Advertisement

3 ತಿಂಗಳಲ್ಲಿ 108 ಆಂಬ್ಯುಲೆನ್ಸ್‌ ಹೊಸ ಗುತ್ತಿಗೆ: ಸಚಿವ ಪಾಟೀಲ

12:30 PM Dec 02, 2018 | |

ವಿಜಯಪುರ: ಆರೋಗ್ಯ ಕವಚದ 108 ಆಂಬ್ಯುಲೆನ್ಸ್‌ ವಾಹನಗಳ ಸೇವೆ, ನಿರ್ವಹಣೆಗೆ ಗುತ್ತಿಗೆ ಸಂಸ್ಥೆ ಶೋಷಣೆ ನಡೆಸುವ ದೂರುಗಳಿವೆ. ಹೀಗಾಗಿ ಬರುವ 3 ತಿಂಗಳ ಬಳಿಕ ಮರು ಟೆಂಡರ್‌ ಕರೆಯುವುದಾಗಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದ್ದು 108 ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುತ್ತಿಗೆ ನಿರ್ವಹಿಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

Advertisement

ಶನಿವಾರ ನಗರದಲ್ಲಿರುವ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಕವಚ 108 ನೌಕರರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯ 108 ನಿರ್ವಹಣೆ ಹಾಗೂ ಸೇವೆ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯಿಂದ ನೌಕರರ ಶೋಷಣೆ ಮಾಡುತ್ತಿದೆ ಎಂಬ ವ್ಯಾಪಕ ದೂರುಗಳಿವೆ. ಹೀಗಾಗಿ ಮರು ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲೂ ಈ ಕುರಿತು ಚರ್ಚೆ ನಡೆಸಿದ್ದು, ಹಾಲಿ ಗುತ್ತಿಗೆ ಸಂಸ್ಥೆಗೆ 6 ತಿಂಗಳು ಗುತ್ತಿಗೆ ಅವಧಿ ನೀಡುವ ಸಲಹೆ ಬಂದಿತ್ತು. ಆದರೆ ನೌಕರರ ಹಿತರಕ್ಷಣೆಗಾಗಿ 3 ತಿಂಗಳಿಗೆ ಅವಧಿ ವಿಸ್ತರಣೆ ಮಾಡಿ ಎಂದು ಪಟ್ಟು ಹಿಡಿದೆ ಎಂದು ವಿವರಿಸಿದರು.

ಗ್ಲೋಬಲ್‌ ಟೆಂಡರ್‌ ವ್ಯವಸ್ಥೆಯಲ್ಲಿ ಅಂಬ್ಯುಲೆನ್ಸ್‌ ಸೇವೆ ಹಾಗೂ ನಿರ್ವಹಣೆ ಕೈಗೊಳ್ಳಲು ಪ್ರಸ್ತುತ ಕರ್ನಾಟಕದಲ್ಲಿ ಗುತ್ತಿಗೆ ಪಡೆದಿರುವ ಕಂಪನಿ ಸೇರಿದಂತೆ ಮೂರೇ ಮೂರು ಕಂಪನಿಗಳು ಸಾಮರ್ಥ್ಯ ಹೊಂದಿವೆ. ಆದರೆ ಪ್ರಸ್ತುತ ಕಂಪನಿಯಿಂದ ನೌಕರರ ಶೋಷಣೆಯಾಗುತ್ತದೆ ಎಂಬ ಕಾರಣಕ್ಕೆ 4ನೇ ಕಂಪನಿ ಹುಡುಕಾಟ ನಡೆಸಿದ್ದೂ ನಾನೇ. ಹೀಗಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಅಂಬ್ಯುಲೆನ್ಸ್‌ ಸೇವೆ ಒದಗಿಸುವುದು ನನ್ನ ಕನಸಾಗಿದೆ ಎಂದರು. 

ಮೂರು ತಿಂಗಳುಗಳ ನಂತರ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲಾಗುವುದು. ಆಗ ನೌಕರರ ಸಂಘಟನೆ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ಸಲಹೆ ಪಡೆದುಕೊಳ್ಳಲಾಗುವುದು. ಇದರಿಂದಾಗಿ ನೌಕರರ ಹಿತರಕ್ಷಣೆ ಸಾಧ್ಯವಾಗಿ ದೊಡ್ಡದಾದ ಆತಂಕ ದೂರವಾಗುತ್ತದೆ ಎಂದರು.

ಪ್ರಾಣ ಉಳಿಸಬೇಕಾದ ವೈದ್ಯಕೀಯ ವೃತ್ತಿ ಕೆಲವು ವ್ಯಕ್ತಿಗಳಿಂದ ಘನತೆ ಕುಂದಿಸಿಕೊಳ್ಳುತ್ತಿದೆ. ಈಗ ಅನೇಕ ಡಾಕ್ಟರ್‌ಗಳೇ ನರ್ಸಿಂಗ್‌ ಹೋಂ ನಡೆಸಿ ಅಲ್ಲಿಯೇ ಲ್ಯಾಬೋರೇಟರಿ, ಔಷಧಾಲಯ ಹೊಂದಿದ್ದಾರೆ. ರೋಗಿಗಳನ್ನು ಕರೆತರುವುದು ಮಾತ್ರ ಬಾಕಿ ಇತ್ತು. ಆದರೆ ಅದನ್ನು ಸಹ ಕೆಲವು ವಾಹನ ಚಾಲಕರನ್ನು ಅಡ್ಡ ದಾರಿಗೆ ತಂದು ರೋಗಿಗಳನ್ನು ಕರೆಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರುವುದು ದುರ್ದೈವದ ಸಂಗತಿ ಎಂದರು.

Advertisement

ಮೇಲ್ಮನೆ ಮಾಜಿ ಸದಸ್ಯ ಡಾ| ಎಂ.ಪಿ.ನಾಡಗೌಡ ಮಾತನಾಡಿ, ಅಂಬ್ಯುಲೆನ್ಸ್‌ ವ್ಯವಸ್ಥೆ ಬಲವರ್ಧನೆಗೊಳ್ಳಬೇಕಿದೆ. ಇಂದಿಗೂ ಅಂಬ್ಯುಲೆನ್ಸಗಳು ಗೂಡ್ಸ್‌ ವಾಹನಗಳಾಗಿವೆ. ಎಲ್ಲಿಯಾದರೂ ನಾಲ್ಕೈದು ಗೂಡ್ಸ್‌ ವಾಹನಗಳು ನಿಂತಿವೆ ಎಂದರೆ ಅದು ಸರ್ಕಾರಿ ಆಸ್ಪತ್ರೆ ಎಂಬಂತಾಗಿರುವುದು ನೋವಿನ ಸಂಗತಿ. ಬಂಡವಾಳಶಾಹಿಗಳು ಗುತ್ತಿಗೆ ಪಡೆದಿರುವ 108 ನಿರ್ವಹಣೆಯಿಂದ ನೌಕರರಿಗೆ ತೊಂದರೆಯಾಗುತ್ತಿದೆ ಎಂದರು. 

ಮಾಜಿ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, 108 ನೌಕರರ ಶೋಷಣೆ ತಪ್ಪಿಸಲು ಸರ್ಕಾರವೇ ನೇರವಾಗಿ ಈ ವ್ಯವಸ್ಥೆಯ ಕರ್ಣಧಾರತ್ವ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯರನಾಳ ವಿರಕ್ತಮಠದ ಗುರುಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಘಟನೆ ರಾಜ್ಯ ಉಪಾಧ್ಯಕ್ಷ ಶ್ರೀಶೈಲ ಹೂಗಾರ, ಎಂ.ಎನ್‌. ಪಾಟೀಲ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next