Advertisement

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

05:24 PM Mar 26, 2024 | Team Udayavani |

ಉದಯವಾಣಿ ಸಮಾಚಾರ
ಅಮೀನಗಡ: ಮಾ. 26ರಂದು ಪಟ್ಟಣದಿಂದ ಶ್ರೀಶೈಲ ಮಲ್ಲಯ್ಯನ ಪಾದಯಾತ್ರೆ ಆರಂಭ ಗೊಳ್ಳಲಿದ್ದು, 111 ಅಡಿ ಉದ್ದದ ಮಲ್ಲಯ್ಯನ ಧ್ವಜ ಅನಾವರಣ ನಡೆಯಲಿದೆ. ಪಟ್ಟಣದ ಶ್ರೀಶೈಲ ಭಕ್ತರು ಹಾಗೂ ಬೆಂಗಳೂರಿನ ಅಮ್ಮಾ ಫೌಂಡೇಶನ್‌ ಪದಾಧಿ ಕಾರಿಗಳು ನಡೆಸುವ ಪಾದಯಾತ್ರೆಯಲ್ಲಿ ಭಕ್ತರು ಅಧ್ಯಾತ್ಮಿಕ ಚಿಂತನೆಯ ಜತೆಗೆ ಲೋಕಸಭೆ ಚುನಾವಣೆ ನಿಮಿತ್ತ ಸಾರ್ವಜನಿಕರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸುವುದು ವಿಶೇಷವಾಗಿದೆ.

Advertisement

ರಸ್ತೆಯುದಕ್ಕೂ 111 ಅಡಿ ಉದ್ದದ ಮಲ್ಲಯ್ಯ ಧ್ವಜ ಕೂಡಾ ತೆಗೆದುಕೊಂಡು ಹೋಗಲು ಹಾಗೂ ಮಲ್ಲಯ್ಯನ ಧ್ವಜಕ್ಕೆ 111 ಕೆಜಿ ಹೂವಿನ ಸುರಿಮಳೆಗೈಯಲು ಭರ್ಜರಿ ಸಿದ್ಧತೆ ನಡೆಸಿದೆ. ಮಲ್ಲಯ್ಯನ ಧ್ವಜವನ್ನು ಖ್ಯಾತ ಕಲಾವಿದ ಅಸ್ಲಂ ಕಲಾದಗಿ ಹಾಗೂ ಅಮೀನಗಡದ ರವಿ ಬಂಡಿ ತಯಾರಿ ಮಾಡುತ್ತಿದ್ದಾರೆ.

ಸಾಮಾಜಿಕ ಕಾರ್ಯ: ಉದ್ಯಮಿ-ಪತ್ರಕರ್ತ ಮಂಜುನಾಥ ಬಂಡಿ ಕಳೆದ 9 ವರ್ಷ ಹಿಂದೆ ಬೆಂಗಳೂರಿನ ಗೆಳೆಯರ ಬಳಗವನ್ನು ಪಟ್ಟಣಕ್ಕೆ ಕರೆದುಕೊಂಡು ಬಂದು ಶ್ರೀಶೈಲ ಪಾದಯಾತ್ರೆ ಆರಂಭಿಸಿದ್ದಾರೆ. ಪಾದಯಾತ್ರೆಯಲ್ಲಿ ಧಾರ್ಮಿಕ ಕಾರ್ಯದ ಜೊತೆಗೆ ಹಲವಾರು ಸಾಮಾಜಿಕ ಕಾರ್ಯ ಮಾಡಿದ್ದಾರೆ. ಈ ಬಾರಿ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪತ್ರಕರ್ತ ಮಂಜುನಾಥ ಬಂಡಿ ನೇತೃತ್ವದ ಪಟ್ಟಣದ ಹಾಗೂ ಬೆಂಗಳೂರಿನ ಅಮ್ಮಾ ಫೌಂಡೇಶನ್‌-ಹೆಲ್ಪ್ ಆ್ಯಂಡ್‌ ಗ್ರೋ ತಂಡವು ಕೊರೊನಾದಂತ ಸಂಕಷ್ಟದ ಸಂದರ್ಭದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯಲ್ಲಿ 108 ಅಡಿ ಉದ್ದದ ಮಲ್ಲಯ್ಯನ ಧ್ವಜ ಹಾಗೂ ಅತಿ ದೊಡ್ಡ ಮಾಸ್ಕ್ ಪ್ರದರ್ಶನ ಮಾಡುವುದರ ಮೂಲಕ ಕೊರೊನಾ ಜಾಗೃತಿ ಮಾಡಿ ಸಾಮಾಜಿಕ ಕಳಕಳಿ ಮೆರೆದಿತ್ತು. ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯಲ್ಲಿ ಸಾರ್ವಜನಿಕರಿಗೆ ಮತದಾನದ ಮಹತ್ವ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಉತ್ತಮವಾದ ಉದ್ದೇಶದಿಂದ ಮತದಾನ ಜಾಗೃತಿ ಕಾರ್ಯ ಮಾಡಲಾಗುತ್ತದೆ ಎಂದು ಹೇಳುತ್ತಾರೆ
ಭಕ್ತರು.

ಮತದಾನ ಜಾಗೃತಿ: ಪಾದಯಾತ್ರೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಭಕ್ತರು ಅತಿದೊಡ್ಡ ಮಲ್ಲಯ್ಯನ ಧ್ವಜ ತೆಗೆದುಕೊಂಡು ಹೋಗುವುದರ ಮೂಲಕ ಮಲ್ಲಯ್ಯನ ಸ್ಮರಣೆ ಮಾಡಿಕೊಂಡು ಹೋಗುವುದರ ಜತೆಗೆ ರಸ್ತೆಯುದ್ದಕ್ಕೂ ಮತದಾನ ನಮ್ಮ ಸಂವಿಧಾನ ಹಕ್ಕು, ಕಡ್ಡಾಯವಾಗಿ ಮತ ಚಲಾಯಿಸುವಂತೆ ಭಿತ್ತಿಪತ್ರ ವಿತರಣೆ ಮೂಲಕ ಮತದಾನ ಜಾಗೃತಿ ಮೂಡಿಸುವ ಯೋಜನೆ ಮಾಡಲಾಗಿದೆ.ಮರಗಾಲು ಕಟ್ಟಿಕೊಂಡು ಪಾದಯಾತ್ರೆ ಮಾಡುವ ಮಲ್ಲಯ್ಯನ ಭಕ್ತರಿಗೆ ಮತ್ತು ಕಂಬಿ ಹೊತ್ತು ಸಾಗುವ ಮಲ್ಲಯ್ಯನ ಭಕ್ತರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮತ್ತು ಅಮೀನಗಡದಿಂದ ಶ್ರೀಶೈಲವರೆಗೆ ಪಾದಯಾತ್ರೆಯಲ್ಲಿ ದಾರಿಯುದ್ದಕ್ಕೂ ದಾಸೋಹ ಸೇವೆ ಮಾಡುವವರಿಗೆ ಸನ್ಮಾನ ಮಾಡುವ ತೀರ್ಮಾನ ಮಾಡಲಾಗಿದೆ.

Advertisement

ಅಮೀನಗಡದಲ್ಲಿ ಮೂರು ವರ್ಷಗಳಿಂದ ಮಲ್ಲಯ್ಯನ ಭಕ್ತರಿಗೆ ಉಚಿತ ಕಬ್ಬಿನ ರಸ ವಿತರನೆ ಮಾಡುತ್ತಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಾಗುವುದು ಎಂದು ಅಮ್ಮಾ ಫೌಂಡೇಶನ್‌ ಸಂಸ್ಥಾಪಕ ರೋಹಿತ ವಿ.ಕೆ ಮಾಹಿತಿ ನೀಡಿದ್ದಾರೆ ಪಾದಯಾತ್ರೆಯಲ್ಲಿ 5 ವರ್ಷದ ಅಥ್ಲೀಟ್‌, ಪದ್ಮಾವತಿ ಡಿ.ಆರ್‌., ಈ ಬಾರಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಕಿರಿಯ ವಯಸ್ಸಿನ ಪಾದಯಾತ್ರಿಯಾಗಿದ್ದಾರೆ. ಈ ಬಾರಿ ಪಾದಯಾತ್ರೆಯಲ್ಲಿ ಮೈಸೂರಿನ ಸಚ್ಚಿದಾನಂದ, ಅಂತಾರಾಷ್ಟ್ರೀಯ ನೃತ್ಯಪಟು ಗುರು ರೂಪಾ ರವಿಚಂದ್ರನ, ಕಾಮಡಿ ಕಿಲಾಡಿ, ಬಿಗ್‌ಬಾಸ್‌ನ ಲೋಕೇಶನ ಹಲವಾರು ಯುವ ಕಲಾವಿದರು ಭಾಗಿಯಾಗಲಿದ್ದಾರೆ.

*ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next