ಹುಮನಾಬಾದ: ಯಾವುದೇ ಭಾಗದಲ್ಲಿ ಸಮಸ್ಯೆ ಕಂಡುಬಂದ ಕೂಡಲೇ ತುರ್ತು ಸೇವೆಗಾಗಿ 112ಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಸಿಪಿಐ ಮಲ್ಲಿಕಾರ್ಜುನ ಯಾತನೂರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ಥೇರ್ ಮೈದಾನ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಏರ್ಪಡಿಸಿದ್ದ 112 ಜನಜಾಗೃತಿ ಹಾಗೂ ಕಬ್ಬಿನ ಲಾರಿಗಳಿಗೆ ರೇಡಿಯಂ ಅಳವಡಿಸುವ ಮೂಲಕ ಜನ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಈ ಹಿಂದೆ ಅಗ್ನಿ ಅವಘಡಕ್ಕೆ ಪೊಲೀಸ್, ಆರೋಗ್ಯ ಇಲಾಖೆಗಳಿಗೆ ಪ್ರತ್ಯೇಕ ಕರೆ ಸಂಖ್ಯೆಗಳಿದ್ದವು. ಆದರೆ ಇದೀಗ ಸರ್ಕಾರ 112 ಸಹಾಯವಾಣಿ ಆರಂಭಿಸಿದ್ದು, ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಪೊಲೀಸ್, ಅಗ್ನಿಶಾಮಕ, ಆರೋಗ್ಯ ಸೇರಿದಂತೆ ಇತರೆ ತುರ್ತು ಸೇವೆ ತ್ವರಿತಗತಿಯಲ್ಲಿ ಸಾರ್ವಜನಿಕರು ಪಡೆಯಬಹುದು. ಪ್ರತಿಯೊಬ್ಬರೂ 112 ಸಹಾಯವಾಣಿಗೆ ದಿನದ 24 ಗಂಟೆಗಳಲ್ಲಿ ಕರೆ ಮಾಡಿ ಲಾಭ ಪಡೆದುಕೊಳ್ಳಬಹುದು ಎಂದರು.
ಪಿಎಸ್‌ಐ ರವಿಕುಮಾರ ನಾಯ್ದೊಡಿ ಮಾತನಾಡಿ, 112ಗೆ ಕರೆ ಮಾಡುವ ಮೂಲಕ ಕಡಿಮೆ ಅವಧಿಯಲ್ಲಿ ಸರ್ಕಾರಿ ಇಲಾಖೆ ಸೇವೆ ಲಭ್ಯವಾಗುತ್ತದೆ. ಈಗಾಗಲೇ ಎಲ್ಲೆಡೆ 112 ಪೊಲೀಸ್ ವಾಹನಗಳು ಸಂಚರಿಸುತ್ತಿದ್ದು, ದೂರು ಬರುವ ಕಡೆಗೆ ಕೂಡಲೇ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ನೀಡುತ್ತಿದ್ದಾರೆ. ಎಲ್ಲ ತುರ್ತು ಸೇವೆಗಳಿಗೆ 112 ಎಂಬುದು ಎಲ್ಲರೂ ನೆನಪಿಸಿಕೊಳ್ಳುವ ಮೂಲಕ ಇತರರಿಗೂ ಜಾಗೃತಿ ಮೂಡಿಸಿ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿನ ಆಟೋ, ಬಸ್ ಸೇರಿದಂತೆ ಇತರೆ ವಾಹನಗಳಿಗೆ 112 ಭಿತ್ತಿಪತ್ರ ಅಂಟಿಸಿದರು. ಪಟ್ಟಣದ ಹೊರವಲಯದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಸಾಗುವ ಲಾರಿ ತಡೆದು ರೇಡಿಯಂ ಅಳವಡಿಸುವ ಮೂಲಕ ಅಪಘಾತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ವಾಹನ ಚಾಲಕರಿಗೆ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜ ತಿಳಿವಳಿಕೆ ನೀಡಿದರು. ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ವಿಜಯಕುಮಾರ ಮೇಟಿ, ಮಲ್ಲು ಮಳ್ಳಿ, ಆಕಾಶ ಸಿಂಧೆಮ ಭಗವಾನ, ಶಿವಾನಂದ ಸೇರಿದಂತೆ ಇತರರಿದ್ದರು.