುವ ರೈತ ನ್ಯಾಮದೇವ ಸಿದ್ರಾಮ ದಡ್ಡಿಮನಿ ಅವರು, ತರಕಾರಿ ಬೆಳೆ ಡೊಣ್ಣ ಮೆಣಸಿನಕಾಯಿ (ಕ್ಯಾಪ್ಸಿಕಮ್‌) ಬೆಳೆದು ಅ ಧಿಕ ಲಾಭ ಪಡೆದುಕೊಂಡಿದ್ದು, ರೈತರು ಮನಸ್ಸು ಮಾಡಿ ದುಡಿದರೇ ಲಾಭ ಕಟ್ಟಿಟ್ಟ ಬುತ್ತಿ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

Advertisement

ನ್ಯಾಮದೇವ ದಡ್ಡಿಮನಿ ಅವರು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಎಂಬ ಪುಟ್ಟ ಗ್ರಾಮದಲ್ಲಿ 2 ಎಕರೆ ಜಮೀನು ಹೊಂದಿರುವ ಸಣ್ಣ ರೈತರಾಗಿದ್ದು, ತಮ್ಮ ಎರಡು ಎಕರೆ ಜಮೀನಿನಲ್ಲಿ ವಾಸದ ಮನೆ, ಜಾನುವಾರುಗಳ ಮನೆ, ಅಂಗಳ ಸೇರಿ 5 ಗುಂಟೆ ಕರಾಬಿ ಹೋಗಿದ್ದು, ಉಳಿದ ಜಮೀನು ಪೈಕಿ 1 ಎಕರೆ ಕಬ್ಬು, 20 ಗುಂಟೆ ಟೊಮ್ಯಾಟೋ ಹಾಗೂ 15 ಜಮೀನಿನಲ್ಲಿ ಡೊಣ್ಣಮೆಣಸು(ಡಬ್ಬು) ಬೆಳೆದಿದ್ದಾರೆ.

ಸ್ಥಳೀಯ ನರ್ಸರಿಯಲ್ಲಿನ ಸಸಿಗಳ ನಾಟಿ: ಸಾಮಾನ್ಯವಾಗಿ ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ತರಕಾರಿ ಬೆಳೆಯುವ ರೈತರು ಹೆಚ್ಚಾಗಿ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಘಟಪ್ರಭಾ ನರ್ಸರಿಗಳಲ್ಲಿನ ಸಸಿಗಳನ್ನು ತಂದು ನಾಟಿ ಮಾಡುತ್ತಾರೆ. ಆದರೆ ನ್ಯಾಮದೇವ ದಡ್ಡಿಮನಿಯವರು ಅದೇ ಗ್ರಾಮದ ಇನ್ನೊಬ್ಬ ರೈತ ಅಲ್ಲಪ್ಪ ಬಾಳಪ್ಪ ಹುಳಾನಟ್ಟಿ ಅವರ ಜೈಕಿಸಾನ್‌ ನರ್ಸರಿಯಲ್ಲಿ ಅಭಿವೃದ್ಧಿ ಪಡಿಸಲಾದ ಇಂಡಸ್‌-11 ತಳಿಯ ಡೊಣ್ಣ ಮೆಣಸು ಸಸಿಗಳನ್ನು ನಾಟಿ ಮಾಡಿದ್ದಾರೆ. ನಿತ್ಯ ಕೃಷಿಯಲ್ಲಿ ಹೊಸ ಪ್ರಯೋಗಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವ ರೈತ ಅಲ್ಲಪ್ಪ ಬಾಳಪ್ಪ ಹುಳಾನಟ್ಟಿ ಅವರ ನರ್ಸರಿಯಲ್ಲಿನ ಸಸಿ ಹಾಗೂ ಮಾರುಕಟ್ಟೆ ದರ, ಬೇಡಿಕೆ ಹಾಗೂ ನೈಸರ್ಗಿಕ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಸಕಾಲಕ್ಕೆ ಡಬ್ಬು ತರಕಾರಿ ಬೆಳೆಯ ಸಸಿಗಳನ್ನು ನಾಟಿ ಮಾಡಿದ್ದರ ಫಲವೇ ಇಂದು ಲಾಭವನ್ನು ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ನ್ಯಾಮದೇವ ದಡ್ಡಿಮನಿ.

ಹುಲುಸಾಗಿ ಬೆಳೆದ ಡಬ್ಬು ಮೇಣಸಿನಕಾಯಿ: ಕೇವಲ 15 ಗುಂಟೆಯಲ್ಲಿ ಸಾಲಿನಿಂದ ಸಾಲಿಗೆ 3 ಅಡಿ, ಸಸಿಯಿಂದ 1 ಅಡಿ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಕಾಂಪೋಸ್ಟ್‌ ಮತ್ತು ಕುರಿಗೊಬ್ಬರವನ್ನು ಹಾಕಿ ನಾಟಿ ಮಾಡಿದ್ದಾರೆ. ಸಸಿಗಳನ್ನು ವಿತರಿಸಿದ ಅಲ್ಲಪ್ಪ ಹುಳಾನಟ್ಟಿ ಅವರ ಮಾರ್ಗದರ್ಶನದಲ್ಲಿ ರೋಗ ಮತ್ತು ಕೀಟಬಾಧೆಯನ್ನು ತಡೆಯಲು ಕ್ರಿಮಿನಾಶಕಗಳನ್ನು ಸಿಂಪಡಿಸಿದ್ದಾರೆ. ಹನಿ ನೀರಾವರಿ ಅಳವಡಿಕೆ ಹಾಗೂ ಹೊದಿಕೆ ಪದ್ಧತಿಯಲ್ಲಿ ತರಕಾರಿ ಬೆಳೆಯ ನಾಟಿ ಮಾಡಿದ್ದರಿಂದ ಡೊಣ್ಣ ಮೆಣಸಿನಕಾಯಿ ಹುಲುಸಾಗಿ ಬೆಳೆದ ಪರಿಣಾಮವಾಗಿ ಇಷ್ಟೊಂದು ಅಧಿಕ ಇಳುವರಿ ಬಂದಿದೆ ಎನ್ನುತ್ತಾರೆ ರೈತ ನ್ಯಾಮದೇವ ತಂದೆ ಸಿದ್ರಾಮ ದಡ್ಡಿಮನಿ.

Advertisement

ಕಡಿಮೆ ಖರ್ಚು ಅಧಿಕ ಲಾಭ: 2021ರ ಆ. 15ರ ನಂತರ ನಾಟಿ ಮಾಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ತರಕಾರಿಯನ್ನು ಬೆಳಗಾವಿ ಮಾರುಕಟ್ಟೆಗೆ ಕಳಿಸುತ್ತಿದ್ದಾರೆ. 15 ಗುಂಟೆ ಜಮೀನಿನಲ್ಲಿ ಸಸಿಗಳು, ಕಾಂಪೋಸ್ಟ್‌ ಮತ್ತು ಕುರಿಗೊಬ್ಬರ, ಹನಿ ನೀರಾವರಿ ಅಳವಡಿಕೆ, ಆಳಿನ ಪಗಾರ, ಕ್ರಿಮಿನಾಶಕಗಳ ಸಿಂಪಡಣೆ ಸೇರಿದಂತೆ 6 ತಿಂಗಳಲ್ಲಿ ಒಟ್ಟು 1.20 ಲಕ್ಷ ಖರ್ಚು ಮಾಡಿದ್ದಾರೆ. ಮೂರು ತಿಂಗಳಲ್ಲಿ ಒಟ್ಟು 22 ಟನ್‌ ಗೂ ಅ ಧಿಕ ಇಳುವರಿ ಬಂದಿದ್ದು, ಸರಾಸರಿ ಕೆಜಿ 50ರಿಂದ 60 ರೂ. ಗಳ ದರದಲ್ಲಿ ಮಾರಾಟವಾಗಿದೆ.

ಒಟ್ಟು 12.20 ಲಕ್ಷ ರೂ.ಗಳ ತರಕಾರಿ ಮಾರಾಟ ಮಾಡಿದ್ದಾರೆ. ಅದರಲ್ಲಿ ಖರ್ಚು 1.20 ಲಕ್ಷ ಕಳೆದು ನಿವ್ವಳ 11 ಲಕ್ಷ ರೂ.ಗಳ ಆದಾಯ ಗಳಿಸುವ ಮೂಲಕ ಕಪ್ಪಲಗುದ್ದಿಯ ನ್ಯಾಮದೇವ ದಡ್ಡಿಮನಿಯವರು ಇಂದಿನ ಯುವ ರೈತರಿಗೆ ಮಾದರಿಯಾಗಿದ್ದಾರೆ. ರೈತರು ಲಾಭದಾಯಕ ತರಕಾರಿ ಕೃಷಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ನ್ಯಾಮದೇವ ಸಿದ್ರಾಮ ದಡ್ಡಿಮನಿ. ಸಾ. ಕಪ್ಪಲಗುದ್ದಿ, ತಾ| ರಾಯಭಾಗ, ಜಿ| ಬೆಳಗಾವಿ ಮೋ: 9972952046, 9902866416 ಗೆ ಸಂಪರ್ಕಿಸಬಹುದಾಗಿದೆ.

ನಾನು ಮತ್ತು ಅಲ್ಲಪ್ಪ ಹುಳಾನಟ್ಟಿ ನಮ್ಮ ಕಪ್ಪಲಗುದ್ದಿ ಗ್ರಾಮದ ಪರಪ್ಪ ಅಲ್ಲಪ್ಪ ಬಂಗಿ ಅವರ ಹೊಲ ಕೂಲಿ ಕೆಲಸ ಮಾಡುತ್ತಿದ್ದವರು. ಮುಂದೆ ಅವರ ಹೊಲವನ್ನು ಪಾಲುದಾರಿಕೆಯಲ್ಲಿ ಮಾಡಿಕೊಂಡು, ಅವರ ಮಾರ್ಗದರ್ಶನದಲ್ಲಿಯೇ ನಾವು ಕೃಷಿಯನ್ನು ಪ್ರಾರಂಭಿಸಿದವರು. ನಮ್ಮ ಈ ಸಾಧನೆಯ ಹಿಂದಿನ ಶಕ್ತಿ ಅವರೇ. ಕೇವಲ 15 ಗುಂಟೆ ಜಮೀನಿನಲ್ಲಿ ಕೇವಲ ಆರು ತಿಂಗಳಲ್ಲಿ 22 ಟನ್‌ ಇಳುವರಿ ಬಂದು, 11 ಲಕ್ಷ ಲಾಭವನ್ನು ಕಂಡಿದ್ದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಭೂತಾಯಿ ಕೃಪೆ ಬಹಳ ದೊಡ್ಡಲು, ನಾವು ಕಷ್ಟಪಟ್ಟು ದುಡಿದರೇ ಕೃಷಿ ಲಾಭ ನಿಶ್ಚಿತ.
ನ್ಯಾಮದೇವ ಸಿದ್ರಾಮ ದಡ್ಡಿಮನಿ,
ಸಾಧಕ ರೈತ

*ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next