Advertisement

ಉಡುಪಿ ಜಿಲ್ಲೆ: 10 ಕಡೆ “ನೆಟ್ವರ್ಕ್‌ ಶ್ಯಾಡೋ ಬೂತ್‌’

12:37 AM Apr 09, 2023 | Team Udayavani |

ಕುಂದಾಪುರ: ಉಡುಪಿ ಜಿಲ್ಲೆಯು ಮತ್ತೂಂದು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಎಲ್ಲ ಮತಗಟ್ಟೆಗಳಿಗೂ ನೆಟ್ವರ್ಕ್‌ ಸಂಪರ್ಕ ವ್ಯವಸ್ಥೆಯಿದೆ. ಆದರೆ 2 ಕ್ಷೇತ್ರಗಳ 10 ಮತಗಟ್ಟೆಗಳನ್ನು “ನೆಟ್ವರ್ಕ್‌ ಶ್ಯಾಡೋ ಬೂತ್‌’ (ಯಾವುದೇ ನೆಟ್ವರ್ಕ್‌ ಸೌಲಭ್ಯವಿಲ್ಲದ ಮತಗಟ್ಟೆ) ಎಂದು ಗುರುತಿಸಲಾಗಿದೆ. ಇಲ್ಲಿ ಮತದಾನದ ದಿನ ಸಂವಹನಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಕಾರ್ಯ ನಿರತವಾಗಿದೆ.

Advertisement

ಬೈಂದೂರಲ್ಲಿ 246, ಕುಂದಾಪುರದಲ್ಲಿ 222, ಉಡುಪಿಯಲ್ಲಿ 226, ಕಾಪುವಿನಲ್ಲಿ 208 ಹಾಗೂ ಕಾರ್ಕಳದಲ್ಲಿ 209 ಸೇರಿ ಒಟ್ಟು ಉಡುಪಿ ಜಿಲ್ಲೆಯಲ್ಲಿ 1,111 ಮತಗಟ್ಟೆಗಳಿವೆ. ಇದರಲ್ಲಿ ಉಡುಪಿ, ಕಾಪು, ಕಾರ್ಕಳದಲ್ಲಿರುವ ಎಲ್ಲ ಮತಗಟ್ಟೆಗಳಿಗೆ ಕನಿಷ್ಠ ಒಂದಾದರೂ ನೆಟ್ವರ್ಕ್‌ ಸಂಪರ್ಕ ವ್ಯವಸ್ಥೆಯಿದೆ. ಆದರೆ ಬೈಂದೂರಿನಲ್ಲಿ 8 ಹಾಗೂ ಕುಂದಾಪುರದ 2 ಮತಗಟ್ಟೆಗಳಲ್ಲಿ ಯಾವುದೇ ನೆಟ್ವರ್ಕ್‌ ವ್ಯವಸ್ಥೆ ಇಲ್ಲ.

ಯಾವೆಲ್ಲ ಮತಗಟ್ಟೆ?
ಬೈಂದೂರಿನ ಗಂಗನಾಡು ಶಾಲೆ, ಕಾಲ್ತೊಡು ಬ್ಯಾಟಿಯಾನಿ ಶಾಲೆ, ಬ್ಯಾಟಿಯಾನಿ ಶಾಲೆ ಪೂರ್ವ ಭಾಗ, ಹೊಸೂರು ಶಾಲೆ, ಹೊಸೂರು ಕದಳಿ ಶಾಲೆ, ಹಳ್ಳಿಹೊಳೆಯ ಇರಿಗೆ ಶಾಲೆ, ಕಮಲಶಿಲೆಯ ಯಳಬೇರು ಶಾಲೆ, ಬೆಳ್ಳಾಲದ ನಂದ್ರೋಳಿ ಶಾಲೆ, ಕುಂದಾಪುರ ಕ್ಷೇತ್ರದ ಹಾಲಾಡಿಯ ಕಾಸಾಡಿ ಶಾಲೆ, ಅಮಾಸೆಬೈಲಿನ ನಡಂಬೂರು ಶಾಲೆಯಲ್ಲಿರುವ ಮತಗಟ್ಟೆಗಳಲ್ಲಿ ನೆಟ್ವರ್ಕ್‌ ಸೌಲಭ್ಯವಿಲ್ಲ. ಕಾರ್ಕಳದಲ್ಲೂ ನಾಡ್ಪಾಲು ನೆಲ್ಲಿಕಟ್ಟು ಶಾಲೆ, ಕಾಸನಮಕ್ಕಿ ಶಾಲೆಯ ಮತಗಟ್ಟೆಗಳಲ್ಲಿ ನೆಟ್ವರ್ಕ್‌ ಶ್ಯಾಡೋ ಪ್ರದೇಶವೆಂದು ಗುರುತಿಸಲಾಗಿದ್ದು, ಬಳಿಕ ಇಲ್ಲಿಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಒಂದು ಕಂಪೆನಿಯ ನೆಟ್ವರ್ಕ್‌ ಮಾತ್ರ ವಿರುವ 15-16 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಲ್ಲಿಯೂ ತುರ್ತು ಅನಿವಾರ್ಯ ಎದುರಾದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.

ನೆಟ್ವರ್ಕ್‌ ಇಲ್ಲದ ಮತ ಗಟ್ಟೆಗಳನ್ನು ಪರಿಶೀಲಿಸಿದ್ದು, ಇನ್ನೂ ಅವುಗಳನ್ನು ಸಂಪೂರ್ಣ ನೆಟ್ವರ್ಕ್‌ ರಹಿತ ಪ್ರದೇಶವೆಂದು ತೀರ್ಮಾನಿಸಿಲ್ಲ. ಅಲ್ಲಿಗೆ ಯಾವುದಾದರೂ ನೆಟ್ವರ್ಕ್‌ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಕೊನೆಗೂ ಆಗದಿದ್ದರೆ ಮತದಾನದ ದಿನ ಸಂವಹನ ನಡೆಸಲು ಬಿಸ್ಸೆನ್ನೆಲ್‌ ಎಫ್‌ಟಿಟಿಎಚ್‌ ಸಂಪರ್ಕ, ಪೊಲೀಸ್‌ ವಯರ್‌ಲೆಸ್‌ ಫೋನ್‌ ವ್ಯವಸ್ಥೆಯನ್ನು ಬಳಸಿ ಯಾವುದೇ ತೊಂದರೆ ಯಾಗದಂತೆ ನಿರ್ವಹಿಸ ಲಾಗುವುದು.
– ಕೂರ್ಮಾರಾವ್‌, ಜಿಲ್ಲಾ ಚುನಾವಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next