ತಿರುವನಂತಪುರ: 11 ಮಂದಿ 50 ವರ್ಷದ ಒಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಳ ಪ್ರವೇಶಕ್ಕೆ ಮುಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಬಳಿಕ ವಾಪಾಸಾದ ಘಟನೆ ಭಾನುವಾರ ನಡೆದಿದೆ.
ಚೆನ್ನೈ ಮೂಲದ ಮಾನಿಥಿ ಎಂಬ ಸಂಘಟನೆಯ 11 ಮಂದಿ ಸದಸ್ಯೆಯರು ಕಪ್ಪು ಬಣ್ಣದ ವಸ್ತ್ರಧಾರಿಗಳಾಗಿ ಮಾಲಾಧಾರಿಗಳಂತೆಯೇ ದೇವಾಲಯವನ್ನು ಪ್ರವೇಶಿಸಲು ಪಂಪೆಯಿಂದ ಪಾದಯಾತ್ರೆ ಕೈಗೊಂಡಿದ್ದರು .
ಪೊಲೀಸರ ಭದ್ರಕೋಟೆಯಲ್ಲಿ ಸುಮಾರು 5 ಕಿ.ಮೀ ರಸ್ತೆಯಲ್ಲಿ ಪಾದಾಯಾತ್ರೆ ನಡೆಸಿದರು. ಈ ವೇಳೆ ಭಕ್ತರ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಲವರು ಘೋಷಣೆಗಳನ್ನು ಕೂಗಿ ದೇವಾಲಯದತ್ತ ಬರದಂತೆ ಬೆದರಿಕೆ ಹಾಕಿದ್ದಾರೆ. ನೂರಾರು ಸಂಖ್ಯೆಯಲ್ಲಿ ಭಕ್ತರು ರೊಚ್ಚಿಗೆದ್ದ ಹಿನ್ನಲೆಯಲ್ಲಿ ಮಹಿಳೆಯರು ಪಂಪೆಯಿಂದ ವಾಪಾಸಾಗಲು ನಿರ್ಧರಿಸಿದರು.
ಮಹಿಳೆಯರಿಗೆ ಪೊಲೀಸರು ಕೋಟೆ ಮಾದರಿಯಲ್ಲಿ ಭದ್ರತೆಯನ್ನು ಒದಗಿಸಿದ್ದರು. ಆದರೂ ಕೆಲವರು ರೊಚ್ಚಿಗೆದ್ದು ಮಹಿಳೆಯರ ಮೇಲೆ ದಾಳಿಗೆ ಮುಂದಾಗಿದ್ದಾರೆ.
ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇವಳಕ್ಕೆ 10 ರಿಂದ 50 ವಯೋಮಿತಿ ಸಹಿತ ಎಲ್ಲ ವಯೋಮಾನದ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಆ ಬಳಿಕ ಮಹಿಳೆಯರು ದೇವಾಲಯ ಪ್ರವೇಶಿಸಬಾರದು ಎಂದು ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.