Advertisement

ರೈಲು ಅಪಘಾತಕ್ಕೆ ಪ್ರತೀವರ್ಷ 1,200 ಮಂದಿ ಸಾವು!

12:56 AM Jun 04, 2023 | Team Udayavani |

ಬೆಂಗಳೂರು: ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತ ಪ್ರಕರಣ ಇಡೀ ದೇಶವನೇ ಬೆಚ್ಚಿ ಬೀಳಿಸಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ರೈಲು ಅಪಘಾತಕ್ಕೆ ಪ್ರತೀ ವರ್ಷ ಸರಾಸರಿ 1,200 ಮಂದಿ ಸಾವಿಗೀಡಾಗುತ್ತಿರುವುದು ಆತಂಕಕಾರಿಯಾಗಿದೆ.

Advertisement

ದೇಶದ ಅತೀ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇ ಇಲಾಖೆಗೆ ಹೈಟೆಕ್‌ ಸ್ಪರ್ಶ ನೀಡಿ ಅತ್ಯಾಧುನಿಕ ಸೌಲಭ್ಯ ಅಳವಡಿಸಿಕೊಳ್ಳಲಾಗುತ್ತಿದೆ. ಮತ್ತೂಂದೆಡೆ ರೈಲು ಅಪಘಾತದಿಂದ ಸಂಭವಿಸುವ ಸಾವು ನಿಯಂತ್ರಿಸುವುದೇ ಸವಾಲಾಗಿ ಪರಿಣಮಿಸಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 3,530 ಮಂದಿ ರೈಲು ಅಪಘಾತಕ್ಕೆ ಬಲಿ ಯಾಗಿದ್ದು ಪ್ರತೀವರ್ಷ ಸರಾಸರಿ 1,200 ಜನ ರೈಲ್ವೇ ಅಪಘಾತಕ್ಕೆ ಪ್ರಾಣ ಕಳೆದುಕೊಂಡರೆ, ನಿತ್ಯವೂ ಇಬ್ಬರು ರೈಲು ಅಪಘಾತಕ್ಕೊಳಗಾಗುತ್ತಿದ್ದಾರೆ. ತಿಂಗಳಿಗೆ 50ರಿಂದ 60 ಮಂದಿ ಸಾವನ್ನಪ್ಪುತ್ತಿದ್ದಾರೆ.

ರೈಲ್ವೇ ಸುರಕ್ಷತಾ ವೈಫ‌ಲ್ಯವೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು ದೇಶದಲ್ಲಿ 12 ವರ್ಷಗಳಲ್ಲಿ ರೈಲ್ವೇ ಹಳಿ ದಾಟುವ ವೇಳೆ 26 ಸಾವಿರ ಮಂದಿ ಮರಣ ಹೊಂದಿದ್ದಾರೆ. ಪ್ರತೀದಿನ ಸರಾಸರಿ 6 ಮಂದಿ ಆಕಸ್ಮಿಕವಾಗಿ ಸಾವನ್ನಪ್ಪುತ್ತಿರುವುದು ಪೊಲೀಸ್‌ ಅಂಕಿ-ಅಂಶಗಳ ಸಮೀಕ್ಷೆಯಿಂದ ತಿಳಿದು ಬಂದಿದೆ.

ರೈಲು ಅಪಘಾತಕ್ಕೆ ಪ್ರಮುಖ ಕಾರಣಗಳೇನು?
ರೈಲಿನ ಹಳಿ, ಸಿಗ್ನಲ್‌ ದಾಟುವ ವೇಳೆ ಅಥವಾ ಮೊಬೈಲ್‌ನಲ್ಲಿ ಮಾತನಾಡಿಕೊಂಡು ರೈಲಿನ ಸಮೀಪ ಹೋಗುವ ವೇಳೆ ಆಕಸ್ಮಿಕವಾಗಿ ಸಾವನ್ನಪ್ಪುವ ಪ್ರಕರಣಗಳು ಏರಿಕೆಯಾಗಿವೆ. ಮುಖ್ಯವಾಗಿ ಚಲಿಸುವ ರೈಲಿನ ಸಮೀಪವೇ ಟಿಕ್‌ಟಾಕ್‌ ಮಾಡುವುದು, ಹಳಿಗಳ ಮೇಲೆ ನಿದ್ರಿಸುವುದು, ಚಲಿಸುವ ರೈಲಿನ ಸಮೀಪ ಸೆಲ್ಫಿ ತೆಗೆಯುವುದು, ರೈಲು ಬರುವ ವೇಳೆ ಕ್ರಾಸಿಂಗ್‌ ಗೇಟ್‌ ಮುಚ್ಚದಿರುವುದು, ಕಿವಿಗೆ ಇಯರ್‌ ಫೋನ್‌ ಸಿಕ್ಕಿಸಿಕೊಂಡು ಹಳಿ ಮೇಲೆ ನಡೆದಾಡುವುದು, ಆತುರದಲ್ಲಿ ಒಳದಾರಿಯಲ್ಲಿ ಹಳಿ ಕ್ರಾಸ್‌ ಮಾಡುವುದು, ರೈಲಿನ ಬಾಗಿಲಿನಲ್ಲಿ ನೇತಾಡುವುದೇ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ಸಿಬಂದಿ ಕೊರತೆಯಿಂದ ರೈಲ್ವೇ ಪೊಲೀಸರಿಗೆ ಸುರಕ್ಷತೆಗೆ ಒತ್ತು ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ.

Advertisement

ರೈಲ್ವೇ ಇಲಾಖೆ ಲೋಪದಿಂದ ಮೃತಪಟ್ಟರೆ ಅಥವಾ ಚಲಿಸುತ್ತಿರುವ ರೈಲಿನ ಬಾಗಿಲಿನಿಂದ ಕೆಳಕ್ಕೆ ಬಿದ್ದು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಮೃತರ ಕುಟುಂಬಸ್ಥರಿಗೆ ಸರಕಾರದಿಂದ ಪರಿಹಾರ ಸಿಗಲಿದೆ. ಒಂದು ವೇಳೆ ಹಳಿ ದಾಟುವ ವೇಳೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಜನರ ನಿರ್ಲಕ್ಷ್ಯದಿಂದ ಮೃತಪಟ್ಟರೆ ಜೀವ ವಿಮೆ ಮಾಡಿಸಿದ್ದರೂ ಪರಿಹಾರ ಸಿಗುವುದಿಲ್ಲ. ಸರಕಾರ ಅಂತಹವರ ಕುಟುಂಬಗಳಿಗೆ ಸಹಾಯ ಮಾಡಬೇಕೆಂಬ ನಿಯಮಗಳಿಲ್ಲ.

ದೇಶದಲ್ಲಿ ರೈಲ್ವೇ ಸುರಕ್ಷತಾ ಕ್ರಮದ ವೈಫ‌ಲ್ಯಗಳನ್ನೇ ದುರ್ಬಳಕೆ ಮಾಡಿಕೊಂಡು ಭಯೋತ್ಪಾದಕರು ವಿಧ್ವಂಸಕ ಕೃತ್ಯ ಎಸಗಲು ತಂತ್ರ ಹೆಣೆಯುವ ಸಾಧ್ಯತೆಗಳಿವೆ. ಹೀಗಾಗಿ ರೈಲ್ವೇ ಸುರಕ್ಷತಾ ಕ್ರಮಗಳ ಬಗ್ಗೆ ಇನ್ನಷ್ಟು ಬಿಗಿ ಕ್ರಮ ಅಳವಡಿಸಿಕೊಂಡು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಿದೆ.

ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು ?
ರೈಲು ಹೋಗುವ ವೇಳೆ ಹಳಿ ಸಮೀಪ ನಿಲ್ಲಬಾರದು.
ಹಳಿಯಲ್ಲಿ ವಾಯು ವಿಹಾರ ಮಾಡಬೇಡಿ.
ಕಿವಿಗೆ ಇಯರ್‌ ಫೋನ್‌ ಸಿಕ್ಕಿಸಿ ಹಳಿಯಲ್ಲಿ ನಡೆದಾಡಬೇಡಿ.
ಹಳಿ ದಾಟುವ ವೇಳೆ ರೈಲು ಬರುತ್ತಿದೆಯೇ ಗಮನಿಸಿ.
ಸಾರ್ವಜನಿಕರಿಗೆ ಕಾಣುವಂತೆ ರೈಲ್ವೇ ಸಿಗ್ನಲ್‌ ಅಳವಡಿಸಬೇಕು.
ರೈಲು ಹೋಗುವ ಮುನ್ನ ಕ್ರಾಸಿಂಗ್‌ ಗೇಟ್‌ ಮುಚ್ಚಬೇಕು.

ರೈಲು ಅಪಘಾತ ಪ್ರಕರಣಗಲ್ಲಿ ಲೋಕೋ ಪೈಲಟ್‌ಗಳು ನೀಡುವ ಮಾಹಿತಿ ಆಧರಿಸಿ ತನಿಖೆ ನಡೆಸಲಾಗುತ್ತದೆ. ರೈಲ್ವೇ ಸುರಕ್ಷತೆಗೆ ರೈಲ್ವೇ ಪೊಲೀಸರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಸಾರ್ವಜನಿಕರೂ ಈ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು.
– ಡಾ| ಸೌಮ್ಯಲತಾ, ರೈಲ್ವೇ ವಿಭಾಗದ ಎಸ್‌ಪಿ

 ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next