ಜೇವರ್ಗಿ: ತಾಲೂಕಿನ ಬಣಮಿಗಿ ಗ್ರಾಮದ ಹೊರವಲಯದ ಹಳ್ಳದಲ್ಲಿ ನೀರು ಕುಡಿದ 10 ಕುರಿಗಳು ಮೃತಪಟ್ಟ ಘಟನೆ ಬುಧವಾರ ಮದ್ಯಾಹ್ನ ನಡೆದಿದೆ.
ಬಣಮಿಗಿ ಗ್ರಾಮದ ಚಂದ್ರಶ್ಯಾ ಗೋಪಾಲ ಖ್ಯಾಡ್ ಎಂಬುವರಿಗೆ ಸೇರಿದ ಕುರಿಗಳಾಗಿದ್ದು, 10 ಕುರಿಗಳ ಆಕಸ್ಮಿಕ ಸಾವಿನಿಂದ ಕಂಗಾಲಾಗಿದ್ದಾರೆ.
ಎಂದಿನಂತೆ ಚಂದ್ರಶ್ಯಾ ತಮಗೆ ಸೇರಿದ 40 ಕುರಿಗಳು ಮೇಯಿಸಲು ಬಣಮಿಗಿ ಗ್ರಾಮದ ಹೊರವಲಯಕ್ಕೆ ತೆರಳಿದ್ದಾರೆ. ಹಂದನೂರ ರಸ್ತೆಗೆ ಅಡ್ಡಲಾಗಿ ಹರಿಯುವ ಹಳ್ಳ ದಲ್ಲಿ 15 ಹೆಚ್ಚು ಕುರಿಗಳು ನೀರು ಕುಡಿದಿವೆ. ನೀರು ಕುಡಿದ ಕೆಲವೇ ಕ್ಷಣಗಳಲ್ಲಿ 10 ಕುರಿಗಳು ರಸ್ತೆ ಮೇಲೆ ಒದ್ದಾಡಿ ಮೃತಪಟ್ಟಿವೆ.
ಘಟನೆ ಬಗ್ಗೆ ಗ್ರಾಮಸ್ಥರಿಗೆ ವಿಷಯ ತಿಳಿದ ನಂತರ ಪಶು ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಕೂಡಿ ಪಶು ವೈದ್ಯ ಡಾ| ಶರಣಗೌಡ ಪಾಟೀಲ ಉಳಿದ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ವಕೀಲ ಗಿರಿಜಾ ಶಂಕರ ಸಂಕಾ ತಿಳಿಸಿದ್ದಾರೆ. ‘
ಘಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಯುವ ಮುಖಂಡ ಗಿರೀಶ ಪಾಟೀಲ ರದ್ದೇವಾಡಗಿ ಪಶು ಇಲಾಖೆ ಸಹಾಯಕ ನಿರ್ದೇಶಕರ ಜತೆ ಮಾತನಾಡಿ, ಹಳ್ಳದ ನೀರು ಕುಡಿದು ಅಸ್ವಸ್ಥ ಗೊಂಡು ಮೃತಪಟ್ಟ ಕುರಿಗಳ ಪಂಚನಾಮೆ ನಡೆಸಿ ಅದರ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ನೊಂದ ಕುರಿಗಾಯಿ ಚಂದ್ರಶ್ಯಾ ಅವರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕುರಿಗಳು ಹಳ್ಳದ ನೀರು ಕುಡಿದು ಅಸ್ವಸ್ಥವಾದ ಸುದ್ದಿ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಲಾಗಿದೆ. ವಿಷಪೂರಿತ ನೀರು ಕುಡಿದು ಕುರಿಗಳು ಮೃತಪಟ್ಟಿರುವ ಶಂಕೆ ಇದ್ದು, ಹಳ್ಳದ ನೀರನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ.
-ಡಾ| ಶರಣಗೌಡ ಪಾಟೀಲ, ಪಶು ವೈದ್ಯ, ಕೂಡಿ