ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನೀತಿ ಆಯೋಗದ ಸಭೆ ನಡೆದಿದ್ದು, 11 ರಾಜ್ಯಗಳ ಮುಖ್ಯಮಂತ್ರಿಗಳು ಸಭೆಗೆ ಗೈರಾಗಿದ್ದಾರೆ. ಇದು ಕೇಂದ್ರ ಸರಕಾರ ಮತ್ತು ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳ ನಡುವಿನ ವೈಮನಸ್ಸು ಮತ್ತಷ್ಟು ತೀವ್ರಗೊಂಡಿರುವ ಸುಳಿವು ನೀಡಿದೆ.
ನೀತಿ ಆಯೋಗದ ಸಭೆ ಬಹಿಷ್ಕರಿಸುವುದು ರಾಜ್ಯಗಳ ಅಭಿವೃದ್ಧಿಯನ್ನು ಬಹಿಷ್ಕರಿಸಿದಂತೆ ಎಂದು ಸರಕಾರ ಹೇಳಿದೆ. ನೂರಕ್ಕೂ ಹೆಚ್ಚು ವಿಚಾರಗಳು ಈ ಸಭೆಯಲ್ಲಿ ಚರ್ಚೆಯಾಗಲಿದ್ದು, ಯಾವ ರಾಜ್ಯಗಳ ಪ್ರತಿನಿಧಿಗಳು ಭಾಗಿಯಾಗುವುದಿಲ್ಲವೋ ಆ ರಾಜ್ಯಗಳು ನಷ್ಟ ಅನುಭವಿಸಲಿವೆ ಎಂದೂ ಹೇಳಿದೆ.
ಯಾರ್ಯಾರು ಗೈರು?: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಅನುಪಸ್ಥಿತಿಗೆ ಯಾವುದೇ ಕಾರಣವನ್ನು ನೀಡಿಲ್ಲ. ಇನ್ನು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು, ಆಡಳಿತಾತ್ಮಕ ಹುದ್ದೆಗಳ ವಿಚಾರದಲ್ಲಿ ಕೇಂದ್ರ ಸರಕಾರದ ಅಧ್ಯಾದೇಶವನ್ನು ಖಂಡಿಸಿ ನೀತಿ ಆಯೋಗದ ಸಭೆ ಬಹಿಷ್ಕರಿಸುವುದಾಗಿ ಶುಕ್ರವಾರವೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಎನ್ನುವುದು ಈಗ ಒಂದು “ತಮಾಷೆ’ ಆಗಿ ಮಾರ್ಪಾಡಾಗಿದೆ ಎಂದೂ ಅವರು ಆರೋಪಿಸಿದ್ದು, ಅದರಂತೆ ಸಭೆಗೆ ಹಾಜರಾಗಿಲ್ಲ.
“ನೀವು ಪಂಜಾಬ್‌ನ ಹಿತಾಸಕ್ತಿಯತ್ತ ಗಮನ ಕೊಡುತ್ತಿಲ್ಲ’ ಎಂದು ಕೇಂದ್ರ ಸರಕಾರಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪತ್ರ ಬರೆದಿದ್ದಾರೆ.
ಇವರಲ್ಲದೇ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೂ ಸಭೆಗೆ ಗೈರಾಗಿದ್ದಾರೆ. ನೀತಿ ಆಯೋಗದ 8ನೇ ಆಡಳಿತಾತ್ಮಕ ಮಂಡಳಿಯ ಸಭೆಯು ದಿಲ್ಲಿಯ ಪ್ರಗತಿ ಮೈದಾನದ ಹೊಸ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ನಡೆದಿದೆ. “ವಿಕಸಿತ ಭಾರತಃ 2047: ಟೀಂ ಇಂಡಿಯಾದ ಪಾತ್ರ’ ಎಂಬ ಥೀಮ್‌ನಡಿ ಈ ಸಭೆ ನಡೆದಿದೆ.
ಜನರ ಆಶೋತ್ತರ ಈಡೇರಿಸಲು ಒಗ್ಗಟ್ಟಾಗಿ
ಭಾರತವನ್ನು 2047ರ ವೇಳೆಗೆ ಅಭಿವೃದ್ಧಿಹೊಂದಿದ ರಾಷ್ಟ್ರವನ್ನಾಗಿಸುವ ಜನರ ಆಶೋತ್ತರಗಳನ್ನು ಈಡೇರಿ ಸಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸರಕಾರ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ರಾಜ್ಯಗಳು ಹಣಕಾಸು ಶಿಸ್ತು ಕಾಯ್ದುಕೊಳ್ಳುವುದರ ಜತೆಗೆ ಪ್ರಬುದ್ಧ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಹೀಗಾದಾಗ ಮಾತ್ರವೇ ದೇಶ 100ನೇ ಸ್ವಾತಂತ್ರೊéàತ್ಸವವನ್ನು ರಾಷ್ಟ್ರ ಹೆಮ್ಮೆಯಲ್ಲಿ ಆಚರಿಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.