ಲಂಡನ್: ಇಂಗ್ಲೆಂಡಿನ ಶಾಲಾ ಬಾಲಕ 13 ವರ್ಷ ವಯೋಮಿತಿ ಕೆಳಗಿನ ಕ್ರಿಕೆಟ್ ಪಂದ್ಯವೊಂದರಲ್ಲಿ ಒಂದು ಓವರಿನ ಆರು ಎಸೆತಗಳಲ್ಲಿ ಆರು ವಿಕೆಟ್ ಕಿತ್ತು ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಆರು ಮಂದಿಯೂ ಕ್ಲೀನ್‌ಬೌಲ್ಡ್ ಆಗಿರುವುದು ವಿಶೇಷವಾಗಿದೆ.
ಇಂತಹ ಸಾಧನೆ ಕ್ರಿಕೆಟ್‌ನ ಯಾವುದೇ ಮಾದರಿಯಲ್ಲೂ ಪ್ರತಿದಿನವೂ ಘಟಿಸುವ ಸಾಧ್ಯತೆಯಿಲ್ಲ. ಅಂತಹ ಅದ್ಭುತ ಸಾಧನೆಯನ್ನು ಫಿಲಾಡೆಲ್ಫಿಯ ಕ್ರಿಕೆಟ್ ಕ್ಲಬ್ ಪರ ಲ್ಯೂಕ್ ರಾಬಿನ್ಸನ್ ಮಾಡಿ ಗಮನ ಸೆಳೆದಿದ್ದಾರೆ. ರಾಬಿನ್ಸನ್ ಅವರ ಈ ಸಾಧನೆಯನ್ನು ಅವರ ಕುಟುಂಬದ ಸದಸ್ಯರೆಲ್ಲರೂ ಅಧಿಕೃತವಾಗಿ ವೀಕ್ಷಿಸಿರುವುದು ಆಶ್ಚರ್ಯವೆಂದು ಹೇಳಬಹುದು.
ರಾಬಿನ್ಸನ್ ದಾಳಿಗೆ ಇಳಿಯುವ ಮೊದಲು ಎದುರಾಳಿ ತಂಡ ಒಂದು ವಿಕೆಟಿಗೆ 10 ರನ್ ಗಳಿಸಿತ್ತು. ರಾಬಿನ್ಸನ್ ಅವರ ಓವರ್ ಮುಗಿದಾಗ ಎದುರಾಳಿ ತಂಡ ಅಷ್ಟೇ ರನ್ನಿಗೆ 7ವಿಕೆಟ್ ಉದುರಿಸಿಕೊಂಡಿತ್ತು. ಅಂತಹ ಅಸಾಧಾರಣ ನಿರ್ವಹಣೆಯನ್ನು ರಾಬಿನ್ಸನ್ ಮಾಡಿದ್ದಾರೆ.
ರಾಬಿನ್ಸನ್ ಅವರ ಈ ಸಾಧನೆ ವೇಳೆ ತಂದೆ ಸ್ಟೀಫನ್ ರಾಬಿನ್ಸನ್ ಅಂಪಾಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಾಯಿ ಹೆಲೆನ್ ಪಂದ್ಯದ ಸ್ಕೋರ್ ಬರೆಯುತ್ತಿದ್ದರು. ಲ್ಯೂಕ್ ಅವರ ಕಿರಿಯ ಸಹೋದರ ಮ್ಯಾಥ್ಯೂ ಫೀಲ್ಡಿಂಗ್ ನಡೆಸುತ್ತಿದ್ದರೆ ಅಜ್ಜ ಗ್ಲೆನ್ ಬೌಂಡರಿ ಗೆರೆ ಸಮೀಪ ಪಂದ್ಯವನ್ನು ವೀಕ್ಷಿಸುತ್ತಿದ್ದರು.
ಇದೊಂದು ಅಸಾಮಾನ್ಯ ಸಾಧನೆ. ನಾನು ಕಳೆದ 30 ವರ್ಷಗಳಿಂದ ಆಡುತ್ತಿದ್ದೇನೆ ಮತ್ತು ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದೇನೆ. ಆದರೆ ಇಂತಹ ಸಾಧನೆ ಮಾಡಿಲ್ಲ ಎಂದು ಹಿರಿಯರ ತಂಡದಲ್ಲಿ ಆಡಿದ್ದ ಬಾಲಕನ ತಂದೆ ಸ್ಟೀಫನ್ ರಾಬಿನ್ಸನ್ ಹೇಳಿದ್ದಾರೆ.