ಬೆಂಗಳೂರು: ಒಂದು ಕಾಲದಲ್ಲಿ ಭ್ರಷ್ಟರ ವಿರುದ್ಧ ಸಮರ ಸಾರಿ ದೇಶಕ್ಕೆ ಮಾದರಿಯಾಗಿದ್ದ ಲೋಕಾಯುಕ್ತ ಸಂಸ್ಥೆ ಇದೀಗ ಹಲ್ಲು ಕಿತ್ತ ಹಾವಿನಂತಾಗಿದೆ.
ಉನ್ನತ ಹುದ್ದೆಯಲ್ಲಿದ್ದುಕೊಂಡು ಭಾರೀ ಅವ್ಯವಹಾರ ನಡೆಸಿದ 13 ಭ್ರಷ್ಟರ ಅಕ್ರಮ ಸಂಪತ್ತನ್ನು ಲೋಕಾಯುಕ್ತ ಬಯಲಿಗೆಳೆದು ಹಲವು ವರ್ಷಗಳೇ ಉರುಳಿದರೂ ತನಿಖೆಗೆ ಸರಕಾರ ಇನ್ನೂ ಅನುಮತಿ ಕೊಡದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಲೋಕಾಯುಕ್ತ ಪೊಲೀಸ್ ವಿಭಾಗವು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆಯಾದ ಬಳಿಕ ತನಗಿದ್ದ ಅಧಿಕಾರವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಎಸಿಬಿ ಸ್ಥಾಪನೆಯಾಗುವ ಮೊದಲು ಲೋಕಾಯುಕ್ತ ಅಧಿಕಾರಿಗಳು 25 ಪ್ರಕರಣಗಳಲ್ಲಿ ಐಎಎಸ್, ವಿವಿಧ ಇಲಾಖೆಗಳ ಎಂಜಿನಿಯರ್‌ಗಳು ಸೇರಿ ಕ್ಲಾಸ್-1 ಅಧಿಕಾರಿಗಳ ಕೋಟ್ಯಂತರ ರೂ. ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿದ್ದರು. ಕ್ಲಾಸ್-1 ಹುದ್ದೆಯ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ 25 ಪ್ರಕರಣಗಳ ತನಿಖೆಗೆ ಅನುಮತಿ ನೀಡಲು ಸರಕಾರ ನಿರಾಕರಿಸಿದೆ.
ಹಲವು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ತೊಡಗಿ ಸಿಕ್ಕಿ ಬಿದ್ದಿರುವ 13 ಮಂದಿ ವಿರುದ್ಧ ದಾಖಲಾಗಿದ್ದ 8 ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ಹಲವು ವರ್ಷಗಳ ಹಿಂದೆಯೇ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ, ಸರಕಾರ ಮಾತ್ರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹುಬ್ಬೇರಿಸುವಂತೆ ಮಾಡಿದೆ.
ದಾಳಿಗೊಳಗಾದವರು ಪ್ರಭಾವಿಗಳ ಮೊರೆ ಹೋಗಿ ಸರಕಾರದಿಂದ ಲೋಕಾ ಯುಕ್ತಕ್ಕೆ ಅನುಮತಿ ಸಿಗದಂತೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
8,690 ಪ್ರಕರಣ ಬಾಕಿ
ಪ್ರಸ್ತುತ ಲೋಕಾಯುಕ್ತದಲ್ಲಿ 8,690 ದೂರು ಹಾಗೂ 2,212 ವಿಚಾರಣ ಹಂತದಲ್ಲಿರುವ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿವೆ.
ಲೋಕಾಯುಕ್ತ ಸಂಸ್ಥೆಗೆ ವಹಿಸಿರುವ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿದೆ. ಮುಂದೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇವೆ. ಎಸಿಬಿ ರಚನೆ ಕುರಿತ ಪ್ರಕರಣವು ಕೋರ್ಟ್‌ನಲ್ಲಿ ವಿಚಾರಣ ಹಂತದಲ್ಲಿದೆ. ಹೀಗಾಗಿ ಪ್ರತಿಕ್ರಿಯಿಸುವುದಿಲ್ಲ.
-ನ್ಯಾ.ಬಿ.ಎಸ್.ಪಾಟೀಲ್, ಲೋಕಾಯುಕ್ತರು