ಬ್ಯೂನೋಸ್ ಆ್ಯರಿಸ್ (ಅರ್ಜೆಂಟೀನಾ): ನಿಯತ್ತಿಗೆ ಮತ್ತೂಂದು ಹೆಸರು ನಾಯಿ. ಆದರೆ ಒಂದು ವೇಳೆ ಮಾಲೀಕ ಸತ್ತರೆ, ಆಮೇಲೂ ನಿಯತ್ತು ಇರುತ್ತದಾ? ಎಂಬುದು ಕುತೂಹಲ. ಇಲ್ಲೊಂದು ಪ್ರಕರಣದಲ್ಲಿ ಶ್ವಾನದ ನಿಯತ್ತು ಕಂಡು ಅಚ್ಚರಿ ಪಡುವಂತಾಗಿದೆ. ಅದು ಅಂತಿಥದ್ದಲ್ಲ.. ಬರೋಬ್ಬರಿ 10 ವರ್ಷಗಳ ನಿಯತ್ತು.
ಮಾಲೀಕ ಮೃತಪಟ್ಟು 10 ವರ್ಷ ಕಳೆದರೂ, ಅವರ ನಾಯಿ ಮಾತ್ರ ಸಮಾಧಿ ಪಕ್ಕದಲ್ಲೇ ಇದೆ. ಆ ಸ್ಥಳವನ್ನು ಬಿಟ್ಟು ಆ ನಾಯಿ ಎಲ್ಲೂ ಹೋಗಿಲ್ಲ. ಪರಿಣಾಮ ಸ್ಮಶಾನ ನೋಡಿಕೊಳ್ಳುವವರೇ ನಾಯಿಯನ್ನೂ ನೋಡಿಕೊಳ್ಳುತ್ತಿದ್ದಾರೆ.
ಮಿಗುಲ್ ಗುಜ್‌ಮನ್ ಎಂಬುವವರು ತಮ್ಮ ಪುತ್ರ ಡಾಮೈನ್ ಪ್ರೀತಿಗಾಗಿ ಕ್ಯಾಪ್ಟನ್ ಹೆಸರಿನ ನಾಯಿಯನ್ನು ಮನೆಗೆ ತಂದಿದ್ದರು. 2006ರಲ್ಲಿ ಅವರು ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ಮನೆಯಿಂದ 45 ಕಿ.ಮೀ. ದೂರದ ಕೊಬೋìಡಾ ಎಂಬ ಪ್ರದೇಶದಲ್ಲಿ ನಡೆಸಲಾಗಿತ್ತು.
ಅಂತ್ಯಕ್ರಿಯೆ ಬಳಿಕ ಮನೆಯಿಂದ ಕ್ಯಾಪ್ಟನ್ ಏಕಾಏಕಿ ನಾಪತ್ತೆಯಾಗಿದೆ. ಬಳಿಕ ಮನೆಯವರು ಹುಡುಕಿದಾಗ ಅದು, ಮಿಗುಲ್ ಅವರ ಸಮಾಧಿ ಪಕ್ಕದಲ್ಲಿ ಕಂಡಿದೆ. ನಾಯಿಯನ್ನು ವಾಪಸ್ ಕರೆದುಕೊಂಡು ಹೋಗಲು ಮಿಗುಲ್ ಪತ್ನಿ ಶತಾಯಗತಾಯ ಯತ್ನಿಸಿದ್ದಾರೆ. ಆದರೆ, ಅದು ಮಿಗುಲ್ ಸಮಾಧಿ ಬಿಟ್ಟು ಜಪ್ಪಯ್ಯ ಎಂದರೂ ಕದಲಲಿಲ್ಲ.
ಒಂದೆರಡು ಬಾರಿ ಒತ್ತಾಯಪೂರ್ವಕವಾಗಿ ನಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದರೂ ಮತ್ತೆ ಅದೇ ಸ್ಮಶಾನಕ್ಕೆ ಹೋಗಿ, ಸಮಾಧಿ ಪಕ್ಕದಲ್ಲಿ ಕೂತಿದೆ. ನಾಯಿಯ ನಿಯತ್ತು ನೋಡಿ, ಸ್ಮಶಾನ ಸಿಬ್ಬಂದಿ ಅದಕ್ಕೆ ಆಹಾರ ಹಾಕಿದ್ದಾರೆ. ದಿನದಲ್ಲಿ ಒಂದೆರೆಡು ಬಾರಿ ನಾಯಿ ಸ್ಮಶಾನದಲ್ಲಿ ತಿರುಗಿದರೂ, ಮಾಲೀಕನ ಸಮಾಧಿ ಬಿಟ್ಟು ಹೋಗುವುದಿಲ್ಲವಂತೆ.
ರಾತ್ರಿ ಸಮಾಧಿ ಮೇಲೆ ಹತ್ತಿ ಅದರ ಮೇಲೆಯೇ ಮಲಗುತ್ತದಂತೆ. ಇದೀಗ ನಾಯಿಗೆ 15 ವರ್ಷವಾಗಿದ್ದು, ಕಣ್ಣು ಕಾಣಿಸುತ್ತಿಲ್ಲ. ಆದರೂ ಮಿಗುಲ್ ಸಮಾಧಿ ಪಕ್ಕವೇ ಅದು ಕೂತಿದೆಯಂತೆ!
ಹಚಿಕೋ -ದಿ ಡಾಗ್ ಟೇಲ್: ವಿಶೇಷವೆಂದರೆ ಇಂಥದ್ದೇ ಒಂದು ನಾಯಿಯ ಕಥೆ ಬಗ್ಗೆ ಹಾಲಿವುಡ್ ಸಿನಿಮಾವೇ ಬಂದಿತ್ತು. ಅದರ ಹೆಸರು ಹಚಿಕೋ-ದಿ ಡಾಗ್ ಟೇಲ್ ಅಂತ. ಇಲ್ಲೂ ಅಷ್ಟೇ ಒಂದು ಅನಾಥ ನಾಯಿ ಒಬ್ಬ ಮಧ್ಯಮವರ್ಗದ ವ್ಯಕ್ತಿಯ ಕೈಗೆ ಸಿಕ್ಕಿ, ಆತನ ಆರೈಕೆಯಲ್ಲೇ ಬೆಳೆದ ಕಥೆ ಅದು. ಆ ನಾಯಿ ದಿನವೂ ಆತ ಓಡಾಡುತ್ತಿದ್ದ ರೈಲಿನಲ್ಲೇ ಸಿಕ್ಕು, ಆತ ಪ್ರತಿ ದಿನ ಕೆಲಸ ಮುಗಿಸಿಕೊಂಡು ವಾಪಸ್ ಬರುವಾಗ ಅದೇ ರೈಲ್ವೆ ಸ್ಟೇಷನ್ನಿನ ಮುಂದೆ ಕುಳಿತು ಕಾಯುತ್ತಿತ್ತು. ಆತ ಬಂದ ಮೇಲೆ ಆತನ ಜತೆಯಲ್ಲೇ ಮನೆಗೆ ಹೋಗುತ್ತಿತ್ತು. ಒಂದು ದಿನ ಆತ ಕಚೇರಿಯಲ್ಲೇ ಮೃತಪಟ್ಟು ರೈಲಿನಲ್ಲಿ ಬರಲೇ ಇಲ್ಲ. ಆದರೆ, ಅಲ್ಲೇ ಕಾದ ಆ ನಾಯಿ, ಕಡೆಗೆ ಒಂದು ದಿನ ಅಲ್ಲೇ ಸತ್ತು ಹೋಯಿತು.