Advertisement
ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ಹೆದ್ಧಾರಿ ನಿರ್ಮಾಣದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 10,197 ಮರ ಕಡಿಯಲು ಟೆಂಡರ್ ನೀಡಿದೆ. ಆದರೆ 2ನೇ ಸರ್ವೇ ವೇಳೆ ಮರಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಒಟ್ಟು 15,000 ಮರಗಳನ್ನು ಕಡಿಯಲು ಗುರುತು ಸಹಿತ ಟೆಂಡರ್ ನೀಡಿದೆ. ಇದರಲ್ಲಿ ಉಪ್ಪಿನಂಗಡಿ, ಪುತ್ತೂರು, ಪಂಜ, ಬಂಟ್ವಾಳ ವಲಯ ಅರಣ್ಯ ವ್ಯಾಪ್ತಿಯಲ್ಲಿ 3,113 ಮರಗಳು ಸೇರಿವೆ.
ಶಿರಾಡಿ ಅಡ್ಡಹೊಳೆಯಿಂದ ಬಂಟ್ವಾಳದ ತನಕ ಒಟ್ಟು 63.5 ಕಿ.ಮೀ. ರಸ್ತೆಯು ಚತುಷ್ಪಥಗೊಳ್ಳಲಿದ್ದು, ಈಗ ಗುಂಡ್ಯದಿಂದ ಉಪ್ಪಿನಂಗಡಿ ತನಕ ರಸ್ತೆಗೆ ಹೊಂದಿಕೊಂಡ ಮರಗಳ ತೆರವು ಕಾರ್ಯ ಪ್ರಗತಿಯಲ್ಲಿದೆ. ಸಕಲೇಶಪುರ ತಾಲೂಕಿನ 12 ಗ್ರಾಮ, ದ.ಕ. ಜಿÇÉೆಯ ಶಿರಾಡಿ, ಶಿರಿವಾಗಿಲು, ನೂಜಿಬಾಳ್ತಿಲ, ನೆಲ್ಯಾಡಿ, ಕೊನಾಲು, ಗೋಳಿತಟ್ಟು, ಬಜತ್ತೂರು, ಉಪ್ಪಿನಂಗಡಿ, ನೆಕ್ಕಿಲಾಡಿ, ಬೆಳ್ತಂಗಡಿ ತಾಲೂಕಿನ ರೆಖ್ಯಾ, ಬಂಟ್ವಾಳ ತಾಲೂಕಿನ ಬಿಳಿಯೂರು, ಪೆರ್ನೆ, ಕೆದಿಲ, ಮಾಣಿ, ಬಾಳ್ತಿಲ, ಗೋಳ್ತಮಜಲು, ಕಸಬಾ ಪಾಣೆಮಂಗಳೂರು, ನರಿಕೊಂಬು, ಬಿ.ಮೂಡ ಪ್ರದೇಶದಲ್ಲಿ ಮರ ಕಡಿಯಲು ಗಡಿ ಗುರುತಿಸಲಾಗಿದೆ. 1.10 ಕೋಟಿ ರೂ. ಪಾವತಿ
ಮರದ ಈಗಿನ ಧಾರಣೆ ಅಂಕಿ ಅಂಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 1.10 ಕೋ.ರೂ. ಅನ್ನು ಪಾವತಿಸಿದೆ. ಪಂಜ ವಲಯದ 75 ಮರಗಳಿಗೆ 2.78 ಲ.ರೂ., ಉಪ್ಪಿನಂಗಡಿ ವಲಯದ 610 ಮರಗಳಿಗೆ 24.64 ಲ.ರೂ., ಪುತ್ತೂರು ವಲಯದ ವ್ಯಾಪ್ತಿಯ 937 ಮರಗಳಿಗೆ 36.74 ಲ.ರೂ, ಬಂಟ್ವಾಳ ವಲಯ ವ್ಯಾಪ್ತಿಯ 1,491 ಮರಗಳಿಗೆ 46.27 ಲಕ್ಷ ರೂ. ಪಾವತಿಸಲಾಗಿದೆ.
Related Articles
ಚೆನ್ನೈ ಹಸಿರು ಪೀಠ ಸ್ವಂತ ಜಾಗ ಸಹಿತ ಅರಣ್ಯ ಪ್ರದೇಶದಲ್ಲಿ ಮರ ಕಡಿಯಲು ಅವಕಾಶ ಇಲ್ಲ ಎಂಬ ಆದೇಶ ಹೊರಡಿಸಿದೆ. ಒಂದು ವೇಳೆ ತೆರವು ಅನಿವಾರ್ಯ ಎಂದಾದರೆ, ಅದಕ್ಕೊಂದು ಅವಕಾಶ ಇದೆ. ಕಡಿದ ಒಂದು ಮರಕ್ಕೆ ಪರ್ಯಾಯವಾಗಿ ಹತ್ತು ಗಿಡ ನೆಡುವುದು ಇದರ ಪರಿಹಾರ ಕ್ರಮ. ಇದೇ ಅನ್ವಯ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಕಡಿದ ಮರದ ಪರಿಹಾರ ಮೊತ್ತವನ್ನು ಪ್ರಾಧಿಕಾರ ಅರಣ್ಯ ಇಲಾಖೆಗೆ ಪಾವತಿಸಿದೆ. ಈ ಮೊತ್ತದಲ್ಲಿ ಅರಣ್ಯ ಇಲಾಖೆ ತನ್ನ ಅರಣ್ಯ ಭೂಮಿಯಲ್ಲಿ ಹಾಗೂ ಸ್ಥಳ ಕೊರತೆ ಇದ್ದರೆ ಕಂದಾಯ ಇಲಾಖೆ ಗುರುತಿಸುವ ಸ್ಥಳದಲ್ಲಿ 1 ಮರದ ಬದಲಾಗಿ 15 ಸಸಿ ನೆಡಬೇಕು. ಅದಕ್ಕಾಗಿ 1.10 ಕೋ.ರೂ. ಬಳಸಬೇಕು.
Advertisement
ಲೆಕ್ಕಕ್ಕಿಂತ ಅಧಿಕ ಮರ ತೆರವು..!ಆದರೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿದ ಅನುಮತಿಗಿಂತ ಅಧಿಕ ಮರಗಳನ್ನು ತೆರವು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಗೋಳಿತೊಟ್ಟು ಮೀಸಲು ಅರಣ್ಯ ಸಹಿತ ಇತರ ಅರಣ್ಯ ಪ್ರದೇಶದಲ್ಲಿ 7,992 ಹಾಗೂ ಸರಕಾರಿ ಭೂಮಿಯಲ್ಲಿದ್ದ 4,870 ಮರಗಳನ್ನು ತೆರವು ಮಾಡಲಾಗುತ್ತಿದೆ. ಆದರೆ ಟೆಂಡರ್ ಪಡೆದವರು ಇಲಾಖೆ ಗುರುತು ಮಾಡಿದ ಮರಗಳ ಜತೆಗೆ ಇತರ ಮರಗಳನ್ನೂ ಕಡಿಯುತ್ತಿರುವುದು ಕಂಡುಬಂದಿದೆ. ನೆಲ್ಯಾಡಿ, ಗುಂಡ್ಯ, ಗೋಳಿತೊಟ್ಟು ವ್ಯಾಪ್ತಿಯಲ್ಲಿ ಹೆದ್ದಾರಿಯುದ್ದಕ್ಕೂ ಕಡಿದ ಮರಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂಬುದು ಪರಿಸರವಾದಿಗಳ ಆರೋಪ. ಎಲ್ಲೆಲ್ಲಿ ಎಷ್ಟೆಷ್ಟು..?
ಪಂಜ ವಲಯ ವ್ಯಾಪ್ತಿಯ ನೆಲ್ಯಾಡಿ, ನೂಜಿ ಬಾಳ್ತಿಲದಲ್ಲಿ 15 ಮರ, ಉಪ್ಪಿನಂಗಡಿ ವಲಯ ವ್ಯಾಪ್ತಿಯ ಉಪ್ಪಿನಂಗಡಿ, ಕೌಕ್ರಾಡಿ, ರೆಖ್ಯಾ ಗ್ರಾಮ, ಶಿರಾಡಿಯಲ್ಲಿ 237, ಪುತ್ತೂರು ವಲಯ ಅರಣ್ಯ ವ್ಯಾಪ್ತಿಯ ಗೋಳಿತೊಟ್ಟು, ಕರುವೇಲುವಿನಲ್ಲಿ 937, ಬಂಟ್ವಾಳ ವಲಯ ವ್ಯಾಪ್ತಿಯ ಪೆರ್ನೆ, ಕಡೇಶಿವಾಲಯ, ಕೆದಿಲ, ಪೆರಾಜೆ, ಮಾಣಿ, ಬಾಳ್ತಿಲದಲ್ಲಿ 957 ಮರಗಳ ತೆರವಿಗೆ ಒಪ್ಪಿಗೆ ಸೂಚಿಸಲಾಗಿತ್ತು. - ಕಿರಣ್ ಪ್ರಸಾದ್ ಕುಂಡಡ್ಕ