Advertisement

108 ಆ್ಯಂಬುಲೆನ್ಸ್‌ಗೆ ನೂರೆಂಟು ಸಮಸ್ಯೆ!

10:35 AM Sep 02, 2018 | Team Udayavani |

ಪುತ್ತೂರು: ಅನಾರೋಗ್ಯ, ಅಪಘಾತದಂತಹ ತುರ್ತು ಸಂದರ್ಭದಲ್ಲಿ ಶೀಘ್ರ ಸ್ಪಂದನೆಗೆ 2008ರಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ 108 ಆರೋಗ್ಯ ಕವಚ ಆ್ಯಂಬುಲೆನ್ಸ್‌ ವ್ಯವಸ್ಥೆಯು ಇಂದು ನೂರೆಂಟು ಸಮಸ್ಯೆಯಲ್ಲಿದೆ! ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿ ಗೊಳಿಸದ ಜಿವಿಕೆ ಸಂಸ್ಥೆಯ ಗುತ್ತಿಗೆ ಒಡಂಬಡಿಕೆಯನ್ನು ನಿಲ್ಲಿಸಲು ನಿರ್ಧರಿಸಿರುವ ರಾಜ್ಯ ಸರಕಾರ ಹೊಸದಾಗಿ ಟೆಂಡರ್‌ ಕರೆಯಲು ನಿರ್ಧರಿಸಿದೆ. ಕಳೆದ 5-6 ತಿಂಗಳಿನಿಂದ ಟೆಂಡರ್‌ ಪ್ರಕ್ರಿಯೆ ನಡೆಯದೇ ಇರುವುದರಿಂದ ಅವಧಿ ಮುಗಿದರೂ ಹಾಲಿ ಸಂಸ್ಥೆಗೆ ಗುತ್ತಿಗೆಯನ್ನು 3 ತಿಂಗಳಿಗೆ ವಿಸ್ತರಿಸಲಾಗಿದೆ. ಗುತ್ತಿಗೆ ಮುಗಿದರೂ ವಿಸ್ತರಿಸಲಾಗಿರುವುದರಿಂದ ಸಂಸ್ಥೆಯು ವ್ಯವಸ್ಥೆಯ ಕುರಿತು ನಿರ್ಲಕ್ಷ್ಯ ವಹಿಸಿರುವುದರಿಂದ 108 ಆರೋಗ್ಯ ಕವಚದ ಸಮಸ್ಯೆ ಉಲ್ಬಣಗೊಂಡಿದೆ.

Advertisement

ಸಿಬಂದಿ ಕೊರತೆ, ಒತ್ತಡ
ರಾಜ್ಯದಲ್ಲಿ ಸುಮಾರು 711 ತುರ್ತು 108 ಆ್ಯಂಬುಲೆನ್ಸ್‌ ಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ಆ್ಯಂಬುಲೆನ್ಸ್‌ಗೆ ಒಂದು ಪಾಳಿಯಲ್ಲಿ ಓರ್ವ ಚಾಲಕ, ಇಬ್ಬರು ನರ್ಸ್‌ ಗಳು ಕಾರ್ಯನಿರ್ವಹಿ ಸುವ ನಿಯಮದಂತೆ ಒಟ್ಟು 3,554 ಸಿಬಂದಿ ಆವಶ್ಯಕತೆ ಇದೆ. ಎರಡು ಆ್ಯಂಬುಲೆನ್ಸ್‌ಗೆ ಓರ್ವ ಚಾಲಕ, ಓರ್ವ ನರ್ಸ್‌ ಹೆಚ್ಚುವರಿಯಾಗಿ ಇರಬೇಕು. ಆದರೆ ಇಲ್ಲಿ ಸುಮಾರು 3 ಸಾವಿರದಷ್ಟು ಸಿಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬಂದಿ ಕೊರತೆಯ ಮಧ್ಯೆ ಇರುವ ಸಿಬಂದಿ ಕಾರ್ಯ ದೊತ್ತಡದಿಂದ ನಲುಗಿದ್ದಾರೆ. 2015ರಲ್ಲಿ ವೇತನ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಬಂದಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ 671 ಮಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಆನಂತರ ಆಯುಕ್ತರ ಸೂಚನೆಯಂತೆ ತನಿಖೆ ನಡೆಸಿ 300 ಮಂದಿಯನ್ನಷ್ಟೇ ವಾಪಾಸು ಸೇರಿಸಿಕೊಳ್ಳಲಾಗಿದೆ.

ವರ್ಗಾವಣೆ ಶಿಕ್ಷೆಯೂ ಇದೆ!
ಆರೋಗ್ಯ ಕವಚ ವಾಹನ ಸರಿಯಿಲ್ಲ ಎಂದು ಸಮಸ್ಯೆ ತೋಡಿಕೊಂಡರೆ ಆಗುವುದಾದರೆ ಓಡಿಸು, ಇಲ್ಲದಿದ್ದರೆ ಕೆಲಸ ಬಿಡು ಎನ್ನುತ್ತಾರೆ. ಸಮಸ್ಯೆಯ ಕುರಿತು ಹೆಚ್ಚಿಗೇನಾದರೂ ಮಾತನಾಡಿದರೆ ಎಲ್ಲಿಗೋ ವರ್ಗಾವಣೆ ಮಾಡುತ್ತಾರೆ. ಇಷ್ಟೆಲ್ಲ ಸಮಸ್ಯೆಯ ಮಧ್ಯೆ ಒಂದಷ್ಟು ತಡವಾದರೆ ಚಾಲಕ ಮತ್ತು ಸಿಬಂದಿ ಬೈಗುಳವನ್ನೂ ಕೇಳಿಸಿಕೊಳ್ಳಬೇಕು ಎನ್ನುವುದು ಸಿಬಂದಿಯ ಅಳಲು.

ವೇತನವೂ ಇಲ್ಲ, ಗಾಡಿಯೂ ಸರಿಯಿಲ್ಲ 
ಒಂದೆಡೆ ಇರುವ ಆರೋಗ್ಯ ಕವಚ ವಾಹನಗಳು ಸುಸ್ಥಿತಿಯಲ್ಲಿ ಇಲ್ಲ. ಇನ್ನೊಂದೆಡೆ ಸಿಬಂದಿಗೆ ಸಮರ್ಪಕವಾಗಿ ವೇತನವೂ ಪಾವತಿಯಾಗುತ್ತಿಲ್ಲ. ಸಿಬಂದಿಗೆ ಕನಿಷ್ಠ ವೇತನ 18 ಸಾವಿರ ನೀಡಬೇಕೆಂದು ನಿಯಮವಿದ್ದರೂ, 10 ಸಾವಿರ ರೂ. ಮಾತ್ರ ನೀಡುತ್ತಿದ್ದಾರೆ. ಆದರೆ ಗುತ್ತಿಗೆ ಸಂಸ್ಥೆಯವರು 15 ಸಾವಿರ ರೂ. ನೀಡುತ್ತೇವೆ ಎಂದು ಸರಕಾರಕ್ಕೆ ತೋರಿಸುತ್ತಾರೆ. ಹಾಲಿ ಸಿಬಂದಿಯ ಕೊರತೆಯೂ ಇರುವುದರಿಂದ ಸಿಬಂದಿ ಯೋರ್ವ ಎರಡೂ ಪಾಳಿಯಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದಕ್ಕೆ ಹೆಚ್ಚುವರಿ ಯಾಗಿ ಯಾವ ಭತ್ತೆಯನ್ನೂ ನೀಡುತ್ತಿಲ್ಲ ಎನ್ನುವ ಆರೋಪವಿದೆ.

ಶೀಘ್ರ ಹೊಸ ಟೆಂಡರ್‌
108 ಆರೋಗ್ಯ ಕವಚ ವ್ಯವಸ್ಥೆಗೆ ಸಂಬಂಧಪಟ್ಟಂತೆ ಸಮಸ್ಯೆಗಳ ಕುರಿತು ಸರಕಾರದ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಹೊಸ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. 5 ವರ್ಷಕ್ಕಿಂತ ಹಳೆಯ 371 ಆರೋಗ್ಯ ಕವಚ ವಾಹನಗಳಿದ್ದು, ಅವುಗಳಿಗೆ ಪರ್ಯಾಯವಾಗಿ ಹೊಸ ವಾಹನಗಳನ್ನು ಖರೀದಿಸಲಾಗಿದೆ. ಎಲ್ಲ ವ್ಯವಸ್ಥೆಗಳೂ ಸರಿಯಾಗಲಿವೆ.
– ನಾರಾಯಣ್‌
ಉಪನಿರ್ದೇಶಕರು, ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ

Advertisement

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next