Advertisement

1380.96 ಕೋಟಿ ರೂ.ಜಲ ಜೀವನ್‌ ಮಿಷನ್‌ ಯೋಜನೆಗೆ ಸಂಪುಟ ಅಸ್ತು

11:09 PM Jul 22, 2022 | Team Udayavani |

ಬೆಂಗಳೂರು: ಜಲ ಜೀವನ್‌ ಮಿಷನ್‌ ಯೋಜನೆಯಡಿ ಕೊಪ್ಪಳ, ಬೆಳಗಾವಿ, ಚಾಮ ರಾಜನಗರ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಜನವಸತಿಗಳಲ್ಲಿ ಕುಡಿಯುವ ನೀರು ಕಲ್ಪಿಸುವ 1,380.96 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.

Advertisement

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ, ಕೊಪ್ಪಳ ಗಂಗಾವತಿಯ 26 ಗ್ರಾಮ, ಬೆಳಗಾವಿಯ ಅಥಣಿಯ 8 ಗ್ರಾಮ, ಸವದತ್ತಿಯ 30 ಗ್ರಾಮ, ಚಾಮರಾಜನಗರದ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ 291 ಜನವಸತಿ, ದಾವಣಗೆರೆ ಜಿಲ್ಲೆ ಹೊನ್ನಾಳಿ ಹಾಗೂ ಚನ್ನಗಿರಿ ತಾಲೂಕಿನ 26 ಜನವಸತಿ, ಬಳ್ಳಾರಿ ಜಿಲ್ಲೆ ವಿಜಯನಗರ ತಾಲೂಕಿನ 29 ಗ್ರಾಮಗಳಿಗೆ ಜಲಜೀವನ್‌ ಮಿಷನ್‌ ಅಡಿ ಕುಡಿಯುವ ನೀರು ಪೂರೈಸಲು ಒಪ್ಪಿಗೆ ನೀಡಲಾಗಿದೆ ಎಂದರು.

ರೇಷ್ಮೆ ಇಲಾಖೆಯನ್ನು ಸಮಗ್ರ ಗಣಕೀಕರಣ ಮಾಡಲು 15 ಕೋಟಿ ರೂ. ಯೋಜನೆ, ರಾಜ್ಯದ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1142 ಡಿ ದರ್ಜೆಯ ಸಿಬಂದಿ ಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು, ವಿದ್ಯಾ ವಿಕಾಸ ಯೋಜನೆಯಡಿ ಸರಕಾರಿ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್‌ ನೀಡುವ 132 ಕೋಟಿ ರೂ. ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಕನಿಷ್ಠ ಉದ್ಯೋಗ ಪ್ರಮಾಣ ಪರಿಷ್ಕರಣೆ
ಬೆಂಗಳೂರು: ಕೈಗಾರಿಕೆ ವಲಯದಲ್ಲಿ ಸ್ಥಳೀಯರು ಮತ್ತು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ “ಕರ್ನಾಟಕ ಉದ್ಯೋಗ ನೀತಿ-2025’ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ನೂತನ ಉದ್ಯೋಗ ನೀತಿ ಪ್ರಕಾರ, ಮಧ್ಯಮ, ಬೃಹತ್‌ ಹಾಗೂ ಭಾರೀ ಕೈಗಾರಿಕೆಗಳಲ್ಲಿ ಪ್ರಸ್ತುತ ನಿಗದಿಪಡಿಸಿರುವ ಕನಿಷ್ಠ ಉದ್ಯೋಗ ಪ್ರಮಾಣವನ್ನು ಪರಿಷ್ಕರಿಸಲಾಗಿದೆ.

ಕೈಗಾರಿಕೆಗಳನ್ನು ಹೂಡಿಕೆ ಆಧಾರದಲ್ಲಿ ವಿಭಾಗಿಸಲಾಗಿದೆ. ಅದರಂತೆ ಮಧ್ಯಮ ಕೈಗಾರಿಕೆ ಕನಿಷ್ಠ 20 ಜನರಿಗೆ, ಬೃಹತ್‌ ಉದ್ದಿಮೆಯು ಕನಿಷ್ಠ 60, ಮೆಗಾ ಕೈಗಾರಿಕೆಗಳು ಕನಿಷ್ಠ 260, ಅಲ್ಟ್ರಾ ಮೆಗಾ ಇದ್ದರೆ 510 ಹಾಗೂ ಸೂಪರ್‌ ಮೆಗಾ ಕೈಗಾರಿಕೆಯು ಕನಿಷ್ಠ ಸಾವಿರ ಜನರಿಗೆ ಉದ್ಯೋಗ ನೀಡಬೇಕೆಂದು ಸೂಚಿಸಲಾಗಿದೆ.

Advertisement

ಹೆಚ್ಚುವರಿಯಾಗಿ ಹೂಡಿಕೆ ಮಾಡುವ ಪ್ರತಿ ಕನಿಷ್ಠ 10 ಕೋಟಿಯಿಂದ ಗರಿಷ್ಠ 50 ಕೋಟಿ ರೂ. ವರೆಗಿನ ಹೂಡಿಕೆಗೆ ಅನುಗುಣವಾಗಿ 10ರಿಂದ 50 ಜನರಿಗೆ ಉದ್ಯೋಗ ಕಲ್ಪಿಸಬೇಕೆಂದು ನೂತನ ನೀತಿ ತಿಳಿಸುತ್ತದೆ.

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರು
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸುವುದು ಹಾಗೂ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡಲು ಸಂಪುಟ ತೀರ್ಮಾನಿಸಿದೆ.

ಈ ನಿಲ್ದಾಣದ ಉನ್ನತೀಕರಣ ಹಾಗೂ ವಿಸ್ತರಣೆಗಾಗಿ 240 ಎಕ್ರೆ ಜಮೀನನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next