ಕಲಬುರಗಿ: ಆದಾಯವಿಲ್ಲದೆ ಅಭಿವೃದ್ಧಿ ಕೆಲಸಗಳು ಮಾಡುವುದ ಕಷ್ಟಸಾಧ್ಯ ಎಂಬುದನ್ನರಿತು ನ್ಯಾಯಾಲಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಸೇರಿದಂತೆ ಬಾಕಿಯಿರುವ ಎಲ್ಲಾ ಬಡಾವಣೆಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಜತೆಗೆ ಪ್ರಾಧಿಕಾರದಿಂದ ಹರಾಜಾಗದೆ ಉಳಿದ 1305 ನಿವೇಶನಗಳನ್ನು ಹರಾಜು ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಳಸಿಕೊಳ್ಳುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸೋಮವಾರ ಇಲ್ಲಿನ ಟೌನ್‌ಹಾಲ್‌ನಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಪ್ರಾಧಿಕಾರದಿಂದ ನಗರದ ಬಸ್ ನಿಲ್ದಾಣ ಮತ್ತು ಧರಿಯಾಪೂರ ಕೋಟನೂರ ಬಡಾವಣೆಯಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಚಿವರು ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಪ್ರಾಧಿಕಾರಕ್ಕೆ ಆದಾಯ ಬರುತ್ತದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿದ ಅಟಲ್ ಬಿಹಾರಿ ವಾಜಪೇಯಿ, ಧರಿಯಾಪೂರ ಕೋಟನೂರ ಮತ್ತು ಮಾದರಸನಹಳ್ಳಿ ಬಡಾವಣೆಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಂಡ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಗೆ ಬಾಕಿ 6.5 ಕೋಟಿ ರೂ. ಮೊತ್ತ ಪಾವತಿ ಕುರಿತಂತೆ ತ್ರಿಸದಸ್ಯ ಅಧಿಕಾರಿಗಳ ತಂಡ ನೀಡುವ ವರದಿಯಂತೆ ಪ್ರಾಧಿಕಾರ ಕ್ರಮ ವಹಿಸಬೇಕು ಎಂದು ಸಚಿವರು ಸೂಚಿಸಿದರು.
ನಗರ ಯೋಜನಾ ಪ್ರಾಧಿಕಾರದ ಸದಸ್ಯ ಎಸ್.ಎಸ್.ಗಾರಂಪಳ್ಳಿ ಅವರು, ಪ್ರಾಧಿಕಾರದ ಯೋಜನೆಗಳು ಬಗ್ಗೆ ಸಭೆಗೆ ವಿವರಿಸುತ್ತಾ, ಪ್ರಾಧಿಕಾರದ ವ್ಯಾಪ್ತಿಯಲ್ಲಿ 43 ಗ್ರಾಮಗಳಿದ್ದು, ಒಟ್ಟು 443 ಚದುರ ಕಿ.ಮೀ ಹೊಂದಿದೆ. ನಗರದ 2ನೇ ಮಹಾಯೋಜನೆ 2021ಕ್ಕೆ ಮುಗಿಯಲಿದ್ದು, 3ನೇ ಮಹಾಯೋಜನೆ ಜಾರಿಗೆ ತರಲು ಪ್ರಧಿಕಾರ ಸಿದ್ಧತೆ ಮಾಡಿಕೊಂಡಿದೆ. ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾದ 20 ಬಡಾವಣೆಗಳಲ್ಲಿ 13,634 ನಿವೇಶನಗಳ ಪೈಕಿ 11760 ಹಂಚಿಕೆ ಮಾಡಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ವಾಟರ್ ಥೀಮ್ ಪಾರ್ಕ್: ಧರಿಯಾಪೂರ-ಕೋಟನೂರ ಬಡಾವಣೆ ಯಲ್ಲಿ 16 ಎಕರೆ ಪ್ರದೇಶದಲ್ಲಿ ರಾಜೀವಗಾಂಧಿ ವಾಟರ್ ಥೀಮ್ ಪಾರ್ಕ್ ಮತ್ತು ಬೋಟಾನಿಕಲ್ ಗಾರ್ಡನ್ ಅಭಿವೃದ್ಧಿಪಡಿಸಲು ಪ್ರಾಧಿಕಾರದ ನಿವೇಶನವನ್ನು ಕೆಕೆಆರ್ ಡಿಬಿಗೆ ಹಂಚಿಕೆ ಮಾಡಲಾಗಿದೆ. ಅದೇ ರೀತಿ ಬುದ್ಧ ವಿಹಾರ ಬಳಿ 5 ಎಕರೆ ಪ್ರದೇಶದಲ್ಲಿ ಕಲಾ ವನ ಮತ್ತು 7.09 ಎಕರೆ ಪ್ರದೇಶದಲ್ಲಿ ಟ್ಯಾಗೋರ್ ಸಾಂಸ್ಕೃತಿಕ ಸಂಕೀರ್ಣ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಗೆ 12 ಎಕರೆ ಜಮೀನು ನೀಡಲಾಗಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಇ-ಹರಾಜು ಪ್ರಕ್ರಿಯೆಯಿಂದ ನಿವೇಶನಗಳ ಹರಾಜುಗಳು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಚಪ್ಪ ಅವರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸಚಿವರು ಇ-ಹರಾಜು ಬದಲಾಗಿ ಮ್ಯಾನ್ವಲ್ ಹರಾಜು ನಡೆಸಲು ರಿಯಾಯಿತಿ ನೀಡಲಾಗುವುದು ಎಂದರು.