ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 100 ಅಡಿ ದಾಟಿದೆ. ಕಳೆದ ಒಂದು ತಿಂಗಳಲ್ಲಿ ಕೊಡಗು ಸೇರಿದಂತೆ ವಿವಿಧ ಪ್ರದೇಶದಲ್ಲಿ ಮಳೆಯಾಗಿ ಜಲಾಶಯಕ್ಕೆ 8 ಅಡಿಗಳಷ್ಟು ನೀರು ಹರಿದುಬಂದಿದ್ದು, ಅಣೆಕಟ್ಟು ನೂರರ ಗಡಿ ತಲುಪಿದೆ. ಜಲಾಶಯದಲ್ಲಿ ನೀರು ಹೆಚ್ಚಳದಿಂದ ರೈತರಲ್ಲಿ ಸಂತಸ ಮೂಡಿದೆ. ಇದರ ಬೆನ್ನಲ್ಲೇ ಕೃಷಿ ಚಟುವಟಿಕೆಯೂ ಆರಂಭವಾಗಿದೆ.
ಮುಂಗಾರು ಹಂಗಾಮಿಗೆ ನೀರು ಸಿಗುವ ಆಶಾಭಾವನೆಯೂ ರೈತ ಸಮುದಾಯದಲ್ಲಿ ವ್ಯಕ್ತವಾಗಿದೆ. ಜೂ.7ರಂದು ಅಣೆಕಟ್ಟೆಯ ನೀರಿನ ಮಟ್ಟ 92.20 ಅಡಿ ದಾಖಲಾಗಿತ್ತು. ಅಂದು ಜಲಾಶಯಕ್ಕೆ 837 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, 415 ಕ್ಯೂಸೆಕ್ ನೀರನ್ನು ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿತ್ತು. ಆ ವೇಳೆ ಜಲಾಶಯದಲ್ಲಿ 17.291 ಟಿಎಂಸಿ ನೀರು ಸಂಗ್ರಹವಾಗಿತ್ತು. ಮಂಗಳವಾರ (ಜು.7) ಜಲಾಶಯದ ನೀರಿನ ಮಟ್ಟ 99.40 ಅಡಿ ಇದ್ದು, ಅಣೆಕಟ್ಟೆಗೆ 6324 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ, ಜಲಾಶಯದಿಂದ 449 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
19 ಅಡಿ ಹೆಚ್ಚುವರಿ ನೀರು ಸಂಗ್ರಹ: 22.345 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆ ಜಲಾಶಯದಲ್ಲಿ 81.55 ಅಡಿ ನೀರು ದಾಖಲಾಗಿತ್ತು. ಜಲಾಶಯಕ್ಕೆ 4651 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ, 348 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ 19 ಅಡಿಯಷ್ಟು ಹೆಚ್ಚುವರಿ ನೀರು ಸಂಗ್ರಹವಾಗಿದೆ.
ಕೃಷಿ ಕಾರ್ಯಕ್ಕೆ ಸಿದ್ಧತೆ: ಕೃಷ್ಣರಾಜಸಾಗರ ಜಲಾಶಯ ನೂರು ಅಡಿ ತಲುಪಿರುವುದರಿಂದ ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತರು ಅಗತ್ಯ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರಗಳನ್ನು ಖರೀದಿಸಿದ್ದಾರೆ. ಭೂಮಿಯನ್ನು ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಂಗಾರು ಹಂಗಾಮಿಗೆ ನೀರು ಸಿಗುವ ನಿರೀಕ್ಷೆಯೊಂದಿಗೆ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಕಾವೇರಿ ಜಲಾಶಯ ಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದೆ. ಇದರಿಂದ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಸ್ವಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ಪ್ರಸ್ತುತ ಜಲಾಶಯಕ್ಕೆ 6324 ಕ್ಯೂಸೆಕ್ ನೀರು ಹರಿದುಬರುತ್ತಿದೆ.
8972 ಕ್ಯೂಸೆಕ್ ಒಳಹರಿವು: ಜೂ.16ರಂದು ಜಲಾಶಯಕ್ಕೆ 1284 ಕ್ಯೂಸೆಕ್ ಒಳಹರಿವಿತ್ತು. ಜೂ.17ರಂದು 1877 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ, ಜೂ.18ರಂದು 3036ಕ್ಕೆ ಏರಿಕೆಯಾಗಿದೆ. ಜೂ.19ರಂದು 2980 ಕ್ಯೂಸೆಕ್ ಒಳಹರಿವು, ಜೂ.20ಕ್ಕೆ 6005 ಕ್ಯೂಸೆಕ್‌ಗೆ ಏರಿಕೆ ಕಂಡುಬಂದಿದೆ. ಜೂ.20ರಂದು 6159 ಕ್ಯೂಸೆಕ್ ಇದ್ದ ಒಳಹರಿವು ನಂತರದ ದಿನಗಳಲ್ಲಿ 5406 ಕ್ಯೂಸೆಕ್, 3842 ಕ್ಯೂಸೆಕ್, 2334 ಕ್ಯೂಸೆಕ್‌ಗೆ ಇಳಿಮುಖ ಕಂಡಿತ್ತು.
ಜೂ.24ರಿಂದ ಒಳಹರಿವಿನ ಪ್ರಮಾಣ 3381 ಕ್ಯೂಸೆಕ್‌ಗೆ ಏರಿಕೆಯಾಗಿ ಜೂ.30ರ ವೇಳೆಗೆ 1812 ಕ್ಯೂಸೆಕ್‌ಗೆ ಕುಸಿತ ಕಂಡಿತ್ತು. ಜೂ.5ರಂದು 3339 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ ಆ ದಿನ ಸಂಜೆ ವೇಳೆಗೆ 5791 ಕ್ಯೂಸೆಕ್‌ಗೆ ಏರಿಕೆಯಾಯಿತು. ಜೂ.7ರಂದು 6324 ಕ್ಯೂಸೆಕ್‌ಗೆ ಒಳಹರಿವು ದಾಖಲಾಗಿತ್ತು. ಪ್ರಸ್ತುತ ಬುಧವಾರ ಬೆಳಗ್ಗೆ 100.33 ಅಡಿ ಇತ್ತು. 8972 ಕ್ಯೂಸೆಕ್ ಒಳಹರಿವು, 458 ಹೊರ ಬಿಡಲಾಗುತ್ತಿದೆ. ಒಟ್ಟು ಜಲಾಶಯದಲ್ಲಿ 23 ಟಿಎಂಸಿ ನೀರು ಸಂಗ್ರಹವಾಗಿದೆ.