ಮುಂಬಯಿ: ಮೊಗವೀರ ವ್ಯವಸ್ಥಾಪಕ ಮಂಡಳಿಯ 116ನೇ ವಾರ್ಷಿಕ ಮಹಾಸಭೆ ಅ. 27ರಂದು ಅಂಧೇರಿಯ ಮೊಗವೀರ ಭವನದ ಎಂವಿಎಂ ಶಿಕ್ಷಣ ಸಂಕುಲದ ಶ್ರೀಮತಿ ಶಾಲಿನಿ ಜಿ. ಶಂಕರ್ ಕನ್ವೆಂಶನ್ ಸೆಂಟರ್‌ನಲ್ಲಿ ನಡೆಯಿತು. ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೃಷ್ಣ ಎಲ್. ಕುಂದರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಸಾಲ್ಯಾನ್ ಸ್ವಾಗತಿಸಿದರು. ಉಪಾಧ್ಯಕ್ಷ ಶ್ರೀನಿವಾಸ ಸಿ. ಸುವರ್ಣ ಅವರು ನಿಧನ ಹೊಂದಿದ ಮಂಡಳಿಯ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಸಾಲ್ಯಾನ್ ವರದಿ ವಾಚಿಸಿದರು. ಬೈಕಂಪಾಡಿ ಶ್ಯಾಮ್ ಕೆ. ಪುತ್ರನ್ ಅವರ ಸೂಚನೆ ಮತ್ತು ಚರಂತಿಪೇಟೆ ಶಿವರಾಮ ಕೋಟ್ಯಾನ್ ಅವರ ಅನುಮೋದನೆಯೊಂದಿಗೆ ಮಂಜೂರುಗೊಳಿಸಲಾಯಿತು.
ಲೆಕ್ಕಪರಿಶೋಧಕರಿಂದ ಪರಿಶೀಲಿಸ ಲ್ಪಟ್ಟ ಆಯವ್ಯಯ ಹಾಗೂ ಆಸ್ತಿ ಸೊತ್ತುಗಳ ವರದಿಯನ್ನು ಜತೆ ಕೋಶಾಧಿಕಾರಿ ಪ್ರತಾಪ್ ಕುಮಾರ್ ಕರ್ಕೇರ ಮಂಡಿಸಿದರು. ಬಪ್ಪನಾಡು ರಘುಚಂದ್ರ ಎಸ್. ಕೋಟ್ಯಾನ್ ಅವರ ಕೆಲವೊಂದು ಪ್ರಶ್ನೆಗಳಿಗೆ ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಸಾಲ್ಯಾನ್ ಅವರು ಉತ್ತರಿಸಿದರು. ವಸಂತ್ ಕುಮಾರ್ ಅವರ ಅನುಮೋದನೆಯೊಂದಿಗೆ ಸರ್ವಾನುಮತದಿಂದ ಲೆಕ್ಕಪತ್ರವನ್ನು ಮಂಜೂರು ಗೊಳಿಸಲಾಯಿತು.
ಶಾಸನಬದ್ಧ ಲೆಕ್ಕಪರಿಶೋಧಕರ ನೇಮಕದ ಠರಾವನ್ನು ಜತೆ ಕಾರ್ಯದರ್ಶಿ ಬೋಳೂರು ಲಕ್ಷ್ಮಣ ಶ್ರೀಯಾನ್ ಮಂಡಿಸಿದರು. ಬೈಕಂಪಾಡಿ ಸದಾಶಿವ ಗುರಿಕಾರ ಅವರ ಅನುಮೋದನೆಯೊಂದಿಗೆ ಮೆಸರ್ಸ್ ಆ್ಯಂಡ್ ಅಶೋಕ್ ಚಾರ್ಟರ್ಡ್ ಅಕೌಂಟೆಂಟ್ ಅವರನ್ನು 2018-2019 ಅವಧಿಗೆ ಮಂಡಳಿಯ ಲೆಕ್ಕ ಪರಿಶೋಧಕ ರನ್ನಾಗಿ ನೇಮಿಸಲಾಯಿತು.
ಸಸಿಹಿತ್ಲು ವೇದಪ್ರಕಾಶ್ ಶ್ರೀಯಾನ್, ಪೊಲಿಪು ನೀಲಾಧರ ಕುಂದರ್, ಗಂಗಾಧರ ಎಸ್. ಬಂಗೇರ, ಸಸಿಹಿತ್ಲು ಚಂದ್ರಕಾಂತ್ ಪುತ್ರನ್, ಚರಂತಿಪೇಟೆ ಸದಾನಂದ ಎ. ಕೋಟ್ಯಾನ್ ಅವರು ಮಂಡಳಿಯ ಅಭಿವೃದ್ಧಿ ಹಾಗೂ ಹೊಸ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಬಗ್ಗೆ ಸಲಹೆ ನೀಡಿದರು. ಉಚ್ಚಿಲ ಮಾಧವ ಸುವರ್ಣ ಮತ್ತು ಎಚ್. ಅರುಣ್‌ಕುಮಾರ್ ಅವರ ಅಭಿಪ್ರಾಯಕ್ಕೆ ಸ್ಪಷ್ಟೀಕರಣ ನೀಡಲಾಯಿತು.
ಅಧ್ಯಕ್ಷ ಕೃಷ್ಣ ಎಲ್. ಬಂಗೇರ ಅವರು ಮಾತನಾಡಿ, ವರದಿ ವರ್ಷದಲ್ಲಿ ಮಂಡಳಿ ಮಾಡಿದ ಸಾಧನೆಯನ್ನು ವಿವರಿಸಿದರು. ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸೇವೆಗಳು ಹಾಗೂ ಮಂಡಳಿಯ ವಿವಿಧ ಶಾಖೆಗಳು ಮಾಡುತ್ತಿರುವ ಸಮಾಜಮುಖೀ ಚಟುವಟಿಕೆ ಅಭಿನಂದನಿಯ. ನಮ್ಮ ಸಮಾಜವು ಪಾರಂಪಾರಿಕವಾಗಿ ಶಿಸ್ತು, ಸಂಯಮ ಮತ್ತು ಸಂಘಟನಾ ಶಕ್ತಿಯಿಂದ ಗುರುತಿಸಿರುವುದರಿಂದ ಈ ಪರಂಪರೆ ಉಳಿಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಸಂಜೀವ ಸಾಲ್ಯಾನ್ ವಂದಿಸಿದರು. ಟ್ರಸ್ಟಿಗಳಾದ ಜಿ.ಕೆ. ರಮೇಶ್, ಅಜಿತ್ ಸುವರ್ಣ, ಉಪಾಧ್ಯಕ್ಷರಾದ ಶ್ರೀನಿವಾಸ ಸಿ. ಸುವರ್ಣ, ಅರವಿಂದ ಎಲ್. ಕಾಂಚನ್, ಜತೆ ಕಾರ್ಯದರ್ಶಿಗಳಾದ ದೇವರಾಜ್ ಎಚ್. ಕುಂದರ್, ಧರ್ಮೇಶ್ ಪುತ್ರನ್ ಉಪಸ್ಥಿತರಿದ್ದರು.