Advertisement

ಸಕಲೇಶಪುರಕ್ಕೆ 100 ಕೋಟಿ ಅನುದಾನಕ್ಕೆ ಆಗ್ರಹ

04:49 PM Aug 09, 2021 | Team Udayavani |

ಹಾಸನ: ಸತತವಾಗಿ ಕಳೆದ 4 ವರ್ಷಗಳಿಂದ ಅತಿವೃಷ್ಟಿಯಿಂದ ಹಾನಿ ಸಂಭವಿಸುತ್ತಿರುವ ಸಕಲೇಶಪುರ ಮತ್ತು ಆಲೂರು ತಾಲೂಕಿಗೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ಪರಿಶೀಲಿಸಿ ಕನಿಷ್ಠ 100 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ, ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅವರು ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2018 ರಿಂದ ಈವರೆಗೆ ಪ್ರತಿ ವರ್ಷವೂ ಅತಿವೃಷ್ಟಿಯಿಂದ ಸಕಲೇಶಪುರ ಮತ್ತು ಆಲೂರು ತಾಲೂಕಿನಲ್ಲಿ ಹಾನಿ ಸಂಭವಿಸುತ್ತಲೇ ಇದೆ. ರಸ್ತೆ, ಸೇತುವೆಗಳು, ವಿದ್ಯುತ್‌ ಸಂಪರ್ಕ ಸೇರಿ ಮೂಲ ಸೌಲಭ್ಯಗಳ ಹಾನಿ ಜೊತೆಗೆ
ಬೆಳೆ ಹಾನಿಯೂ ಸಂಭವಿಸುತ್ತಿದೆ. ಆದರೆ, ಜೆಡಿಎಸ್‌ -ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಒಮ್ಮೆ 25 ಕೋಟಿ ರೂ. ಸಕಲೇಶಪುರ ಕ್ಷೇತ್ರಕ್ಕೆ ಪರಿಹಾರ ಬಿಡುಗಡೆ ಆಗಿದ್ದು ಬಿಟ್ಟರೆ, ಕಳೆದ ನಾಲ್ಕು ವರ್ಷಗಳಿಂದಲೂ ಪರಿಹಾರ ಕಾರ್ಯಗಳಿಗೆ ಸರ್ಕಾರದಿಂದ ಅನುದಾನ
ಬಿಡುಗಡೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯಾವ ವರ್ಷವೂ
ಅನುದಾನ ಇಲ್ಲ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಈ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರಕನ್ನಡ ಜಿಲ್ಲೆಯ ಅತಿವೃಷ್ಟಿ ಹಾನಿಯನ್ನುಖುದ್ದು ವೀಕ್ಷಣೆ ಮಾಡಿ 200ಕೋಟಿ ರೂ. ವಿಶೇಷ ಅನುದಾನ ಘೋಷಣೆ ಮಾಡಿದ್ದಾರೆ. ಆದರೆ ಹಾಸನ ಜಿಲ್ಲೆಯಲ್ಲಿ
2018 ರಲ್ಲಿ ಅತಿವೃಷ್ಟಿಯಿಂದ321ಕೋಟಿ ರೂ. ಹಾನಿ ಸಂಭವಿಸಿದ್ದರೆ, 2019 ರಲ್ಲಿ 178 ಕೋಟಿ ರೂ., 2020 ರಲ್ಲಿ 160 ಕೋಟಿ ರೂ., ಈ ವರ್ಷ ಇದುವರೆಗೆ 78 ಕೋಟಿ ರೂ. ಅತಿವೃಷ್ಟಿಯಿಂದ ಹಾನಿಯಾಗಿದೆ ಎಂದು ಹಾಸನ ಜಿಲ್ಲಾಡಳಿತ ಅಂದಾಜು ಮಾಡಿದೆ. ಆದರೆ
ಯಾವ ವರ್ಷವೂ ಅನುದಾನ ಬಿಡುಗಡೆ ಆಗಿಲ್ಲ ಎಂದು ದೂರಿದರು.

ಕೆರೆ ದುರಸ್ತಿ ಇಲ್ಲ: ತಾಲೂಕು ಅಗರಸರ ಹಟ್ಟಿ ಕೆರೆ ಒಡೆದು 3 ವರ್ಷಗಳಾದರೂ ದುರಸ್ತಿಯಾಗಿಲ್ಲ. ಸಕಲೇಶಪುರ ತಾಲೂಕು ಬೈಕೆರೆಯಲ್ಲಿ 4 ಹಸುಗಳು ಸತ್ತಿವೆ. ಈ ವರ್ಷ ತಾಲೂಕಿನಲ್ಲಿ 39 ಸೇತುವೆಗಳಿಗೆ ಹಾನಿಯಾಗಿದ್ದು, ದುರಸ್ತಿಯಾಗಬೇಕಾಗಿದೆ. ವಿದ್ಯುತ್‌ ಪೂರೈಕೆ ಸುಧಾರಣೆಗೆ ಕನಿಷ್ಠ 5000 ಕಂಬಗಳ ಅಗತ್ಯವಿದೆ. ಈ ಎಲ್ಲ ಪರಿಹಾರ ಕಾರ್ಯಗಳಿಗೆ ಕನಿಷ್ಠ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಅಂತೂ ಇಂತೂ ಮುಗಿದೇ ಹೋಯಿತು ಒಲಿಂಪಿಕ್ಸ್ 2020 !

Advertisement

ಅನ್ಯಾಯ ಗಮನಿಸಲಿ: ಸಕಲೇಶಪುರ ವಿಧಾನಸಭಾ ಕ್ಷೇತ್ರದ ವಿಸ್ತೀರ್ಣ 169 ಚದುರ ಕಿ.ಮೀ.ಇದೆ. ಸಕಲೇಶಪುರ, ಆಲೂರು ಮತ್ತು ಹಾಸನ ತಾಲೂಕಿನ ಒಂದು ಹೋಬಳಿ ಸೇರಿಕೊಂಡಿದೆ. ಮಲೆನಾಡಿನ ಜೊತೆಗೆ ಅತಿವೃಷ್ಟಿ ಹಾನಿ ಸಂಭವಿಸುತ್ತಲೇ ಇರುತ್ತದೆ. ಇಂತಹ ಕ್ಷೇತ್ರಕ್ಕೆ ಜನಸಂಖ್ಯೆ ಆಧರಿಸಿ ಅನುದಾನ ನೀಡುವುದು ಸರಿಯಲ್ಲ. ಹಾಗಾಗಿಯೇ ಜನರು ಸಕಲೇಶಪುರ ತಾಲೂಕನ್ನೇ ಪ್ರತ್ಯೇಕ ಕ್ಷೇತ್ರ ಮಾಡಲಿ
ಎಂದು ಕೇಳುತ್ತಿದ್ದಾರೆ. ಈ ಹಿಂದೆ ಕ್ಷೇತ್ರ ಪುನರ್‌ ವಿಂಗಡಣೆ ಸಂದರ್ಭದಲ್ಲಿ ತಪ್ಪಾಗಿದೆ. ಇದನ್ನು ನಾನೂ ಒಪ್ಪುತ್ತೇನೆ. ಆದರೆ ಇನ್ನೂ15 ವರ್ಷ ಕ್ಷೇತ್ರಗಳ ಪುನರ್‌ ವಿಂಗಡಣೆಗೆ ಅವಕಾಶವಿಲ್ಲ. ಆದರೆ, ಸಕಲೇಶಪುರ ತಾಲೂಕಿಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರ
ಗಮನಿಸಲಿ ಎಂದರು.

ಲಸಿಕೆ ಪೂರೈಸಲಿ: ಜಿಲ್ಲೆಗೆ ಕೋವಿಡ್‌ ಲಸಿಕೆ ಪೂರೈಕೆಯಾಗುತ್ತಿಲ್ಲ. ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ಹೆಚ್ಚು ಲಸಿಕೆ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಎಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ನಿರ್ದೇಶಕ ಬಿದರಿಕೆರೆ ಜಯರಾಂ,ಹಾಸನ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಸ್‌ .ದ್ಯಾವೇಗೌಡ, ಜೆಡಿಎಸ್‌ ಮುಖಂಡರಾದ ಕಾರ್ಲೆ ಇಂದ್ರೇಶ್‌, ಹೊಂಗೆರೆ ರಘು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರೀತಂ ಜೆ.ಗೌಡರಿಗೆ
ಆಗ ಎಷ್ಟು ವರ್ಷ?
ಎಸ್‌.ಆರ್‌.ಬೊಮ್ಮಾಯಿ ಸರ್ಕಾರ ಉರುಳಿಸಿದವರು ದೇವೇಗೌಡರು ಎಂದು ಶಾಸಕ ಪ್ರೀತಂ ಜೆ.ಗೌಡ ಆರೋಪಿಸಿದ್ದಾರೆ. 1988 ರಲ್ಲಿ ನಾನು ಶಾಸಕನಾಗಿದ್ದೆ. ನನಗೇ ಅಂದಿನ ರಾಜಕಾರಣ ಮರೆತು ಹೋಗಿದೆ. ಆಗ ಪ್ರೀತಂ ಜೆ.ಗೌಡ ಅವರಿಗೆ ಎಷ್ಟು ವರ್ಷ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ದೇವೇಗೌಡರ ಸಚಿವ ಸಂಪುಟದಲ್ಲಿ ಎಸ್‌.ಆರ್‌.ಬೊಮ್ಮಾಯಿ ಅವರು ಮಾನವ ಸಂಪನ್ಮೂಲ ಸಚಿವರಾಗಿದ್ದರು. ಅದು ಪ್ರೀತಂಗೌಡಗೆ ಗೊತ್ತಿಲ್ಲವೇ ಎಂದು ಶಾಸಕ ಎಚ್‌. ಕೆ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಎಸ್‌ಡಿಆರ್‌ಎಫ್, ಎನ್‌ಡಿಆರ್‌ ಎಫ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಒಂದುಕಿ.ಮೀ. ರಸ್ತೆ ದುರಸ್ತಿಗೆ 60 ಸಾವಿರ ರೂ. ಮಂಜೂರಾಗುತ್ತದೆ. ಇನ್ನು ಬೆಳೆ ಪರಿಹಾರ ಎಕರೆಗೆ ಮೊತ್ತ ಒಂದೆರೆಡು ಸಾವಿರ ರೂ. ಮಾತ್ರ ಮಂಜೂರಾಗುತ್ತದೆ. ದೇಶದಲ್ಲಿ ಇನ್ನೂ ರೈತ ವಿರೋಧಿ ಕಾನೂನುಗಳೇ ಇವೆ.
-ಎಚ್‌.ಕೆ.ಕುಮಾರಸ್ವಾಮಿ, ಜೆಡಿಎಸ್‌
ರಾಜ್ಯಾಧ್ಯಕ್ಷ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next