Advertisement

ಯಡೂರಿನಿಂದ ಶ್ರೀಶೈಲಕ್ಕೆ ಪಾದಯಾತ್ರೆ

03:03 PM Jun 07, 2022 | Team Udayavani |

ಹುಬ್ಬಳ್ಳಿ: ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ನಿಮಿತ್ತ ನಡೆಯುವ ಪಾದಯಾತ್ರೆ, ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಭಕ್ತರಿಗೆ ಆಹ್ವಾನ ನೀಡಿದರು.

Advertisement

ಸೋಮವಾರ ಯಲ್ಲಾಪುರ ಓಣಿಯ ದೇಸಾಯಿ ಕ್ರಾಸ್‌ನಲ್ಲಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ತಾವು ಪೀಠಾರೋಹಣ ಮಾಡಿ 12 ವರ್ಷಗಳು ಆಗಿದ್ದು, ಜನ್ಮ ತಾಳಿ 50 ವರ್ಷ ಪೂರ್ಣಗೊಂಡಿವೆ. ಇಂತಹ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹಲವರು ಚರ್ಚಿಸಿದರು. ಆದರೆ ಈ ಕಾರ್ಯಕ್ರಮ ಕೇವಲ ಸನ್ಮಾನ, ಹಾರ ತುರಾಯಿಗೆ ಸೀಮಿತವಾಗಬಾರದು. ಸಮಾಜಕ್ಕೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕೆ ಚಿಂತನೆ ನಡೆಸಿ ಧಾರ್ಮಿಕ, ಸಾಮಾಜಿಕ ಹಾಗೂ ಜನಜಾಗೃತಿಗಾಗಿ ಎರಡು ಸಂದರ್ಭಗಳನ್ನು ಮೀಸಲಿಡಲಾಗುತ್ತಿದ್ದು, ಈ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದರು.

ಅ. 29ರಿಂದ ಚಿಕ್ಕೋಡಿಯ ಯಡೂರು ಕ್ಷೇತ್ರದಿಂದ ಪಾದಯಾತ್ರೆ ಆರಂಭವಾಗಿ ನ. 29ರಂದು ಶ್ರೀಶೈಲದಲ್ಲಿ ಮುಕ್ತಾಯವಾಗಲಿದೆ. ಪಾದಯಾತ್ರೆಯುದ್ದಕ್ಕೂ ಮುಕ್ಕಾಂ ಹೂಡುವ ಸ್ಥಳಗಳಲ್ಲಿ ಲಿಂಗಧಾರಣೆ ಹಾಗೂ ಇದರ ಜಾಗೃತಿ ಮೂಡಿಸಲಾಗುವುದು. ಶಿವನ ಬಗ್ಗೆ ಶ್ರದ್ಧೆಯುಳ್ಳ ಯಾರು ಬೇಕಾದರೂ ಲಿಂಗಧಾರಣೆ ಮಾಡಬಹುದು. ಯುಗಾದಿಯ ಬೇಸಿಗೆಯಲ್ಲಿ ಶ್ರೀಶೈಲಕ್ಕೆ ಬರುವ ಪಾದಯಾತ್ರಿಗಳು ನೆರಳಲ್ಲಿ ಬರಬೇಕು ಎನ್ನುವ ಉದ್ದೇಶದಿಂದ ದಾರಿಯುದ್ದಕ್ಕೂ ಎರಡು ಬದಿಯಲ್ಲಿ ಗಿಡಗಳನ್ನು ನೆಡಲಾಗುವುದು. ದುಶ್ಚಟಗಳನ್ನು ಭಿಕ್ಷೆಯಾಗಿ ಪಡೆದು ಸನ್ಮಾರ್ಗದಲ್ಲಿ ನಡೆಯುವಂತೆ ಜಾಗೃತಿ ಮೂಡಿಸಲಾಗುವುದು. ಸಮಾಜಕ್ಕಾಗಿ ಪಲ್ಲಕ್ಕಿಯಲ್ಲಿ ಕೂಡುವ ಶ್ರೀಗಳು ಭಕ್ತರೊಂದಿಗೆ ಪಾದಯಾತ್ರೆ ಕೂಡ ಮಾಡಲಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಸೆ. 1ರೊಳಗೆ ಹೆಸರು ನೋಂದಾಯಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ವೇದಾಂತ ಸಮ್ಮೇಳನ: ಪಾದಯಾತ್ರೆ ಮುಕ್ತಾಯಗೊಂಡ ನಂತರ ಡಿಸೆಂಬರ್‌ ಮೊದಲ ವಾರದಿಂದ ಜ. 10ರವರೆಗೆ ಶ್ರೀಶೈಲದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ಜಗದ್ಗುರು ಪಂಡಿತಾರಾಧ್ಯ ಲಿಂಗೋದ್ಭವ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಇಷ್ಟಲಿಂಗ ಮಹಾಪೂಜೆ, ತುಲಾಭಾರ, ರುದ್ರೋಹ, ಅನ್ನದಾನ ಕಾರ್ಯಕ್ರಮಗಳು ನಡೆಯಲಿವೆ. ಜ. 10ರಿಂದ 15ರವರೆಗೆ ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮ ಸಮಾವೇಶ, ತೆಲುಗು, ಕನ್ನಡ, ಮರಾಠಿ ವೀರಶೈವ ಗೋಷ್ಠಿ, ಉಚಿತ ಸಾಮೂಹಿಕ ವಿವಾಹ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಅಖೀಲ ಭಾರತ ವೀರಶೈವ ಮಹಾಸಭೆಯ ಮಹಾ ಅಧಿವೇಶನ ನಡೆಯಲಿದೆ ಎಂದರು.

ವೀರಶೈವ ಮುಖಂಡ ಪ್ರಕಾಶ ಬೆಂಡಿಗೇರಿ ಮಾತನಾಡಿ, ಹಿಂದೆ ನೆರೆ ಸಂದರ್ಭದಲ್ಲಿ ಮೊದಲಿಗೆ ಸಮಾಜದ ನೆರವಿಗೆ ಆಗಮಿಸಿದ್ದು ಶ್ರೀಶೈಲ ಜಗದ್ಗುರುಗಳು. ಮನೆ ಕಳೆದುಕೊಂಡವರಿಗೆ 100 ಮನೆಗಳನ್ನು ನಿರ್ಮಿ ಸಿಕೊಟ್ಟರು. ಭಕ್ತರಿಂದ 6 ಕೆಜಿ ಚಿನ್ನ ಸಂಗ್ರಹಿಸಿ ಸರಕಾರಕ್ಕೆ ನೀಡಿದರು. ಇಂತಹ ಸಮಾಜಮುಖೀ ಕಾರ್ಯಗಳ ಮೂಲಕ ಶ್ರೀಗಳು ಕೋಟ್ಯಾಂತರ ಭಕ್ತರನ್ನು ಹೊಂದಿದ್ದಾರೆ. ಇದೀಗ ವಿಶೇಷ ಕಾರ್ಯಕ್ರಮದ ಮೂಲಕ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಈ ಭಾಗದ ಭಕ್ತರು ಪೀಠದ ಸೇವೆ ಮಾಡಲಿದ್ದಾರೆ ಎಂದರು.

Advertisement

ಪ್ರಮುಖರಾದ ಪರ್ವತಪ್ಪ ಬಳಗಣ್ಣವರ, ಬಸವರಾಜ ಚನ್ನೋಜಿ, ಆರ್‌.ಜಿ. ಹೆಬ್ಬಳ್ಳಿ, ಸಂಗಪ್ಪ ಮಟ್ಟಿ, ಬಸವರಾಜ ಮಮದಾಪುರ, ವಿರೂಪಾಕ್ಷಗೌಡ ಪಾಟೀಲ, ಶಾಂತಾ ಚನ್ನೋಜಿ, ಈರಯ್ಯ ಹಿರೇಮಠ ಇನ್ನಿತರರಿದ್ದರು.

ಭಕ್ತರಿಗಾಗಿ 500 ಕೊಠಡಿ ನಿರ್ಮಾಣ: ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಒಂದಿಷ್ಟು ಸೇವಾ ಶುಲ್ಕ ನಿಗದಿಪಡಿಸಿದ್ದು, ಇದರಿಂದ ಬರುವ ಸಂಪೂರ್ಣ ಹಣವನ್ನು ಆಂಧ್ರ ಸರಕಾರ ಪೀಠಕ್ಕೆ ನೀಡಿರುವ 10 ಎಕರೆ ಜಾಗದಲ್ಲಿ ಭಕ್ತರಿಗಾಗಿ 500 ಕೊಠಡಿ, 500 ಕಂಬಿಗಳು ಕೂಡಲಿಕ್ಕೆ ಮಹಾಮಂಟಪ, ಗುರುಕುಲ ಮಾದರಿಯ ವಸತಿ ಶಾಲೆ ಹಾಗೂ ಸುಸಜ್ಜಿತ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಬಳಸಲಾಗುವುದು. ಇಲ್ಲಿನ ಭೂಮರಡ್ಡಿ ಕಾಲೇಜಿನ ತಂತ್ರಜ್ಞರು ನಿರ್ಮಾಣದ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲಿದ್ದಾರೆ. ಭಕ್ತರ ನೀಡುವ ದೇಣಿಗೆ, ಕಾಣಿಕೆ ಎಲ್ಲವೂ ಸಮಾಜಕ್ಕೆ ಅರ್ಪಿಸುವ ಕಾರ್ಯ ಇದಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗುವುದು ಎಂದು ಜಗದ್ಗುರುಗಳು ತಿಳಿಸಿದರು.

ನೋಟ್‌ಬುಕ್‌ ಬಿಡುಗಡೆ: ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿಮಠ ಅವರು ಬಡ ವಿದ್ಯಾಥಿ ìಗಳಿಗೆ ವಿತರಿಸಲು ಉದ್ದೇಶಿಸಿರುವ ನೋಟ್‌ ಬುಕ್‌ಗಳನ್ನು ಶ್ರೀಶೈಲ ಪೀಠದ ಜಗದ್ಗುರುಗಳು ಬಿಡುಗಡೆ ಮಾಡಿದರು. ಇಂತಹ ಸಮಾಜಮುಖೀ ಕಾರ್ಯಗಳು ಮತ್ತಷ್ಟು ಆಗಲಿ ಎಂದು ಆಶೀರ್ವದಿಸಿದರು. ಕಾಂಗ್ರೆಸ್‌ ಮುಖಂಡರಾದ ಹೂವಪ್ಪ ದಾಯಗೋಡಿ, ಪ್ರಕಾಶ ಕ್ಯಾರಕಟ್ಟಿ, ಮೋಹನ ಹಿರೇಮನಿ, ಸುವರ್ಣ ಕಲ ಕುಂಟ್ಲಾ, ಶಿವು ಬೆಂಡಿಗೇರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next