ನವದೆಹಲಿ: ತಮಿಳುನಾಡಿನ ತೂತ್ತುಕುಡಿಯಲ್ಲಿ ಶ್ರೀಲಂಕಾಕ್ಕೆ ಸೇರಿದ ದೋಣಿಯಿಂದ 100 ಕೆಜಿ ಹೆರಾಯ್ನ್ ನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಆದರೆ ಆದರ ಮೂಲ ಪಾಕಿಸ್ತಾನ ಎಂದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವೀಪರಾಷ್ಟ್ರದ ನಾಗರಿಕರು ಎಂದು ಹೇಳಲಾಗಿರುವ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ನ.17ರಿಂದ ಒಂಭತ್ತು ದಿನಗಳ ಕಾಲ ನಡೆದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು “ದ ಹಿಂದುಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಕರಾಚಿಯಿಂದ ಮಾದಕ ವಸ್ತುಗಳನ್ನು ತಂದು ಸಮುದ್ರ ಮಧ್ಯದಲ್ಲಿಯೇ ಅದನ್ನು ಲಂಕೆಯ ದೋಣಿಗೆ ವರ್ಗಾಯಿಸಲಾಗಿತ್ತು. ಆಸ್ಟ್ರೇಲಿಯಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಅದನ್ನು ಕಳುಹಿಸಿಕೊಡುವ ನಿಟ್ಟಿನಲ್ಲಿ ಅದನ್ನು ದೋಣಿಯಲ್ಲಿ ತರಲಾಗುತ್ತಿತ್ತು ಎಂದು ಆರಂಭಿಕ ವಿಚಾರಣೆ ವೇಳೆ ತಿಳಿದು ಬಂದಿದೆ.
99 ಪ್ಯಾಕೆಟ್ ಹೆರಾಯ್ನ್, 20 ಸಣ್ಣ ಪೊಟ್ಟಣಗಳಲ್ಲಿ ಸಿಂಥೆಟಿಕ್ ಡ್ರಗ್ಸ್, ಐದು ಎಂಎಂ ಪಿಸ್ತೂಲ್ ಮತ್ತು ತುರಾಯ ಸ್ಯಾಟಲೈಟ್ ಫೋನ್ ಅನ್ನು ಕರಾವಳಿ ತೀರ ರಕ್ಷಣಾ ಪಡೆಗಳು ವಶಪಡಿಸಿಕೊಂಡಿವೆ. ದೋಣಿಯನ್ನು ಲಂಕೆಯ ನೆಗೊಂಬೋ ನಗರದ ವ್ಯಕ್ತಿಗೆ ಸೇರಿದ್ದಾಗಿದೆ.
ಇದನ್ನೂ ಓದಿ:6 ತಿಂಗಳ ಬಳಿಕ ಅಮೇರಿಕಾದಲ್ಲಿ ಒಂದೇ ದಿನ 2,146 ಮಂದಿ ಕೋವಿಡ್ ಸೋಂಕಿಗೆ ಬಲಿ
ಸಂಶಯ ಬಾರದೆ ಇರಲಿ ಎಂದು ಮಾದಕ ವಸ್ತುಗಳನ್ನು ಇಂಧನ ಟ್ಯಾಂಕ್‌ನಲ್ಲಿ ಇರಿಸಲಾಗಿತ್ತು. ವಿಚಾರಣೆ ವೇಳೆ ಮಾದಕ ವಸ್ತುಗಳನ್ನು ಆಸೀಸ್, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಕಳುಹಿಸಲು ಕೊಂಡೊಯ್ಯಲಾಗುತ್ತಿತ್ತು ಎಂದು ಹೇಳಿದ್ದರೂ, ತಮಿಳುನಾಡಿನಲ್ಲಿ ಅದನ್ನು ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದರೇ ಎಂಬ ಬಗ್ಗೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಹಿಂದಿನ ಸಂದರ್ಭಗಳಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಮಾದಕ ವಸ್ತುಗಳ ಸಾಗಣೆ ಪತ್ತೆಹಚ್ಚಿದ್ದಾಗ ಉಗ್ರ ಸಂಘಟನೆಗಳಾದ ಲಷ್ಕರ್, ಹಿಜ್ಬುಲ್ ಕೈವಾಡ ಇದ್ದದ್ದು ದೃಢವಾಗಿತ್ತು.