Advertisement

14 ಸಾವಿರ ಕಿ.ಮೀ.ಉದ್ದದ ರಸ್ತೆಗಳಲ್ಲಿ ಗುಂಡಿ; ಕಳಪೆ ಕಾಮಗಾರಿಗೆ ಜನ ಹೈರಾಣ

12:27 PM Sep 09, 2022 | Team Udayavani |

ಬೆಂಗಳೂರು: ಒಂದೆಡೆ ಮಳೆಯಿಂದಾಗಿ ನಗರದ ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ ವಲಯದ 50ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿ ಸಮಸ್ಯೆ ಉಂಟಾಗಿದೆ. ಅದರ ಜತೆಗೆ ಇದೀಗ ಮಳೆಯ ಪರಿಣಾಮ ನಗರದ 14 ಸಾವಿರ ಕಿ.ಮೀ. ಉದ್ದದ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡಿದ್ದು, ಅವು ಗಳನ್ನು ಮುಚ್ಚುವುದು ಬಿಬಿಎಂಪಿಗೆ ಸವಾಲಾಗಿದೆ.

Advertisement

ಪ್ರತಿ ರಸ್ತೆಯಲ್ಲೂ ಗುಂಡಿ ಸೃಷ್ಟಿ: ಬಿಬಿಎಂಪಿ ವ್ಯಾಪ್ತಿ ಯಲ್ಲಿ ಒಟ್ಟು 14 ಸಾವಿರ ಕಿಮೀ ಉದ್ದದ ರಸ್ತೆಗಳಿವೆ.ಅದರಲ್ಲಿ 4 ಸಾವಿರ ಕಿ.ಮೀ. ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಾಗಿವೆ. ಅವುಗಳಲ್ಲಿ ಕಳೆದ ಮೇ ತಿಂಗಳಿಂದ ಸೆಪ್ಟೆಂಬರ್‌ ಆರಂಭದವರೆಗೆ 18 ಸಾವಿರ ರಸ್ತೆಗುಂಡಿಗಳನ್ನು ಪತ್ತೆ ಮಾಡಿ ಮುಚ್ಚಲಾಗಿದೆ. ಆದರೆ, ಕಳೆದೊಂದು ವಾರದಿಂದ ಸುರಿದ ಮಳೆಗೆ ಈಗಾಗಲೆ ಮುಚ್ಚಲಾಗಿರುವ ರಸ್ತೆಗುಂಡಿಗಳ ಜತೆಗೆ ಹೊಸದಾಗಿ ಗುಂಡಿಗಳು ಸೃಷ್ಟಿಯಾಗಿವೆ. ಅದರಂತೆ ನಗರದೆಲ್ಲೆಡೆ ಮುಖ್ಯ, ಉಪಮುಖ್ಯ ಹಾಗೂ ವಾರ್ಡ್‌ ರಸ್ತೆಗಳಲ್ಲಿ 15 ಸಾವಿರಕ್ಕೂ ಹೆಚ್ಚಿನ ಗುಂಡಿಗಳು ಸೃಷ್ಟಿಯಾಗಿರುವ ಕುರಿತು ಅಂದಾಜಿಸಲಾಗಿದೆ.

60 ಕೋಟಿ ರೂ. ನೀರು ಪಾಲು: ರಸ್ತೆ ನಿರ್ವಹಣೆ, ಗುಂಡಿ ಮುಚ್ಚುವುದಕ್ಕಾಗಿ ಪ್ರತಿ ವಾರ್ಡ್‌ ವಾರ್ಷಿಕ 30 ಲಕ್ಷ ರೂ. ನೀಡಲಾಗುತ್ತದೆ. ಅದರಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಶೇ. 70ಕ್ಕೂ ಹೆಚ್ಚಿನ ಮೊತ್ತವನ್ನು ಬಳಸಲಾಗಿದೆ. ಅದರ ಜತೆಗೆ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ದುರಸ್ತಿಗಾಗಿ ಬಿಬಿಎಂಪಿ 40 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವ್ಯಯಿಸಿದೆ. ಅದನ್ನು ಗಮನಿಸಿದರೆ ಬಿಬಿಎಂಪಿ ಕಳೆದ ಐದಾರು ತಿಂಗಳಲ್ಲಿ ರಸ್ತೆ ದುರಸ್ತಿಗಾಗಿ 60 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವ್ಯಯಿಸಿದೆ. ಈಗ ಆ ಮೊತ್ತವೆಲ್ಲವೂ ನೀರು ಪಾಲಾಗುವಂತಾಗಿದೆ.

30 ಕೋಟಿ ರೂ. ಅಗತ್ಯ?: ಕಳೆದೊಂದು ವಾರ ಸುರಿದ ಮಳೆಯಿಂದಾಗಿ 14 ಸಾವಿರ ಕಿ.ಮೀ ಉದ್ದದ ರಸ್ತೆಯಲ್ಲಿ ಶೇ. 60 ಭಾಗದ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಅದರಲ್ಲೂ ಕೆಲ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಹೀಗಾಗಿ ಈ ರಸ್ತೆ ದುರಸ್ತಿಗಾಗಿ ಬಿಬಿಎಂಪಿಗೆ ಕನಿಷ್ಠ 30 ಕೋಟಿ ರೂ. ಅವಶ್ಯಕತೆಯಿದೆ.

ಇತರ ಇಲಾಖೆಗಳ ಕಾಮಗಾರಿಯಿಂದ ಸಮಸ್ಯೆ ಬೆಂಗಳೂರು ವ್ಯಾಪ್ತಿಯಲ್ಲಿ ಜಲಮಂಡಳಿ, ಬೆಸ್ಕಾಂ, ಟೆಲಿಕಾಂ ಸಂಸ್ಥೆಗಳು ಸೇರಿ ಇನ್ನಿತ ಇಲಾಖೆಗಳು ರಸ್ತೆ ಅಗೆಯುವ ಮೂಲಕ ಸಮಸ್ಯೆ ಸೃಷ್ಟಿಯಾಗುವಂತೆ ಮಾಡಿವೆ. ಹೀಗೆ ರಸ್ತೆ ಅಗೆಯುವ ಇಲಾಖೆಗಳು ಅದನ್ನು ಸಮರ್ಪಕವಾಗಿ ಮುಚ್ಚದೆ ಮಣ್ಣನ್ನು ತುಂಬಿ ಮುಚ್ಚಿ ಬಿಡಲಾಗಿತ್ತು. ಅಂತಹ ರಸ್ತೆ ಅಗೆತಗಳು ಇದೀಗ ದೊಡ್ಡದಾಗಿದ್ದು, ವಾಹನ ಸಂಚಾರವೇ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕಳಪೆ ಕಾಮಗಾರಿಗೆ ಜನ ಹೈರಾಣ
ಬೆಂಗಳೂರಿನ ಮಟ್ಟಿಗೆ ಪ್ರತಿ ಮಳೆಗಾಲದಲ್ಲೂ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗುತ್ತದೆ. ಪ್ರತಿವರ್ಷ ಗುಂಡಿ ಮುಚ್ಚಲು 50 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಬಿಬಿಎಂಪಿ ವ್ಯಯಿಸುತ್ತದೆ. ಆದರೆ, ಇದು ಗುಣಮಟ್ಟದ ಕಾಮಗಾರಿ ಆಗಿರದ ಕಾರಣ, ರಸ್ತೆ ಗುಂಡಿಗಳು ಪದೇಪದೆ ಉದ್ಭವವಾಗಿ ಜನರು ಸಮಸ್ಯೆ ಅನುಭವಿಸುವಂತಾಗುತ್ತದೆ. ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ಈ ಸಮಸ್ಯೆ ದೊಡ್ಡಮಟ್ಟದಲ್ಲಿ ಕಾಣುವಂತಾಗಿದೆ.

*ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next