ಬೇತಮಂಗಲ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿ ತಾಲೂಕಿಗೆ 100 ಕೋಟಿ ರೂ. ಸಾಲ ನೀಡುವ ಗುರಿ ಹೊಂದಿರುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಗ್ರಾಮದ ಸಮೀಪದ ಸುಂದರಪಾಳ್ಯ ಗ್ರಾಮದಲ್ಲಿ ರಾಮಸಾಗರ, ವೆಂಗಸಂದ್ರ, ಎನ್.ಜಿ.ಹುಲ್ಕೂರು ಗ್ರಾಪಂ ವ್ಯಾಪ್ತಿಯ ರೈತರೊಂದಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ವಿತರಣೆ ಸಭೆ ನಡೆಸಿ ಮಾತನಾಡಿದ ಅವರು, ಸಮಾಜದ ಕಟ್ಟ-ಕಡೆಯ ರೈತನಿಗೂ ಡಿಸಿಸಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕವಾಗಿ ರೈತರಿಗೆ ಬಲ ತುಂಬುವ ಕಾರ್ಯ ಮಾಡಲಾಗುವುದು, ರೈತ ಉಳಿದರೆ ಒಂದು ದೇಶವೇ ಉಳಿದಂತೆ ಎಂದು ನುಡಿದರು.
ಸುಂದರಪಾಳ್ಯ ಸೊಸೈಟಿಯಿಂದ ಈಗಾಗಲೇ 3 ಕೋಟಿ ರೈತರ ಸಾಲ ಮನ್ನಾ ಆಗಿದೆ, ಸಾಲದ ಅಗತ್ಯ ಇರುವ ಪ್ರತಿಯೊಬ್ಬರಿಗೂ ಯಾವುದೇ ಲಂಚ ಇಲ್ಲದೆ, ಸಾಲವನ್ನು ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ಹೈನುಗಾರಿಕೆಗೆ 10 ಲಕ್ಷ ರೂ.: 5 ಎಕರೆ ಜಮೀನು ಹೊಂದಿರುವ ರೈತರು ಕುರಿ, ಕೋಳಿ, ಮೇಕೆ, ಹಂದಿ ಸಾಕಾಣಿಕೆಗೆ 10 ಲಕ್ಷ ರೂ. ಸಾಲ ನೀಡಲಾಗುವುದು, ಕಡಿಮೆ ಜಮೀನು ಇರುವ ರೈತರಿಗೂ ಬೆಳೆ ಸಾಲ ನೀಡುವುದಾಗಿ ತಿಳಿಸಿದರು.
ಸೊಸೈಟಿ ಸಿಬ್ಬಂದಿ ವಿರುದ್ಧ ಗರಂ: ರೈತರ ಜಮೀನು ಮಾಡ್‌ಗೆàಜ್ ಮಾಡಿಕೊಂಡು ವರ್ಷ ಕಳೆದರೂ ಸಾಲ ನೀಡದಿರುವ ಬಗ್ಗೆ ಏಕೆ ತಮ್ಮ ಗಮನಕ್ಕೆ ತಂದಿಲ್ಲ ಎಂದು ಸೊಸೈಟಿ ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರ ವಿರುದ್ಧ ಗರಂ ಅದರು. ಸಾಲ ಸಮಯಕ್ಕೆ ಪಾವತಿ ಮಾಡದವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಸಾಲ ಸದ್ಬಳಕೆ ಮಾಡಿಕೊಳ್ಳಿ: ಡಿಸಿಸಿ ಬ್ಯಾಂಕ್‌ನಿಂದ ಪಡೆದುಕೊಂಡಿರುವ ಮಹಿಳಾ ಸಂಘಗಳ ಸದಸ್ಯರು ಹಾಗೂ ರೈತರು ಸರಿಯಾದ ಸಮಯಕ್ಕೆ ಸಾಲ ಪಾವತಿ ಮಾಡುವ ಮೂಲಕ ಪುನಃ ಹೆಚ್ಚು ಸಾಲವನ್ನು ಪಡೆದುಕೊಳ್ಳಬೇಕೆಂದು ಶಾಸಕಿ ಡಾ. ಎಂ.ರೂಪಕಲಾ ಸಲಹೆ ನೀಡಿದರು. ಸೊಸೈಟಿಗಳಿಗೆ ಶಕ್ತಿ ತುಂಬಿದ: ಸುಂದರಪಾಳ್ಯ ಸೊಸೈಟಿ ಅಧ್ಯಕ್ಷ ಮುನಿಸ್ವಾಮಿ ಮಾತನಾಡಿ, ಸೊಸೈಟಿಗಳಿಂದ ಕೇವಲ ಅಕ್ಕಿ ನೀಡಲಾಗುತ್ತಿತ್ತು, ಬ್ಯಾಲಹಳ್ಳಿ ಗೋವಿಂದಗೌಡ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮೇಲೆ ರೈತರು, ಮಹಿಳೆಯರಿಗೆ ಸಾಲ ನೀಡಲಾಗಿದೆ ಎಂದು ತಿಳಿಸಿದರು.