Advertisement

13 ನಗರ ಸ್ಥಳೀಯ ಸಂಸ್ಥೆಗಳ ಮೀಸಲು ಅಧಿಸೂಚನೆ ರದ್ದು

06:41 AM Jan 15, 2019 | Harsha Rao |

ಬೆಂಗಳೂರು:ಮಂಗಳೂರು ಮಹಾನಗರ ಪಾಲಿಕೆ ಸೇರಿ ರಾಜ್ಯದ 13 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ನಿಗದಿಗೊಳಿಸಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ ಚುನಾವಣಾ ಅಧಿಸೂಚನೆಯನ್ನು ರದ್ದುಗೊಳಿಸಿ ಹೈಕೋರ್ಟ್‌ ಸೋಮವಾರ ಮಹತ್ವದ ಆದೇಶ ನೀಡಿದೆ.

Advertisement

ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 30ಕ್ಕೂ ಹೆಚ್ಚು ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ. ಸುನಿಲ್‌ ದತ್‌ ಯಾದವ್‌ ಸೋಮವಾರ ತೀರ್ಪು ಪ್ರಕಟಿಸಿದ್ದು, 13 ನಗರ ಸ್ಥಳೀಯ ಸಂಸ್ಥೆಗಳು ಮೀಸಲು ಅಧಿಸೂಚನೆಯನ್ನು ರದ್ದುಗೊಳಿಸಿ, ಅರ್ಜಿಗಳನ್ನು ವಿಲೇವಾರಿ ಮಾಡಿದರು.

ಅಲ್ಲದೇ, ಕೋರ್ಟ್‌ ಆದೇಶದ 14 ದಿನಗಳೊಳಗಾಗಿ ಈ ಎಲ್ಲ 13 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ಮೀಸಲಾತಿ ಪ್ರಕ್ರಿಯೆಯನ್ನು ಮತ್ತೆ ಮಾಡಿ (ರೀ ಡು) ಜ.28ರೊಳಗೆ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಲ್ಲದೆ ಅದರ ವಿವರಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸುವ ಮೂಲಕ ಸುಲಭ, ಸರಳ ಹಾಗೂ ಕಾಲಮಿತಿಯೊಳಗೆ ಚುನಾವಣೆ ನಡೆಯುವಂತಾಗಲು ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಹೈಕೋರ್ಟ್‌ ಇದೇ ವೇಳೆ ಸರ್ಕಾರಕ್ಕೆ ತಾಕೀತು ಮಾಡಿದೆ.

13 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆಗಳನ್ನು ರದ್ದುಗೊಳಿಸಿದ್ದು, ಅಧಿಸೂಚನೆಯನ್ನು ಹೊರಡಿಸುವಾಗ ಮೀಸಲಾತಿ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಮೀಸಲಾತಿ ಪುನರಾವರ್ತನೆಯಾಗಿದೆ ಎಂದು ನ್ಯಾಯಪೀಠದ ಆದೇಶದಲ್ಲಿ ಉಲ್ಲೇಖೀಸಲಾಗಿದೆ.

Advertisement

2019ರ ಮಾರ್ಚ್‌ ವೇಳೆ ಅವಧಿ ಪೂರ್ಣಗೊಳ್ಳಲಿರುವ ರಾಜ್ಯದ 26 ಜಿಲ್ಲೆಗಳ 101 ನಗರ ಸ್ಥಳೀಯ ಸಂಸ್ಥೆಗಳ 2,593 ವಾರ್ಡ್‌ಗಳಿಗೆ ಚುನಾವಣೆ ನಡೆಯಬೇಕಿದೆ. ಈ ಸಂಬಂಧ ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡಣೆಗೊಳಿಸಿ ರಾಜ್ಯ ಸರ್ಕಾರ 2018ರ ಆಗಸ್ಟ್‌ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕೆಲವರು ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಆಕ್ಷೇಪವೇನು?: ರಾಜ್ಯ ಸರ್ಕಾರದ ಅಧಿಸೂಚನೆ ಸಂವಿಧಾನ ಹಾಗೂ ಕಾನೂನು ಬಾಹಿರ, ಪೌರ ನಿಗಮ ಕಾಯ್ದೆಯನ್ನು ಉಲ್ಲಂ ಸಲಾಗಿದೆ. ಮೀಸಲಾತಿ ಆವರ್ತನೆ ಪಾಲಿಸಿಲ್ಲ. ಮಾರ್ಗಸೂಚಿಸ ಕಡೆಗಣನೆ ಸೇರಿದಂತೆ ಅನೇಕ ಆಕ್ಷೇಪಣೆಗಳನ್ನು ಅರ್ಜಿದಾರರು ಎತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next