ಶ್ರೀನಗರ್: ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದ ಹೊರವಲಯದಲ್ಲಿ ಭಾನುವಾರ 18 ತಾಸುಗಳ ನಿರಂತರ ಗುಂಡಿನ ಚಕಮಕಿ ಬಳಿಕ ನಡೆದ ಎನ್ ಕೌಂಟರ್ ನಲ್ಲಿ 14 ವರ್ಷದ ಬಾಲಕನೊಬ್ಬ ಸೇರಿದಂತೆ ಮೂವರು ಲಷ್ಕರ್ ಎ ತೊಯ್ಬಾ ಉಗ್ರರನ್ನು ಹತ್ಯೆಗೈಯಲಾಗಿದೆ. ಕಾರ್ಯಾಚರಣೆ ವೇಳೆ ನಾಲ್ವರು ಭದ್ರತಾ ಸಿಬ್ಬಂದಿ ಹಾಗೂ ಮೂವರು ನಾಗರಿಕರು ಗಾಯಗೊಂಡಿದ್ದರು.
ಸೇನೆಯ ಗುಂಡಿಗೆ ಬಲಿಯಾದವರು ಪಾಕಿಸ್ತಾನಿ ಪ್ರಜೆಗಳಾದ 14 ವರ್ಷದ ಬಾಲಕ ಮುದಾಸಿರ್ ರಷೀದ್ ಪರ್ರೆ, ಸಾಖಿಬ್ ಮುಶ್ತಾಕ್ ಮತ್ತು ಅಲಿ ಭಾಯಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಸೇನಾ ಜವಾನ, ಇಬ್ಬರು ಪೊಲೀಸರು ಹಾಗೂ ಸಿಆರ್ ಪಿಎಫ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ ಹೊರವಲಯದ ಮುಜ್ಗುಂಡ್ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ಪಡೆ(ಎಸ್ ಒಜಿ), ಸಿಆರ್ ಪಿಎಫ್ ಮತ್ತು ಸೇನೆ ಸೇರಿದಂತೆ ಜಂಟಿ ಕಾರ್ಯಾಚರಣೆ ನಡೆಸಿರುವುದಾಗಿ ವರದಿ ತಿಳಿಸಿದೆ. ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದರು. ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿ, ಭಾನುವಾರ ಮುಂಜಾನೆ ಮತ್ತೆ ಆರಂಭಿಸಿದ್ದರು.
ಮುದಾಸಿರ್ 9ನೇ ತರಗತಿ ವಿದ್ಯಾರ್ಥಿ, ಈತ ಬಾಂಡಿಪೋರಾದ ಹಾಜಿನ್ ನಗರದಿಂದ ದಿಢೀರ್ ನಾಪತ್ತೆಯಾಗಿದ್ದ. ಜೊತೆಗೆ ಪಿಯುಸಿ ವಿದ್ಯಾರ್ಥಿ ಬಿಲಾಲ್ ಅಹ್ಮದ್ ಕೂಡಾ ಆಗಸ್ಟ್ 29ರಂದು ಕಣ್ಮರೆಯಾಗಿದ್ದ.
ನವೆಂಬರ್ 29ರಂದು ಮುದಾಸಿರ್ ಕೈಯಲ್ಲಿ ಎಕೆ 47 ಹಿಡಿದುಕೊಂಡು ನಿಂತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗ ಕುಟುಂಬದವರಿಗೆ ತಮ್ಮ ಮಗ ಉಗ್ರಗಾಮಿ ಸಂಘಟನೆ ಸೇರಿದ್ದು ಗಮನಕ್ಕೆ ಬಂದಿತ್ತು. ತದನಂತರ ಸೇನಾ ಕಾರ್ಯಾಚರಣೆಯಲ್ಲಿ ಬಲಿಯಾದ ಮೂವರಲ್ಲಿ ಮುದಾಸಿರ್ ಶವ ಕೂಡಾ ಇತ್ತು. ಘಟನೆ ತಿಳಿಯುತ್ತಿದ್ದಂತೆಯೇ ಹಾಜಿನ್ ಪ್ರದೇಶದಲ್ಲಿ ಜನರು ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.