ವಾಡಿ: ಕಳೆದ 20 ವರ್ಷಗಳಿಂದ ಪುರಸಭೆ ಆಡಳಿತ ಸಾರ್ವಜನಿಕರಿಗೆ ಗ್ರಂಥಾಲಯ ಸೌಲಭ್ಯ ಒದಗಿಸದೇ ಸರ್ಕಾರಕ್ಕೆ ನಿರಂತರವಾಗಿ ವಾರ್ಷಿಕ 10 ಲಕ್ಷ ರೂ. ತೆರಿಗೆ ಪಾವತಿಸುತ್ತಿದೆ. ಪ್ರಸಕ್ತ ಸಾಲಿನಲ್ಲೂ ಹತ್ತು ಲಕ್ಷ ರೂ. ತೆರಿಗೆ ಪಾವತಿಗಾಗಿ ಪುರಸಭೆ ನಿಧಿಯಲ್ಲಿ ಹಣ ತೆಗೆದಿರಿಸಲಾಗಿದೆ.
ಬುಧವಾರ ಪುರಸಭೆಯಲ್ಲಿ ನಡೆದ 2022/ 23ನೇ ಸಾಲಿನ ಪುರಸಭೆ ಅನುದಾನ 283.15 ಲಕ್ಷ ರೂ., ಎಸ್‌ಎಫ್‌ಸಿ ಅನುದಾನ 99 ಲಕ್ಷ ರೂ. ಹಾಗೂ 15ನೇ ಹಣಕಾಸಿನ 252 ಲಕ್ಷ ರೂ. ಸೇರಿದಂತೆ ಒಟ್ಟು 6.34 ಕೋಟಿ ರೂ. ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸುವ ಸಭೆಯಲ್ಲಿ ಗ್ರಂಥಾಲಯ ತೆರಿಗೆ ಪಾವತಿ ಚರ್ಚೆಗೆ ಬಂದು ಬಿಜೆಪಿ ಸದಸ್ಯರ ಆಕ್ರೋಶ ಕಾರಣವಾಯಿತು.
ಗ್ರಂಥಾಲಯವೇ ಇಲ್ಲ ತೆರಿಗೆ ಏಕೆ?: ಸರ್ಕಾರಕ್ಕೆ ತೆರಿಗೆ ಕೊಡುತ್ತೀರಿ ಎಂದಾದರೇ ಗ್ರಂಥಾಲಯ ಸೌಲಭ್ಯ ಏಕಿಲ್ಲ ಎಂದು ಬಿಜೆಪಿ ಸದಸ್ಯ, ಪ್ರತಿಪಕ್ಷದ ನಾಯಕ ಭೀಮಶಾ ಜಿರೊಳ್ಳಿ, ವೀರಣ್ಣ ಯಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಂಥಾಲಯ ಇರಲಿ ಬಿಡಲಿ ಪ್ರತಿವರ್ಷ ಸರ್ಕಾರಕ್ಕೆ ತೆರಿಗೆ ಕಟ್ಟಲೇಬೇಕು ಎಂದು ಮುಖ್ಯಾಧಿಕಾರಿ ಕಾಶೀನಾಥ ಧನ್ನಿ ಉತ್ತರಿಸಿ ಪೇಚಿಗೆ ಸಿಲುಕಿದರು.
ಕುಡಿಯುವ ನೀರಿನ ನಿರ್ವಹಣೆಗೆ ಪ್ರತಿವರ್ಷ ಹತ್ತು ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೂ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ನೀರು ಶುದ್ಧೀಕರಣ ಘಟಕದಲ್ಲಿ ಬ್ಲೀಚಿಂಗ್ ಪೌಡರ್, ಪಿಒಸಿ ಪೌಡರ್ ಮತ್ತು ಆಲಂ ಸೇರಿದಂತೆ ಇತರ ಬಳಕೆ ದಾಸ್ತಾನು ಖರೀದಿಸದೆ ಹಣ ಲೂಟಿ ಮಾಡಲಾಗುತ್ತಿದೆ. ನೀರಿನಲ್ಲಿ ಮಿಶ್ರಣ ಮಾಡುವ ರಸಾಯನಿಕ ಬಳಕೆ ಕುರಿತು ಸಿಬ್ಬಂದಿಗೆ ತರಬೇತಿಯಿಲ್ಲ. ಕಲುಷಿತ ನೀರು ಕುಡಿದು ಜನರಿಗೆ ತೊಂದರೆಯಾದರೆ ಪುರಸಭೆಯೇ
ಹೊಣೆ ಎಂದು ಬಿಜೆಪಿಯ ಕಿಶನ್ ಜಧವ, ವೀರಣ್ಣ ಯಾರಿ ಎಚ್ಚರಿಕೆ ನೀಡಿದರು. ಇದೇ ವೇಳೆ ಜೆಇ ಅಶೋಕ ಪುಟ್‌ಪಾಕ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು.
ಮುಖ್ಯರಸ್ತೆ ಅಭಿವೃದ್ಧಿ ಅವೈಜ್ಞಾನಿಕ: ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಮುಖ್ಯ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಕೆಳಗಡೆ ಉತ್ತಮ ಸಿಸಿ ರಸ್ತೆಯಿದ್ದರೂ ಮತ್ತಷ್ಟು ಎತ್ತರದ ಸಿಸಿ ರಸ್ತೆ ನಿರ್ಮಿಸುತ್ತಿರುವುದು ಯಾವ ಕಾರಣಕ್ಕಾಗಿ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು. ಅಭಿವೃದ್ಧಿ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ಲಪಟಾಯಿಸುವ ಹುನ್ನಾರ ಅಡಗಿದೆ. ಕೂಡಲೇ ಕಾಂಕ್ರಿಟ್ ರಸ್ತೆ ಸ್ಥಗಿತಗೊಳಿಸಿ ಡಾಂಬರೀಕರಣಕ್ಕೆ ಮುಂದಾಗಬೇಕು. ರಸ್ತೆಯುದ್ದಕ್ಕೂ ಹಾಕಲಾಗಿರುವ ಜಲ್ಲಿಕಲ್ಲು, ಮರಳಿನ ರಾಶಿ ಸ್ಥಳಾಂತರಿಸಬೇಕು. ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿಯನ್ನು ಆಗ್ರಹಿಸಿದರು.
ಪಟ್ಟಣಕ್ಕೆ ಮಂಜೂರಾಗಿದ್ದ ವಿವಿಧ ವೃತ್ತಗಳ ಐದು ಮಿನಿ ಬಸ್ ನಿಲ್ದಾಣಗಳನ್ನು ಸ್ಥಾಪಿಸಲು ಕಾಂಗ್ರೆಸ್ ಕಾರ್ಯಕರ್ತರೇ ಅಡ್ಡಿಪಡಿಸಿದ್ದಾರೆ ಎಂದು ಗೊತ್ತಾಗಿದೆ. ಶಾಸಕ ಪ್ರಿಯಾಂಕ್ ಖರ್ಗೆ ನಾನು ಅಭಿವೃದ್ಧಿಪರ ಎನ್ನುತ್ತಾರೆ. ಆದರೆ ಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯರೇ ಬಸ್ ನಿಲ್ದಾಣ ಅಭಿವೃದ್ಧಿ ವಿರೋ ಧಿಸಿದ್ದಾರೆ ಎಂದು ಬಿಜೆಪಿಯ ವೀರಣ್ಣ ಯಾರಿ ವ್ಯಂಗ್ಯವಾಡಿದರು.
ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಮುಖ್ಯಾಧಿ ಕಾರಿ ಕಾಶೀನಾಥ ಧನ್ನಿ, ಸಮುದಾಯ ಸಂಘಟನಾ ಧಿಕಾರಿ ಚಂದ್ರಕಾಂತ ಪಾಟೀಲ, ಕಂದಾಯ ಅಧಿಕಾರಿ ಎ.ಪಂಕಜಾ, ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕಿ ಲತಾಮಣಿ, ಲೆಕ್ಕಾಧಿಕಾರಿ ಕೆ.ವಿರೂಪಾಕ್ಷಿ, ನೂಡಲ್ ಅಭಿಯಂತರ ಮನೋಜಕುಮಾರ ಹಿರೋಳಿ, ಮಲ್ಲಿಕಾರ್ಜುನ ಯಳಸಂಗಿ, ಬಸವರಾಜ ಪೂಜಾರಿ, ಕಾಂಗ್ರೆಸ್‌ನ ಮಲ್ಲಯ್ಯ ಗುತ್ತೇದಾರ, ಶರಣು ನಾಟೇಕರ, ಮಹ್ಮದ್ ಗೌಸ್, ಮೈನಾಬಾಯಿ ರಾಠೊಡ, ಸುಗಂದಾ ಜೈಗಂಗಾ, ಗುಜ್ಜಾಬಾಯಿ ಸಿಂಗೆ, ಅಫ್ಸರಾಬೇಗಂ, ಬಿಜೆಪಿಯ ಭೀಮರಾಯ ನಾಯ್ಕೋಡಿ,
ರವಿ ಜಾಧವ ಪಾಲ್ಗೊಂಡಿದ್ದರು. ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ ಕ್ರಿಯಾಯೋಜನೆ ಮಂಡಿಸಿದರು.