Advertisement
ಮೊದಲ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯವದು. ಡರ್ಬನ್‌ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖೀಯಾಗಿದ್ದವು. ಇನ್ನೇನು ಭಾರತದ ಇನ್ನಿಂಗ್ಸ್ ಮುಗಿಯುತ್ತ ಬಂದಿತ್ತು. ಆಗ ಯುವರಾಜ್ ಶಾಟ್ ಬಗ್ಗೆ ಆ್ಯಂಡ್ರೂ ಫ್ಲಿಂಟಾಫ್ ಏನೋ ವ್ಯಂಗ್ಯವಾಡಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಪಾಪ, ಇದಕ್ಕೆ ಬಲಿಪಶುವಾದವರು ಮಾತ್ರ ಸ್ಟುವರ್ಟ್ ಬ್ರಾಡ್! ಬ್ರಾಡ್ ಅವರ ಮುಂದಿನ ಓವರಿನಲ್ಲೇ (ಪಂದ್ಯದ 19ನೇ ಓವರ್) ಯುವರಾಜ್ ಆವೇಶ ಬಂದವರಂತೆ ಬ್ಯಾಟ್ ಬೀಸುತ್ತ ಒಂದರ ಹಿಂದೊಂದರಂತೆ 6 ಸಿಕ್ಸರ್ ಬಾರಿಸಿ, ಅಣಕಿಸಿದ ಫ್ಲಿಂಟಾಫ್ಗೆ ಬ್ಯಾಟಿನಿಂದಲೇ ಬೆಂಡೆತ್ತಿದ್ದರು!
ದಶಕದ ಹಿಂದಿನ ಆ “ಮ್ಯಾಜಿಕಲ್ ನೈಟ್’ ಅನ್ನು ಯುವರಾಜ್ ಸಿಂಗ್ ಮೆಲುಕು ಹಾಕಿದ್ದಾರೆ. “ಆಗ ಓವರಿಗೆ 6 ಸಿಕ್ಸರ್ ಬಾರಿಸುವ ಯಾವ ಯೋಜನೆಯೂ ನನ್ನ ತಲೆಯಲ್ಲಿ ಸುಳಿದಿರಲಿಲ್ಲ. ಯಾವತ್ತೂ ಚೆಂಡನ್ನು ಗಾಳಿಯಲ್ಲಿ ಹೊಡೆಯಬೇಡ ಎಂದು ತಂದೆ ನನಗೆ ಸೂಚನೆ ನೀಡುತ್ತಿದ್ದರು. ಗ್ರೌಂಡ್ ಶಾಟ್‌ಗಳತ್ತ ಹೆಚ್ಚಿನ ಗಮನ ನೀಡಲು ಹೇಳುತ್ತಿದ್ದರು. ಹೀಗಾಗಿ 6 ಸಿಕ್ಸರ್‌ಗಳ ಬಗ್ಗೆ ನಾನು ಯೋಚಿಸಿಯೇ ಇರಲಿಲ್ಲ. ಆದರೆ ನಾನು ಅದೃಷ್ಟಶಾಲಿ. ಎಲ್ಲ ಎಸೆತಗಳೂ ನನ್ನ “ಏರಿಯಾ’ದತ್ತಲೇ ಬಂದವು, ಬ್ಯಾಟಿಗೂ ಸರಿಯಾಗಿ “ಕನೆಕ್ಟ್’ ಆದವು. ಹೀಗಾಗಿ ಇದು ಸಾಧ್ಯವಾಯಿತು…’ ಎಂದಿದ್ದಾರೆ ಯುವರಾಜ್ ಸಿಂಗ್. ಅಂದಹಾಗೆ, ಯುವರಾಜ್ ಸಿಂಗ್ ಅವರ ಈ ಸಿಕ್ಸರ್ ಸಿಡಿತವನ್ನು ಇನ್ನೊಂದು ತುದಿಯಲ್ಲಿ ನಿಂತು ಕಣ್ತುಂಬಿಸಿ ಕೊಂಡವರು ಬೇರೆ ಯಾರೂ ಅಲ್ಲ, ನಾಯಕ ಮಹೇಂದ್ರ ಸಿಂಗ್ ಧೋನಿ. “ಎಷ್ಟು ಸಾಧ್ಯವೋ ಅಷ್ಟು ಬಿರುಸಿನಿಂದ ಬಾರಿಸು’ ಎಂದು ಧೋನಿ ಹುರಿದುಂಬಿಸಿದ್ದನ್ನು ಯುವಿ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
Related Articles
Advertisement