ಬೆಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಎಫ್‌ಟಿಎಸ್‌ಸಿ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸಿದೆ. ಮಂಜುನಾಥ್ ರಾವ್ ಶಿಕ್ಷೆಗೆ ಒಳಗಾದ ಅಪರಾಧಿ.
ಮೆಡಿಕಲ್ ಗ್ಯಾಸ್ ಸಿಲಿಂಡರ್ ವ್ಯಾಪಾರ ಮಾಡಿಕೊಂಡಿದ್ದ ಮಂಜುನಾಥ್, ಅದರೊಂದಿಗೆ ಅದೇ ಅಂಗಡಿಯಲ್ಲಿ ದೇವರ ಫೋಟೋಗಳನ್ನು ಇಟ್ಟುಕೊಂಡು ಅಂಗಡಿಗೆ ಹೆಂಗಸರನ್ನು ಮತ್ತು ಮಕ್ಕಳನ್ನು ಕರೆಸಿಕೊಂಡು ಧೂಪ ಸುತ್ತಿ ಪ್ರಸಾದ ಕೊಟ್ಟು ಕಳುಹಿಸುವುದು ಮಾಡುತ್ತಿದ್ದ. 2021 ರ ಜುಲೈ 7ರ ಬೆಳಗ್ಗೆ 11 ಗಂಟೆಗೆ ಲಲಿತಮ್ಮ ಎಂಬುವರು ತಮ್ಮ ಮಗಳೊಂದಿಗೆ ಸಿಂಗ್ರಸಂದ್ರದ ಆರೋಪಿಯ ಅಂಗಡಿಗೆ ಹೋಗಿದ್ದು, ಈ ವೇಳೆ ಆರೋಪಿ ನಿಮಗೆ ನಾಗದೋಷವಿದೆ. ಪರಿಹಾರ ಮಾಡಲು ಪೂಜಾ ಸಾಮಗ್ರಿ ತನ್ನಿ ಎಂದು ಹೊರಗೆ ಕಳುಹಿಸಿದ್ದು, ಈ ವೇಳೆ ಒಬ್ಬಳೇ ಇದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ.
ಇದನ್ನೂ ಓದಿ:ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ: ಸಿಎಂ ಬೊಮ್ಮಾಯಿ
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಎಸ್.ಸಂದೀಪ್ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು.
Related Articles
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಷ್ರತ್ ಜಹಾನ್ ಅಪರಾಧಿಗೆ 10 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಬಾಲಕಿಯ ಪರ ಸರ್ಕಾರಿ ಅಭಿಯೋಜಕರಾದ ಗೀತಾ ಗೊರವರ ವಾದ ಮಂಡಿಸಿದ್ದರು.