Advertisement
ಮಣಭಾರದ ಬ್ಯಾಗು, ಸದಾ ಟರಕ್ ಟರಕ್ ಅನ್ನುವ ಜಾಮೆಟ್ರಿ ಬಾಕ್ಸು. ಕತ್ತಿಗೆ ಬಿಗಿದುಕೊಂಡ ಟೈ, ಮೊಣಕಾಲು ಉದ್ದದ ಸಾಕ್ಸು. ಅದಕ್ಕೆ ಹೊಂದುವ ಬಣ್ಣಕ್ಕೆ ಅನುಸಾರವಾಗಿ ಹೆಣೆದು ಎತ್ತಿಕಟ್ಟಿರುವ ಎರಡು ಜಡೆಗಳು. ಬಂದರೂ ಬಾರದಂತಿರುವ ಮೀಸೆಗಳು, ಮನಸ್ಸಿನಲ್ಲಿ ಸಾವಿರ ವೊಲ್ಟೆàಜ್‌ನ ಮಿಂಚು. ಅವನ್ಯಾಕೋ ನನ್ನನ್ನೇ ನೋಡುತ್ತಾನೆ ಅನ್ನೋ ಫೀಲಿಂಗು. ಇವೆಲ್ಲಾ ನಿಮ್ಮ ಬಳಿ ಇವೆಯೇ? ಹಾಗಾದರೆ ನೀವು ಸ್ಕೂಲ್ ಹಂತದ ಕೊನೆಯ ಮೆಟ್ಟಿಲಲ್ಲಿದ್ದೀರಿ ಅಂತಾನೇ ಅರ್ಥ. ಅಷ್ಟೇ ಅಲ್ಲ ಕೆಲವೇ ದಿನಗಳಲ್ಲಿ “ಕಾಲೇಜ್’ ಅನ್ನೋ ಮಹಾಕಟ್ಟಡದ ಮೊದಲ ಮೆಟ್ಟಿಲಿಗೆ ಹಾರಲಿದ್ದೀರಿ ಎಂದೂ ಅರ್ಥ!
Related Articles
Advertisement
ಕಾಲೇಜು ಅಂದ ತಕ್ಷಣ ನಿಮಗೊಂದು ಸ್ವಾತಂತ್ರÂ ಸಿಕ್ಕಿದೆ ಎಂಬ ಭಾವ ಮೂಡುತ್ತದೆ. ಮೊದಲ ದಿನವನ್ನಂತೂ ನೀವು ನಿಮ್ಮ ಲೈಫ್ನಲ್ಲಿ ಯಾವತ್ತೂ ಮರೆಯಲಾರಿರಿ. ಕಾಲೇಜಿಗೆ ಬಂದಿದೀನಿ ಅನ್ನೋ ಭಾವವೇ ನಿಮ್ಮನ್ನು ಪುಳಕಿತರನ್ನಾಗಿಸುತ್ತದೆ. ಹುಡುಗ ತನಗೆ ಗೊತ್ತಿಲ್ಲದೆ ಹುಡುಗಿಯರ ಗುಂಪಿನ ಕಡೆಗೆ ಒಂದು ಕಣ್ಣು ಹಾಯಿಸುತ್ತಾನೆ. ಹುಡುಗಿಯರೂ ಕದ್ದಾದರೂ ಹುಡುಗರ ಕಡೆ ತಮ್ಮ ಎಕ್ಸ್‌ರೇ ಕಂಗಳ ದೃಷ್ಟಿ ಹಾಯಿಸಿರುತ್ತಾರೆ. ಎಲ್ಲವೂ ಹೊಸತು. ಬಹುತೇಕ ಎಲ್ಲರೂ ಹೊಸಬರು. ಮುಜುಗರದ ಪರಿಚಯ, ಮುಜುಗರದ ಮಾತು. ಏನೋ ಭಯ. ಏನೋ ಖುಷಿ. ಎಲ್ಲವೂ ಮಿಳಿತ. ಎರಡು ಜಡೆಯಿಲ್ಲ. ಫ್ರಾಕ್ ಬದಲಿಗೆ ಚೂಡಿ. ಟೈನ ಬಿಗಿತವಿಲ್ಲ. ಮಣಭಾರದ ಚೀಲವಿಲ್ಲ. ಹೋಂ ವರ್ಕ್‌ನ ಕಿರುಕುಳವಿಲ್ಲ. ವಿಜ್ಞಾನ ಮತ್ತು ಸಮಾಜ ವಿಷಯಗಳನ್ನು ಮಿಕ್ಸ್ ಮಾಡಿ ಕಲಿಯುವ ಪೇಚಾಟವಂತೂ ಮೊದಲೇ ಇಲ್ಲ. ನಿಮ್ಮ ಇಷ್ಟದ ವಿಷಯವನ್ನು ಆಯ್ದುಕೊಂಡಿರುತ್ತೀರಿ. ಅದರಂತೆ ನಾಲ್ಕು ಬುಕ್‌ಗಳನ್ನು ಎತ್ತಿಕೊಂಡಿದ್ದೀರಿ. ಅಷ್ಟೇ ನಿಮ್ಮ ಸ್ಟಡಿ ಮಟೀರಿಯಲ್ಲು.
ಶಾಲೆಯ ಸರ್‌ಗಳಷ್ಟು ಯಾಕೋ ಲೆಕ್ಚರರ್‌ಗಳು ಬಿಗಿಯಿಲ್ಲ ಅನಿಸುತ್ತದೆ. ನಮಗೆ ಅಷ್ಟೊಂದು ಸ್ವಾತಂತ್ರ Âವೇ ಎಂಬ ಅನುಮಾನ ಮೂಡುತ್ತೆ! ನಮ್ ಸರ್‌ಗಳು ಯಾಕೆ ಅಷ್ಟೊಂದು ಗೋಳು ತಿಂದುಬಿಟ್ರಾ ಅನಿಸುತ್ತೆ. ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರ ತರಗತಿಗಳಿಲ್ಲ. ಮೂರೋ ನಾಲ್ಕೋ ಪೀರಿಯಡ್‌ಗಳು. ಕೆಲವೊಮ್ಮೆ ಖಾಲಿ ಖಾಲಿ ತರಗತಿಗಳು. ನಿಮಗೆ ನೀವೇ ಏನೋ ಕಳೆದುಕೊಂಡ ಭಾವ. ನಿಧಾನಕ್ಕೆ ಲೆಕ್ಚರರ್‌ಗಳ ಮೇಲಿನ ತೀವ್ರ ಅವಲಂಬನೆ ಕಡಿಮೆಯಾಗುತ್ತದೆ. ನೀವೇ ಸ್ವತಃ ಓದಿಕೊಳ್ಳಲು ಸಿದ್ದರಾಗುತ್ತೀರಿ. ಸಂಬಂಧಿಸಿದ ಪುಸ್ತಕಗಳನ್ನು ಹುಡುಕಲು ಆರಂಭಿಸುತ್ತೀರಿ. ಕೆಲವರು ಅದೇ ಸ್ವಾತಂತ್ರÂವನ್ನು ಸಿನೆಮಾ ಥಿಯೇಟರ್‌ಗೊà, ಇನ್ಯಾವುದೋ ಕೆಲಸಕ್ಕೊ ಬಳಸಿಕೊಳ್ಳುತ್ತಾರೆ. ಕಾಲೇಜು, ನಿಮಗೊಂದು ಜವಾಬ್ದಾರಿಯನ್ನು ಕಲಿಸಿಕೊಡುತ್ತದೆ. ಈ ಮೊದಲು ನಿಮ್ಮ ಜವಾಬ್ದಾರಿ ನಿಮ್ಮ ಶಿಕ್ಷಕರದ್ದಾಗಿತ್ತು. ನೀವು ಸಾಕಷ್ಟು ಫ್ರೀಯಾಗಿದ್ರಿ. ಈಗ ನಿಮ್ಮ ಲೆಕ್ಚರರ್ ಫ್ರೀಯಾಗಿದ್ದಾರೆ. ನೀವು ಜವಾಬ್ದಾರರಾಗಿದ್ದೀರಿ.
ಸ್ಕೂಲ್‌ನಲ್ಲಿ ಅವಳಲ್ಲಿ, ಅವನಲ್ಲಿ ಮಾತಾಡುವಾಗ ಯಾವುದೇ ಮುಜುಗರವಿರಲಿಲ್ಲ. ಭಾವನೆಗಳಿರಲಿಲ್ಲ. ಈಗ ಅದೆಂಥಧ್ದೋ ನಾಚಿಕೆ. ನಿಮ್ಮಲ್ಲಿ ನಿಮಗೆ ಗೊತ್ತಿಲ್ಲದೆ ಪರಸ್ಪರ ಆಕರ್ಷಿತರಾಗುವ ಭಾವ. ಕೆಲವೊಮ್ಮೆ ನಿಮ್ಮ ಲೆಕ್ಚರರ್‌ಗಳೇ ನಿಮಗೆ ಇಷ್ಟವಾಗಿಬಿಡುತ್ತಾರೆ. ಅವರೆಡೆಗೂ ಪ್ರೇಮಪತ್ರಗಳು ರವಾನೆಯಾಗುವುದುಂಟು. ಹುಡುಗ ಹುಡುಗಿಯರು ತಾವು ಪ್ರೀತಿ ಮಾಡುತ್ತಿದ್ದೇವೆ ಅಂತ ಭಾವಿಸಿಕೊಳ್ಳುವುದುಂಟು. ಲಘು ಆಕರ್ಷಣೆಯೂ ಇವರಿಗೆ ಸೀರಿಯಸ್ ಲವ್ವಿನಂತೆ ಭಾಸವಾಗುತ್ತದೆ. ಇದು ಅವರವರ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟ. ನದಿಯ ಮೇಲೆ ಕಟ್ಟಿದ ಹಗ್ಗದ ಮೇಲಿನ ಸವಾರಿ ನಿಮ್ಮದು. ಸ್ವಲ್ಪ ಯಾಮಾರಿದರೂ ಕೆಳಕ್ಕೆ ಬಿದ್ದು ನದಿಯಲ್ಲಿ ಮುಳುಗಿ ಹೋಗುತ್ತೀರಿ. ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ. ಆದ್ದರಿಂದ ನಿಮ್ಮ ನಿಮ್ಮ ವರ್ತನೆಗಳಿಗೆ ನೀವೇ ಜವಾಬ್ದಾರರಾಗುತ್ತೀರಿ.
ಬದಲಾವಣೆ ಜಗದ ನಿಯಮ. ನೀವಂದುಕೊಂಡ ಗುರಿಯನ್ನು ಮುಟ್ಟಬೇಕಾದರೆ ಶಾಲೆ, ಅಲ್ಲಿಂದ ಕಾಲೇಜ್, ವಿಶ್ವದ್ಯಾಲಯಗಳ ಓದು, ತರಬೇತಿ ಕೋರ್ಸ್‌ಗಳಿಗೆ ಹೋಗಲೇಬೇಕು. ಆದರೆ ಆಯಾ ಹಂತದಲ್ಲಿ ಶಿಕ್ಷಣ ಕಲಿಸುವ ಪಾಠ, ಆಯಾ ಹಂತದಲ್ಲಿ ಅನುಭವಗಳು ಕಲಿಸುವ ಪಾಠ, ಜೊತೆಗೆ ನಿಮ್ಮ ಗುರಿಯ ಪ್ರಜ್ಞೆ ಎಲ್ಲವನ್ನೂ ಸೇರಿಸಿಕೊಂಡು ಒಂದು ಅದ್ಭುತವಾದ ದಾರಿಯನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಶಾಲೆ ಶಾಶ್ವತವಲ್ಲ. ಅಲ್ಲಿಂದಲೇ ಕಾಲೇಜಿಗೆ ಬಂದಿರಿ. ನೀವು ಪಡೆದ ಶಿಕ್ಷಣಕ್ಕೆ ಒಂದು ಕೆಲಸ ಅಂತ ಹಿಡಿಯುತ್ತೀರಿ. ಆಗ ಅಲ್ಲಿಯದೇ ಒಂದು ಲೈಫ್ ಶುರುವಾಗುತ್ತದೆ. ಒಂದು ನೆನಪಿರಲಿ: ಜೀವನದ ಪ್ರತಿ ಹಂತದಲ್ಲೂ ಎಲ್ಲವೂ ಇರುತ್ತದೆ. ನಮಗೆ ಬೇಕಾದದ್ದನ್ನು ಎತ್ತಿಟ್ಟುಕೊಳ್ಳಬೇಕು. ಸಿಗುವುದೆಲ್ಲಾ ಬಾಚಿಕೊಂಡರೆ ಅದರಿಂದ ತೊಂದರೆಗಳೂ ಆಗಬಹುದು. ಬದಲಾವಣೆಯನ್ನು ತುಂಬು ಹೃದಯದಿಂದಲೇ ಸ್ವಾಗತಿಸಿ, ಒಪ್ಪಿಕೊಳ್ಳಿ. ಮತ್ತು ಅದರಿಂದ ಬೆಳೆಯಿರಿ. ನೀವು ಶಾಲೆಯಲ್ಲಿದ್ದರೆ ಕಾಲೇಜು ಜೀವನಕ್ಕೆ, ಕಾಲೇಜಿನಲ್ಲಿದ್ದರೆ ವೃತ್ತಿ ಜೀವನಕ್ಕೆ ನಿಮಗೊಂದು ಆಲ್ ದಿ ಬೆಸ್ಟ್!
– ಸದಾಶಿವ್ ಸೊರಟೂರು