ಹೈದರಾಬಾದ್:ಬಾಲ ಪ್ರತಿಭೆಯಾಗಿ ಈಗಾಗಲೇ ಹೆಸರು ಗಳಿಸಿದ್ದ ಅಗಸ್ತ್ಯ ಜೈಸ್ವಾಲ್ ಇದೀಗ 11ನೇ ವಯಸ್ಸಿನಲ್ಲೇ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮತ್ತೊಮ್ಮೆ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾನೆ.
ನಮ್ಮ ಮಗ ಶೇ.63ರಷ್ಟು ಅಂಕ ಪಡೆದು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ರಾಜ್ಯದಲ್ಲಿಯೇ ಅತಿ ಕಿರಿಯ ವಯಸ್ಸಿನಲ್ಲಿ ಪಿಯುಸಿ ಪಾಸ್ ಮಾಡಿರುವವರಲ್ಲಿ ನಮ್ಮ ಮಗನೇ ಮೊದಲಿಗ ಎಂದು ಅಗಸ್ತ್ಯಾ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೈದರಾಬಾದ್ ನ ಯೂಸೂಫ್ ಗುಡಾದ ಸೈಂಟ್ ಮೇರಿಸ್ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಮಾರ್ಚ್ ನಲ್ಲಿ ನಡೆದಿದ್ದ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ. ಭಾನುವಾರ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು.
ಅಗಸ್ತ್ಯಾ ಜೈಸ್ವಾಲ್ ತನ್ನ 9ನೇ(2015ರಲ್ಲಿ) ವಯಸ್ಸಿನಲ್ಲೇ ತೆಲಂಗಾಣ ಎಸ್ಸೆಸ್ಸೆಲ್ಸಿ ಮಂಡಳಿಯಿಂದ ಅನುಮತಿ ಪಡೆದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದ. ಅಷ್ಟೇ ಅಲ್ಲ ಈ ಕುಟುಂಬದಲ್ಲಿ ವಿಶೇಷ ಪ್ರತಿಭಾ ಪ್ರದರ್ಶಿಸಿದ ಮೊದಲಿಗ ಅಗಸ್ತ್ಯಾ ಅಲ್ಲ, ಯಾಕೆಂದರೆ ಅಗಸ್ತ್ಯಾ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ನೈನಾ ಜೈಸ್ವಾಲ್ ಸಹೋದರ.
ವರದಿಯ ಪ್ರಕಾರ, ನೈನಾ ಜೈಸ್ವಾಲ್ ಕೂಡಾ ತನ್ನ 15ನೇ ವಯಸ್ಸಿಗೆ ಉಸ್ಮಾನಿಯಾ ಯೂನಿರ್ವಸಿಟಿಯಲ್ಲಿ ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದಿರುವುದಾಗಿ ವಿವರಿಸಿದೆ.